Saturday, June 15, 2024

ಸತ್ಯ | ನ್ಯಾಯ |ಧರ್ಮ

ನಿನ್ನ ಬಾಯಿಗೆ ದನ ಮುಟ್ಟಲಿ’ – ದನ ಅಪ್ಪಿಕೋ ದಿನದ ಬಗ್ಗೆ ಕರಾವಳಿ ಹಿಂದೂಗಳ ಆಕ್ಷೇಪ

ಫೆಬ್ರವರಿ 14 ರ ಪ್ರೇಮಿಗಳ ದಿನವನ್ನು ‘ದನ ಅಪ್ಪಿಕೋ’ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದು ಹಾಸ್ಯಾಸ್ಪದ ಮಾತ್ರವಲ್ಲ, ಹಿಂದೂಗಳ ನಂಬಿಕೆಗೆ ವ್ಯತಿರಿಕ್ತವಾಗಿದೆ. ಕರಾವಳಿಯ ಹಿಂದೂಗಳ ನಂಬಿಕೆಯ ಪ್ರಕಾರ ದನ ಶುಭಸೂಚಕವಲ್ಲ !

‘ನಿನ್ನ ಬಾಯಿಗು ಪೆತ್ತ ಮುಟ್ಟರೆ’ ಎಂಬ ಬೈಗುಳ ಗೊತ್ತಿಲ್ಲದ ಕರಾವಳಿಯ ಜನ ಇರಲಿಕ್ಕಿಲ್ಲ. ಪರಸ್ಪರ ಜಗಳವಾಡುವ ಸಂದರ್ಭದಲ್ಲಿ ಯಾರಾದರೂ ಮಿತಿಮಿರಿ ಮಾತನಾಡಿದರೆ ‘ನಿನ್ನ ಬಾಯಿಗೆ ದನ ಮುಟ್ಟಲಿ’ ಎಂದು ಬೈಯುತ್ತಾರೆ. ಅಂದರೆ ದನ ಮನುಷ್ಯನ ಬಾಯಿಯನ್ನು ಮುಟ್ಟಿದರೆ ಮನುಷ್ಯನ ನಾಲಗೆ ಹೊರಳಾಡಲ್ಲ ಅಥವಾ ಮಾತು ನಿಂತು ಹೋಗುತ್ತದೆ ಎಂಬುದು ತುಳುವರ ನಂಬಿಕೆ.

ಈಗಲೂ ಕರಾವಳಿಗರು ಪುಟ್ಟ ಮಗುವನ್ನು ದನ ಮುಟ್ಟಲು ಬಿಡುವುದಿಲ್ಲ. ದನವನ್ನು ಅಪ್ಪಿಕೊಳ್ಳುವುದು ಬಿಡಿ, ಇನ್ನೂ ಮಾತು ಬಾರದ ಪುಟ್ಟ ಮಕ್ಕಳು ದನವನ್ನು ಮುಟ್ಟಿದರೆ ಮಾತೇ ಬರುವುದಿಲ್ಲ ಎಂಬ ನಂಬಿಕೆ ತುಳುವರಲ್ಲಿದೆ. ಇವೆಲ್ಲಾ ಮೂಢನಂಬಿಕೆಗಳೇ ಆಗಿರಬಹುದು. ಮೂಢನಂಬಿಕೆಗಳೇ ಧರ್ಮದ ಮೂಲವಾಗಿರುವಾಗ ಅವರ ಧರ್ಮದ ಮೂಲವನ್ನು ಅವರೇ ಮುರಿಯುವುದು ಎಷ್ಟು ಸರಿ ? ಒಂದೋ ದನವನ್ನು ದನವನ್ನಾಗಿ ನೋಡಿ. ದನವನ್ನು ಹಿಂದೂ ಧರ್ಮವಾಗಿ ನೋಡಿದಾಗ ಕರಾವಳಿಯ ಹಿಂದೂ ಧರ್ಮಿಯರ ಈ ಭಾವನೆಗೂ ಬೆಲೆ ಕೊಡಬೇಕಾಗುತ್ತದೆಯಲ್ಲವೇ ?

ಸಾವಿನ ಬಳಿಕ ನಡೆಯುವ ಉತ್ತರ ಕ್ರಿಯೆಯಲ್ಲಿ ‘ಕಕ್ಕೆಗು ನುಪ್ಪು ದೀಪುನಿ’ ಎಂಬ ಪ್ರಮುಖ ನಿಯಮವಿದೆ. ಉತ್ತರಕ್ರಿಯೆಯ ದಿನ ಮೃತನ ಇಷ್ಟದ ಆಹಾರವನ್ನು ಎಲೆಯಲ್ಲಿಟ್ಟು ಕಾಗೆಗೆ ಅರ್ಪಿಸಲಾಗುತ್ತದೆ. ಕಾಗೆ ಬಂದು ತಿಂದ ಬಳಿಕವೇ ಉತ್ತರಕ್ರಿಯೆಯ ಊಟವನ್ನು ಜನರು ಮಾಡಬಹುದು. ಒಂದು ವೇಳೆ ಕಾಗೆ ಬಂದು ತಿನ್ನದೇ ಇದ್ದರೆ ಏನು ಮಾಡಬೇಕು ? ಆಗ ಊಟ ಬಡಿಸಿದ ಎಲೆಯನ್ನು ದನಕ್ಕೆ ತಿನ್ನಿಸಿ ಮುಂದಿನ ಕಾರ್ಯಕ್ರಮ ನೆರವೇರಿಸುತ್ತಾರೆ. ಕರಾವಳಿಯಲ್ಲಿ ಕಾಗೆ ಹೇಗೋ ದನವೂ ಹಾಗೆಯೇ !

ಕರಾವಳಿಯಲ್ಲಿ ದನ ದೇವರಲ್ಲ. ದನಕ್ಕೆ ಪ್ರತ್ಯೇಕ ಪೂಜೆಯಾಗಲೀ, ಜನಪದೀಯ ಪ್ರಾಮುಖ್ಯತೆಯಾಗಲೀ ಇಲ್ಲ. ದೈವದ ನುಡಿ/ಮದಿಪು/ಬೀರ/ಪಾಡ್ದನದಲ್ಲಿ ದನವನ್ನು ಕರೆಯುವ ಅಥವಾ ‘ಮಾನಾವುನ’ ಪದಗಳು ಇಲ್ಲ. ದೈವದ ಪಾಡ್ದನ ಮತ್ತು ನುಡಿ ಮತ್ತು ಮದಿಪು ಪ್ರಕಾರ ದನವನ್ನು ಕಾಯುವುದು ನಮ್ಮ ದೈವಗಳು.

“ಎನ್ನ ಸಂಸಾರ,
ಪೂತ ಇಸಲ್ ತೋಜಾಯಿನಕ್ಲೆಗ್ ಪೂತ ರಾಶಿ ತೋಜಾಯೇ
ನೀರ್ ಕೊರ್ನಲ್ಪ ಪೇರ್ ಉರ್ಕಾಯೇ
ಕೈ ಮುಗಿನಲ್ಪ ತಿಗಲೆ ಕೊರ್ದು ಕಾತೆ
ಪೆತ್ತ- ಕೈ ಕಂಜಿನ್ ಕಣ್ ದೀದ್ ಕಾತು ಕೊರ್ಯೆ
ಬುಲೆ -ಸಲೆನ್ ಯೆರ್ಕಾದು ಕೊರಿಯೇ .
ಸಂಸಾರೋಗು ಬರ್ಪಿಂಚಿ ದಶ ದೋಶೋನು
ದಶದಿಕ್ಕುಗು ಪಟ್ಟುದು ಕೊರ್ಪಿನಂಚಿನ ಮಾಯೆ ಯಾನ್.
ರುಂಡದ ಎಚ್ಚಿಡ್ ರುಂಡ
ತರೆತ್ತ ಎಚ್ಚಿಡ್ ತರೆ ದೀಯೊಂದು
ಮಾಯೊಡು ಬತ್ತಿನ ಶಕ್ತಿ ಯಾನ್”
ಎಂದು ದೈವ ಹೇಳುತ್ತದೆ.
‘ಪೆತ್ತ- ಕೈ ಕಂಜಿನ್ ಕಣ್ ದೀದ್ ಕಾತು ಕೊರ್ಯೆ’ ಎಂದರೆ ದನ ಕರುಗಳನ್ನು ಕಣ್ಣಿಟ್ಟು ಕಾವಲಾಗಿ ನೋಡಿಕೊಂಡಿದ್ದೇನೆ. ಮೂಲತಃ ಕರಾವಳಿಯ ದೈವಾರಾಧನೆಯೆಂದರೆ ದನ, ಕರು, ಕೋಣ, ತೋಟ, ಗದ್ದೆಗಳನ್ನು ಕಾಯುವ ದೈವವಷ್ಟೆ. ಇತ್ತೀಚೆಗೆ ಈ ನಂಬಿಕೆ ಇನ್ನಷ್ಟೂ ವಿಸ್ತಾರ ಸ್ವರೂಪ ಪಡೆದುಕೊಂಡಿದೆ. ಇರಲಿ, ಇಲ್ಲಿ ದನಕರುಗಳನ್ನು ದೈವ ಕಾಪಾಡುತ್ತದೆಯೇ ಹೊರತು ದನವು ದೈವದ ಸಮನಲ್ಲ.

ಕರಾವಳಿಯ ದೈವವು ಕೋಲದ ಸಂದರ್ಭದಲ್ಲಿ ಎಲ್ಲಾ ದೇವರನ್ನು ‘ಕರೆದು ಕೊಂಡಾಡುವ’ ಕ್ರಮವಿದೆ. ಕರಾವಳಿಯಲ್ಲಿ ದನ ದೇವರಾಗಿದ್ದರೆ ಆ ಸಾಲಿನಲ್ಲಿ ದನದ ಉಲ್ಲೇಖವೂ ಇರಬೇಕಿತ್ತು.

“ಮಿತ್ತ್ ಸ್ವಾಮಿನ ದರ್ಮೊನು ಪತೊಂಡೆ. ತಿರ್ತ್ ಭೂಮಿದ ಆದಾರೋನು ಪತೊಂಡೆ… ಮಾಗನೆಡ್ ಮಲ್ಲ ಈಸರ ದೇವೆರೆನ ಚಿತ್ತೊನು ಪತೊಂಡೆ …. ಗುತ್ತು ಬರ್ಕೆದಕುಲೆನ್ ಲೆತ್ತು ಕೊಂಡಾಡೊಂಡೆ… ಮಾಗನೆ ದೇವೆರೆನ ಚಿತ್ತ ತೆಲೆಪಾಯೇ. ನಾಗ ಬೆಮ್ಮೆರೆನ ಸಾರಥಿ ಮಲ್ತೊಂಡೆ. ಪಾಡಿ ಬಿತ್ತ್ ಕೊಡಿಪು ಬರ್ಪಾವೆ … ಮಾದಾಯಿ ಏರುನ್ ಬರ್ಪಾವೆ … ಗೆಂಡದ ಬರ್ಸೋನು ಕರ್ಬೋದ ಕೊಡೆ ಆದ್….. ಕಂಚಿದ ಕೊಟೆಗ್ ಕರ್ಬೋದ ಬೇಲಿ ಆದ್… ಮುಲ್ಲುದ ಪುದೆನ್ ಪೂತ ಪುದೆ ಆದ್ ತುಂಬವೆ…
ನಂಬಿನ ಸಂಸಾರೋನು ಮಾಯೋಡು ಕಾಪುವೆ …. ಮಾಯೋಡು ಕಾಪುವೆ…. ಮಾಯೋಡು ಕಾಪುವೆ …. ಮಾಯದ ಮದಿಪು ಕೊರ್ಪೆ….”
ಇಲ್ಲೆಲ್ಲೂ ದನದ ಉಲ್ಲೇಖವೇ ಬರುವುದಿಲ್ಲ. ದನ ಕೃಷಿಯ ಭಾಗವಾಗಿರುವುದರಿಂದ ಅದನ್ನು ದೈವ ಕಾಯುತ್ತದೆ ಎಂಬ ನಂಬಿಕೆಯಷ್ಟೇ ಇದೆ.

ದನವನ್ನು ಕಾಮಧೇನು ಎಂದೂ, ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ಇವೆರಡೂ ಪೂಜನೀಯವಾದರೆ ಇವರೆಡೂ ಕಾಮಧೇನುವೂ, ಕಲ್ಪವೃಕ್ಷವೂ ಆಗಿರುವುದಿಲ್ಲ. ಕಾಮಧೇನುವೂ, ಕಲ್ಪವೃಕ್ಷವೂ ಆಗಬೇಕಾದರೆ ಬದುಕಿದ್ದಾಗಲೂ, ಸತ್ತ ಬಳಿಕವೂ ಅದರ ಒಂದು ಭಾಗವೂ ವ್ಯರ್ಥವಾಗದೇ ಮನುಷ್ಯನ ಬಳಕೆಗೆ ಯೋಗ್ಯವಾಗಿರಬೇಕು. ಬಳಕೆಯ ತೆಂಗಿನ ಮರ ತನ್ನಷ್ಟಕ್ಕೆ ಗೆದ್ದಲು ಹಿಡಿದು ಸಾಯುವುದಕ್ಕೂ ಮೊದಲೇ ಕಡಿದು ಪಕ್ಕಾಸು ಮಾಡಿ ಮನೆ ಕಟ್ಟುತ್ತೇವೆ. ಸಾಯುವ ದಿನಗಳಿಗೂ ಮೊದಲೇ ದನದ ಚರ್ಮ ಸುಲಿದು ದೈವಕ್ಕೆ ಡೋಲು ಸಿದ್ದಪಡಿಸುತ್ತೇವೆ. ಇದು ಕರಾವಳಿಗರು ಕಲ್ಪವೃಕ್ಷವನ್ನೂ, ಕಾಮಧೇನುವನ್ನೂ ಬಳಸುವ ಪರಿ. ಕೃಷಿ ಪ್ರಧಾನ ಬದುಕಿನಲ್ಲಿ ಯಾವುದು ಪೂಜನೀಯವೋ ಅದು ಆದಾಯ ತರುವುದಿಲ್ಲ. ಹಾಗಾಗಿ ಕೃಷಿಕರಿಗೆ ದನ ಪೂಜನೀಯವಲ್ಲ.

ಒಟ್ಟಾರೆ, ದನವನ್ನು ಅಪ್ಪಿಕೊಳ್ಳುವುದು ಎನ್ನುವ ಚಿಂತನೆಯೇ ಕರಾವಳಿಯ ಕೃಷಿಕ ಹಿಂದೂಗಳ ನಂಬಿಕೆಗೆ ವಿರುದ್ಧವಾದುದು.

  • ನವೀನ್ ಸೂರಿಂಜೆ

Related Articles

ಇತ್ತೀಚಿನ ಸುದ್ದಿಗಳು