Saturday, November 2, 2024

ಸತ್ಯ | ನ್ಯಾಯ |ಧರ್ಮ

ಗಂಡ ಹೆಂಡತಿ, ಒಬ್ಬರು ಇನ್ನೊಬ್ಬರ ಖಾಸಗಿ ಬದುಕಿನ ಕುರಿತು ಬೇಹುಗಾರಿಕೆ ನಡೆಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಮಧುರೈ: ವಿವಾಹಿತ ದಂಪತಿಗಳಲ್ಲಿ ಪತಿಯಂತೆ ಪತ್ನಿಗೂ ವೈಯಕ್ತಿಕ ಖಾಸಗಿತನವಿದ್ದು, ಅದು ಅವರ ಮೂಲಭೂತ ಹಕ್ಕು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಬುಧವಾರ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಗಂಡ ಸಲ್ಲಿಸಿದ ಹೆಂಡತಿಯ ಕರೆ ದಾಖಲೆಗಳ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸಲು ನಿರಾಕರಿಸಿದೆ. ವ್ಯಭಿಚಾರ ಮತ್ತು ಕ್ರೌರ್ಯವನ್ನು ಮಾಡುತ್ತಿರುವ ತನ್ನ ಹೆಂಡತಿಯಿಂದ ವಿಚ್ಛೇದನವನ್ನು ಕೊಡಿಸಬೇಕು ಎಂದು ಗಂಡ ಈ ಪ್ರಕರಣದಲ್ಲಿ ಕೋರ್ಟ್‌ ಮೆಟ್ಟಿಲು ಹತ್ತಿದ್ದ. ಆದರೆ ಕೋರ್ಟು ವೈವಾಹಿಕ ಖಾಸಗಿತನವು ವೈಯಕ್ತಿಕ ಖಾಸಗಿತನದ ಹಕ್ಕಿನೊಳಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

ಈ ಹಕ್ಕನ್ನು ಉಲ್ಲಂಘಿಸಿ ಪಡೆದ ಯಾವುದೇ ದಾಖಲೆಯನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೆಂಡತಿಯ ವೈಯಕ್ತಿಕ ಗೌಪ್ಯತೆಯ ಮಾಹಿತಿಯನ್ನು ಅವಳ ಅರಿವಿಗೆ ಬಾರದಂತೆ ಮತ್ತು ಒಪ್ಪಿಗೆ ಪಡೆಯದೆ ಸ್ವಾಧೀನಪಡಿಸಿಕೊಳ್ಳುವುದನ್ನು ಹಾನಿಕರವಲ್ಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಗಂಡ ಹೆಂಡತಿಯ ಮೇಲೆ ಕಣ್ಣಿಡಬಾರದು ಮತ್ತು ಹೆಂಡತಿ ಗಂಡನ ಮೇಲೆ ಕಣ್ಣಿಡಬಾರದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣಕ್ಕೆ ಸಾಕ್ಷಿಯಾಗಿ ಪತಿ ಸಲ್ಲಿಸಿರುವ ಕರೆ ದಾಖಲೆಗಳನ್ನು ಅನುಮತಿಸಬೇಡಿ ಎಂದು ಹೆಂಡತಿ ತಮಿಳುನಾಡಿನ ಪರಮಕುಡಿ ಸಬ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆದರೆ ಸಬ್ ಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಕರೆ ದಾಖಲೆಗಳನ್ನು ರಹಸ್ಯವಾಗಿ ಪಡೆಯುವ ಮೂಲಕ ಅವರು ತಮ್ಮ ಪತ್ನಿಯ ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದ್ದಾರೆ ಮತ್ತು ದಾಖಲೆಗಳನ್ನು ಸಾಕ್ಷಿಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಗಂಡಸರಂತೆ ಹೆಂಗಸರಿಗೂ ಖಾಸಗಿ ಬದುಕಿನ ಹಕ್ಕಿರುತ್ತದೆ. ತಮ್ಮ ವೈಯಕ್ತಿಕ ವಿಷಯಗಳಲ್ಲಿ ಇತರರು ಮಧ್ಯಪ್ರವೇಶಿಸುವುದನ್ನು ಬಯಸದಿರಲು ಅವರಿಗೆ ಹಕ್ಕಿದೆ ಎಂದು ಅದು ವಿವರಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page