Saturday, June 15, 2024

ಸತ್ಯ | ನ್ಯಾಯ |ಧರ್ಮ

  ಮುಚ್ಚಿದ ಆನೆ ದಾರಿ | ದಿಕ್ಕೆಟ್ಟ ಆನೆಗಳು

ಮನುಷ್ಯನ ನಾನಾ ತರದ ಚಟುವಟಿಕೆಗಳಿಂದಾಗಿ ಆನೆಗಳ ವಾಸಸ್ಥಾನಗಳು ನಾಶವಾಗಿವೆ. ಆನೆದಾರಿಗಳು ಮುಚ್ಚಿವೆ ಇಲ್ಲವೇ ತುಂಡರಿಸಲ್ಪಟ್ಟಿವೆ. ಇದರಿಂದಾಗಿ ಆನೆಗಳು ದಿಕ್ಕೆಟ್ಟಿವೆ. ಸಾಲದೆಂಬಂತೆ ಅವುಗಳು ಇರುವ ಜಾಗದಲ್ಲೇ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಅವು  ಆಹಾರ  ಹುಡುಕುತ್ತ ಎಲ್ಲೆಂದರಲ್ಲಿ ಬರುತ್ತವೆ ಪ್ರಸಾದ್‌ ರಕ್ಷಿದಿ

ಸಾವಿರಾರು ವರ್ಷಗಳಿಂದ ಪಶ್ಚಿಮ ಘಟ್ಟಗಳು ಆನೆಗಳ ವಾಸಸ್ಥಾನವೇ. ಅವು ಅಲ್ಲಲ್ಲಿ ತಮ್ಮ  ನೆಲೆಗಳನ್ನು ಮಾಡಿಕೊಂಡಿವೆ.  ಅವುಗಳು ಮನುಷ್ಯರು ಕಟ್ಟಿಕೊಂಡ ಸಣ್ಣ ಸಣ್ಣ ಸಣ್ಣ ಸಂಸ್ಥಾನಗಳಂತೆ. ಅಲ್ಲಿಂದ ಅವು ನಿಗದಿತ ಕಾಲದಲ್ಲಿ ತಮ್ಮ ಇನ್ನೊಂದು  ಆವಾಸಕ್ಕೆ ಹೋಗುತ್ತವೆ. ಅಲ್ಲಿ ಕೆಲವು ಕಾಲ ಇದ್ದು ತಮ್ಮ ಮೊದಲಿನ ನೆಲೆಗೆ ವಾಪಾಸಾಗುತ್ತವೆ. ಇದು ಒಂದು ನಿಗದಿತ ಅವಧಿಯಲ್ಲಿ ಪುನರಾವರ್ತನೆಯಾಗುತ್ತದೆ. ಅದು ಕೆಲವು ಕಡೆ ವರ್ಷಕ್ಕೊಮ್ಮೆ ಆಗಿರಬಹುದು ಅಥವಾ ವರ್ಷಕ್ಕೆ ಎರಡು ಬಾರಿ ಇರಬಹುದು. ಹೀಗೆ ಅವುಗಳು ತಮ್ಮ ನೆಲೆಯಿಂದ ಇನ್ನೊಂದು ನೆಲೆಗೆ ಸಂಚರಿಸುವ ಹಾದಿಯನ್ನು “ಆನೆದಾರಿ” (ಎಲಿಫೆಂಟ್ ಕಾರಿಡಾರ್) ಎನ್ನುತ್ತೇವೆ. ಆನೆಗಳ ನೆಲೆ ಸ್ವಲ್ಪ ವಿಸ್ತಾರವಾಗಿದ್ದಾಗಿರುತ್ತದೆ. ಒಂದು ಆನೆಗೆ ದಿನಕ್ಕೆ ಸುಮಾರು  ಇನ್ನೂರೈವತ್ತು ಕಿಲೋ ಆಹಾರ ಬೇಕು. ಅದಕ್ಕಾಗಿ ಅದು ಸುಮಾರು ಹದಿನೈದು ಕಿಲೋಮೀಟರ್ ಗಳಷ್ಟು ಸಂಚರಿಸುತ್ತದೆ. ಇದರಿಂದಾಗಿ ಒಂದೇ ಕಡೆ ಸಸ್ಯ ನಾಶವಾಗುವುದು ತಪ್ಪುತ್ತದೆ. ಅಲ್ಲದೆ ಆನೆಯನ್ನು ಹಿಂಬಾಲಿಸಿ ಆಹಾರ ಸಂಪಾದಿಸುವ ಅನೇಕ ಜೀವಿಗಳಿಗೂ ಆಹಾರ ದೊರೆಯುತ್ತದೆ. ಇದು ಪರಿಸರದಲ್ಲಿ ಅಂತರ್ಗತವಾಗಿರುವ ಸಹಜ ಸಮತೋಲನ ವ್ಯವಸ್ಥೆಯಾಗಿದೆ. ಆನೆ ತನ್ನ ಆವಾಸ ಸ್ಥಾನವನ್ನು ಯಾವ ಕಾರಣಕ್ಕೂ ಬಿಟ್ಟುಕೊಡದು. ಅದು ತನ್ನ ಗಡಿಗಳನ್ನು ಗುರುತಿಸಿಕೊಂಡಿರುತ್ತದೆ. ಒಂದು ವೇಳೆ ಮನುಷ್ಯ ನೆಲೆಯಲ್ಲಿ ಬಂದು ತನ್ನ ಇರುವಿಕೆಯನ್ನು ಸಾಧಿಸಿದರೂ ಅದು ತನ್ನ ನೆಲೆಯನ್ನು ಬಿಟ್ಟುಕೊಡದು. ಪಕ್ಕದಲ್ಲಿ ವಿಸ್ತಾರವಾದ ಬೇರೆ ಕಾಡು ಇದ್ದರೂ ಸಹ ಅದು ತನ್ನ ಮೂಲನೆಲೆಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ಆನೆಗಳ ವಿಶಿಷ್ಟ ಗುಣ. ಇದನ್ನು ಅರಿಯದೆ ನಾವು ಆನೆಗಳನ್ನು ಸ್ಥಳಾಂತರಿಸುವುದಾಗಲೀ, ಬೇರೆ ನೆಲೆಗಳನ್ನು ವ್ಯವಸ್ಥೆ ಮಾಡುವುದಾಗಲೀ ಮಾಡಿದರೆ ಅವು ಹೊಂದಿಕೊಳ್ಳವುದಿಲ್ಲ. ಈ ರೀತಿ ಮಾಡಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾದಲ್ಲಿ ಆದ ದುರಂತ ನಮ್ಮ ಕಣ್ಣಮುಂದೆಯೇ ಇದೆ.

ಆನೆಗಳ ಮೆದುಳಿನ ಗಾತ್ರವೂ ಹಿರಿದಾದದ್ದು. ಅವುಗಳ ನೆನಪಿನ ಶಕ್ತಿಯೂ ಆಗಾಧವಾದುದು. ಇದು ಪೀಳಿಗೆ ಪೀಳಿಗೆಗೆ ಹರಿದು ಬರುತ್ತದೆ. ಆದ್ದರಿಂದಲೇ ಇವು ತುಂಬ ಭಾವನಾತ್ಮಕ ಜೀವಿಗಳೂ ಕೂಡಾ. ಮನುಷ್ಯನ ಜೊತೆಗೂ ಇವು ಭಾವನಾತ್ಮಕ ಸಂಬಂಧವನ್ನು ಹೊಂದುವುದನ್ನು ನಾವು ಕಾಣಬಹುದು. ಆನೆಗಳ ಇನ್ನೊಂದು ವಿಶೇಷ ಶಕ್ತಿಯನ್ನೂ ವಿಜ್ಞಾನಿಗಳು ಈಗ ಗುರುತಿಸಿದ್ದಾರೆ. ಅದು ಅವುಗಳ ಸಂವಹನ ಶಕ್ತಿ. ಆನೆಗಳು ತಮ್ಮ ತಮ್ಮ ಸೊಂಡಿಲು, ಕಾಲುಗಳನ್ನು ಬಳಸಿ ಹೊರಡಿಸುವ ಧ್ವನಿ ತರಂಗಗಳಿಂದ ಮೂವತ್ತು ಕಿಲೋಮೀಟರ್ ದೂರದವರೆಗೂ  ಪರಸ್ಪರ ಸಂಪರ್ಕ ಸಾಧಿಸಬಲ್ಲವು ಎನ್ನುತ್ತಾರೆ.

ಇವೆಲ್ಲ ಕಾರಣಗಳಿಂದ  ಆನೆ ಭೂಮಿಯ ಮೇಲಿನ ಜೀವಿಗಳಲ್ಲಿ ಬಹಳ ವಿಶೇಷವಾದ, ವಿಭಿನ್ನವಾದ ಸ್ಥಾನ ಹೊಂದಿದೆ.

ಮನುಷ್ಯನ ನಾನಾ ತರದ ಚಟುವಟಿಕೆಗಳಿಂದಾಗಿ ಆನೆಗಳ ವಾಸಸ್ಥಾನಗಳು ನಾಶವಾಗಿವೆ. ಆನೆದಾರಿಗಳು ಮುಚ್ಚಿವೆ ಇಲ್ಲವೇ ತುಂಡರಿಸಲ್ಪಟ್ಟಿವೆ. ಇದರಿಂದಾಗಿ ಆನೆಗಳು ದಿಕ್ಕೆಟ್ಟಿವೆ. ಸಾಲದೆಂಬಂತೆ ಅವುಗಳು ಇರುವ ಜಾಗದಲ್ಲೇ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಅವು  ಆಹಾರ  ಹುಡುಕುತ್ತ ಎಲ್ಲೆಂದರಲ್ಲಿ ಬರುತ್ತವೆ. ಮನುಷ್ಯ ಕೃಷಿಮಾಡಿದ ಬಾಳೆ, ಭತ್ತ, ಕಬ್ಬಿನ ಗದ್ದೆಗಳು, ತೋಟಗಳು ಅವುಗಳಿಗೆ ತುತ್ತಾಗುತ್ತಿವೆ.

ಇಲ್ಲಿ ಒಂದು ವಿಚಾರ ಗಮನಿಸಿಬೇಕು. ಹೀಗೆ ಸ್ಥಳಾಂತರಗೊಂಡು ಆಹಾರಕ್ಕಾಗಿ ಈಗ ಆನೆಗಳು ಮತ್ತು ಇತರ ಪ್ರಾಣಿಗಳು ಧಾಳಿ ಮಾಡುತ್ತಿರುವ ಸ್ಥಳಗಳಲ್ಲಿ ಹಲವಾರು ಪ್ರದೇಶಗಳು ಈ ಪ್ರಾಣಿಗಳ ಪರಂಪರಾಗತ ಆವಾಸವಾಗಲೀ, ದಾರಿಯಾಗಲೀ ಅಲ್ಲ. ಬದಲಿಗೆ  ಕೃಷಿ ವಲಯಗಳು. ಕಳೆದ ಶತಮಾನದಿಂದಲೂ ಅಲ್ಲಿ ಆನೆಗಳ ಉಪಟಳ ಎನ್ನುವ ಸಂಗತಿಯೇ ಅರಿಯದ ಪ್ರದೇಶಗಳು ಅವು. ಯಾರೋ ಎಲ್ಲಿಯೋ ಮಾಡಿದ ತಪ್ಪಿಗಾಗಿ ಈ ಪ್ರದೇಶಗಳ ಜನರು ತಮ್ಮ ಬೆಳೆನಾಶವನ್ನು ಅನುಭವಿಸುತ್ತಿದ್ದಾರೆ. ಜೀವ ಕಳೆದುಕೊಳ್ಳುತ್ತಿದ್ದಾರೆ. ಕೊಡಗು ಮತ್ತು ಹಾಸನ ಜಿಲ್ಲೆಯ ಹಲವು ಭಾಗಗಳು ಈ ರೀತಿಯ ಪ್ರದೇಶಗಳು. ಜನರು ಅಲ್ಲಿ ಯಾಕೆ ಕೃಷಿ ಮಾಡಬೇಕು? ಎಂದು ಕೇಳುವವರಿಗೆ ಇಂತಹ ವಿಚಾರಗಳು ತಿಳಿಯವು.

ಪ್ರಸಾದ್‌ ರಕ್ಷಿದಿ

ಪರಿಸರ ಬರಹಗಾರರು  

ಇದನ್ನೂ ಓದಿ-  ಪ್ರಾಣಿಗಳು ನೀಡುವ ತೊಂದರೆಗಳಿಗೆ ಮನುಷ್ಯರೇ ಕಾರಣ

Related Articles

ಇತ್ತೀಚಿನ ಸುದ್ದಿಗಳು