ಹಸು ಕಳ್ಳಸಾಗಣೆ ಆರೋಪ : ಇಬ್ಬರು ದಲಿತ ವ್ಯಕ್ತಿಗಳ ತಲೆ ಬೋಳಿಸಿ ಹಲ್ಲೆ, ಪ್ರಕರಣ ದಾಖಲು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಹಸು ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ದಲಿತರ ಮೇಲೆ ಹಲ್ಲೆ ಮಾಡಿ ತಲೆಯನ್ನು ಬಲವಂತವಾಗಿ ಬೋಳಿಸಿದ ಘಟನೆ ನಡೆದಿದ್ದು ಒಂಬತ್ತು ಜನರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಹಲ್ಲೆಗೊಳಗಾದವರು ಒಂದು ಹಸು ಮತ್ತು ಎರಡು ಕರುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಧರಕೋಟೆ ಪೊಲೀಸ್ ವ್ಯಾಪ್ತಿಯ ಖರಿಗುಮ್ಮ ಗ್ರಾಮದಲ್ಲಿ ಗುಂಪೊಂದು ಅವರನ್ನು ಅಡ್ಡಗಟ್ಟಿ 30,000 ರೂ.ಗಳಿಗೆ ಬೇಡಿಕೆ ಇಟ್ಟಿತು. ಹಣ ನೀಡಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿದಾಗ, ಈ ಗುಂಪು ಅವರನ್ನು ಥಳಿಸಿ, ಬಲವಂತವಾಗಿ ತಲೆ ಬೋಳಿಸಿ, ತೆವಳುವಂತೆ ಮಾಡಿ, ಒಳಚರಂಡಿ ನೀರು ಕುಡಿಯುವಂತೆ ಮಾಡಿದರು ಎಂದು ಆರೋಪಿಸಲಾಗಿದೆ. ಹಲ್ಲುಗಳ ನಡುವೆ ಹುಲ್ಲನ್ನು ಬಿಗಿದುಕೊಂಡು ಇಬ್ಬರು ಪುರುಷರು ತೆವಳುತ್ತಿರುವುದನ್ನು ವೀಡಿಯೊ ಮಾಡಿ ಹಂಚಿಕೊಂಡಿದ್ದಾರೆ.

ಈ ಕಿಡಿಗೇಡಿಗಳ ಗುಂಪು ಸಂತ್ರಸ್ಥರಿಂದ 700 ರೂ. ನಗದು ಮತ್ತು ಮೊಬೈಲ್ ಫೋನ್‌ಗಳನ್ನು ಸಹ ಕದ್ದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಧರಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಿಕಾ ಸ್ವೈನ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು