ಬೆಂಗಳೂರು: ಕೋವಿಡ್-19 ಲಸಿಕೆಯಿಂದ ಹಠಾತ್ ಸಾವು ಸಂಭವಿಸಿಲ್ಲ, ಬದಲಿಗೆ ಸಾವಿನ ಪ್ರಮಾಣವನ್ನು ಅದನ್ನು ಕಡಿಮೆ ಮಾಡಿದೆ ಎಂದು 2021 ರಿಂದ ಭಾರತದಲ್ಲಿ ಯುವಜನತೆಯ ಹಠಾತ್ ಸಾವಿನ ಹೆಚ್ಚಳವನ್ನು ಅಧ್ಯಯನ ಮಾಡುತ್ತಿರುವ Indian Council of Medical Research – ICMR ತಿಳಿಸಿದೆ.
ನವೆಂಬರ್ 21 ರಂದು ಪ್ರಕಟವಾದ ಈ ವರದಿಯ ಪ್ರಕಾರ 1.5 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಭಾರತದ ಆರೋಗ್ಯವಂತ ಯುವ ವಯಸ್ಕರಲ್ಲಿ ಹಠಾತ್ ಮತ್ತು ಅನಿರೀಕ್ಷಿತ ಸಾವುಗಳ ಕಾರಣವನ್ನು ಅರ್ಥೈಸಲು ಪ್ರಯತ್ನಿಸಲಾಗಿದೆ.
ಅಧ್ಯಯನದ ಕೆಲವು ಪ್ರಮುಖ ಅಂಶಗಳು:
ಎರಡು ಡೋಸ್‌ಗಳ COVID-19 ಲಸಿಕೆಯು ಹಠಾತ್ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡಿದೆ, ಆದರೆ ಒಂದು ಡೋಸ್ ಇದನ್ನು ಮಾಡಲಿಲ್ಲ. ಕೋವಿಡ್ ವ್ಯಾಕ್ಸಿನೇಷನ್‌ನಿಂದ ಈ ಸಾವುಗಳು ಸಂಬಂಧಿಸಿಲ್ಲ, ಬದಲಿಗೆ
- COVID-19 ಪೂರ್ವದ ಆರೋಗ್ಯ ಸಮಸ್ಯೆಗಳು (Past COVID-19 hospitalisation)
- ಕೌಟುಂಬಿಕವಾಗಿ ಬಂದಿರುವ ಹಠಾತ್ ಸಾವಿನ ಸಾಧ್ಯತೆಗಳು (Family history of sudden deaths)
- ಸಾವಿಗೆ 48 ಗಂಟೆಗಳ ಮೊದಲು ಮಾಡಿದ ಮದ್ಯ ಸೇವನೆ (Binge alcohol drinking 48 hours before death)
- ಡ್ರಗ್ಸ್ ಬಳಕೆ (Use of recreational drug/substance)
- ಸಾವಿಗೆ 48 ಗಂಟೆಗಳ ಮೊದಲು ಅಭ್ಯಾಸವಿಲ್ಲದ ಕಠಿಣ ಕೆಲಸಗಳನ್ನು ಮಾಡಿರುವುದು (Intense unaccustomed activity 48 hours before death)
ಅಧ್ಯಯನದ ಬಗ್ಗೆ:
ಈ ಅಧ್ಯಯನವನ್ನು ಭಾರತದಾದ್ಯಂತ 47 ತೃತೀಯ ಮಟ್ಟದ ಆರೋಗ್ಯ ಕೇಂದ್ರಗಳನ್ನು ಒಳಗೊಂಡು ನಡೆಸಲಾಗಿದೆ. 2021 ಅಕ್ಟೋಬರ್ 1 ಮತ್ತು 31 ಮಾರ್ಚ್ 2023 ರ ನಡುವೆ ಹಠಾತ್ತನೆ ಸಾವನ್ನಪ್ಪಿದ ಆರೋಗ್ಯವಂತ 18-45 ವರ್ಷ ವಯಸ್ಸಿನ 729 ವ್ಯಕ್ತಿಗಳ ಸಾವಿನ ಪ್ರಕರಣಗಳನ್ನು 2916 ನಿಯಂತ್ರಿಸಲಾದ ಪ್ರಕರಣಗಳೊಂದಿಗೆ ವಿಶ್ಲೇಷಿಸಲಾಗಿದೆ.
ವರದಿಯನ್ನು ಇಲ್ಲಿ ಓದಿ: Factors associated with unexplained sudden deaths among adults aged 18-45 years in India – A multicentric matched case–control study
ಕೋವಿಡ್ ಲಸಿಕೆ ಮತ್ತು ಸೋಂಕಿನ ಸ್ಥಿತಿ, ಹಾಗೆಯೇ ಕೋವಿಡ್-19 ನಂತರದ ಪರಿಸ್ಥಿತಿಗಳು, ಹಠಾತ್ ಸಾವನ್ನಪ್ಪಿದವರ ಕುಟುಂಬದ ಇತಿಹಾಸ ಮತ್ತು ಎಲ್ಲಾ ರೋಗಿಗಳ ಜೀವನಶೈಲಿ, ಅಭ್ಯಾಸಗಳಂತಹ ಇತರ ಅಂಶಗಳನ್ನು ವಿಶ್ಲೇಷಿಸಲಾಗಿದೆ.
ಈ ಅಧ್ಯಯನ ಯಾಕೆ ಮುಖ್ಯವಾಗಿತ್ತು?
ಕೋವಿಡ್ ಲಸಿಕೆಗಳನ್ನು ಹಾಕಿದ ನಂತರ, ಇಂತಹ ಹಠಾತ್ ಸಾವಿನ ಪ್ರಮಾಣಗಳು ನಡೆದಾಗ ಲಸಿಕೆಯ ಸುರಕ್ಷತೆಯನ್ನು ಪ್ರಶ್ನೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸಣ್ಣ ಪ್ರಾಯದಲ್ಲಿ ಮರಣಹೊಂದಿದಾಗ ಈ ಚರ್ಚೆ ಗ್ರಾಸವಾಗಿ ನಡೆದಿತ್ತು.
ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಯುವಜನರ ಸಾವಿನ ಪ್ರಮಾಣ ಹೆಚ್ಚಿದಾಗ ಕೋವಿಡ್ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸುವಂತೆ ಮಾತುಗಳು ಕೇಳಿಬರುತ್ತಿದ್ದವು.
ಸದ್ಯ ಐಸಿಎಂಆರ್‌ನ ಈ ಅಧ್ಯಯನ ಇಂತಹ ಹಠಾತ್ ಸಾವಿಗೆ ಲಸಿಕೆಯಲ್ಲ, ಬದಲಾಗಿ ಜೀವನಶೈಲಿ, ಆಹಾರ ಮತ್ತು ವ್ಯಾಯಾಮಗಳು ಇದರಲ್ಲಿ ಪಾತ್ರವನ್ನು ವಹಿಸಿವೆ ಎಂದು ಹೇಳಿದೆ.