Home ದೇಶ ಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಿ: ಸಿಪಿಐ(ಎಂ) ಆಗ್ರಹ

ಸಿಇಸಿ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಿ: ಸಿಪಿಐ(ಎಂ) ಆಗ್ರಹ

0

ದೆಹಲಿ: ಚುನಾವಣಾ ಆಯೋಗವು (ಇಸಿಐ) ಕೈಗೆತ್ತಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕುರಿತು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಪ್ರಕಟಿಸಿರುವ ಸರಣಿ ವರದಿಗಳು ಚುನಾವಣಾ ಆಯೋಗದ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯೂರೋ ಕಳವಳ ವ್ಯಕ್ತಪಡಿಸಿದೆ.ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷವು, ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಸಿಪಿಐ(ಎಂ), ಇತರೆ ಪ್ರತಿಪಕ್ಷಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳು ವ್ಯಕ್ತಪಡಿಸುತ್ತಿದ್ದ ಅನುಮಾನಗಳಿಗೆ ಈ ತನಿಖಾ ವರದಿಗಳು ಪುಷ್ಟಿ ನೀಡಿವೆ ಎಂದಿದೆ.

ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಇಬ್ಬರು ಚುನಾವಣಾ ಆಯುಕ್ತರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಎಸ್‌ಐಆರ್ ಅನುಷ್ಠಾನಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳಿಗೆ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ಕಾನೂನಿನ ಅನ್ವಯ ಮೂವರೂ ಚುನಾವಣಾ ಆಯುಕ್ತರು ಸಮಾನ ಅಧಿಕಾರ ಹೊಂದಿದ್ದು, ಭಿನ್ನಾಭಿಪ್ರಾಯಗಳನ್ನು ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ಬಗೆಹರಿಸಿಕೊಳ್ಳಬೇಕಾಗುತ್ತದೆ.ಆದರೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಈ ನಿಯಮವನ್ನು ಉಲ್ಲಂಘಿಸಿ, ಜತೆಗಾರ ಆಯುಕ್ತರ ಆಕ್ಷೇಪಣೆಗಳನ್ನು ಕಡೆಗಣಿಸಿ ತಮ್ಮ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ಎಸ್‌ಐಆರ್ ಜಾರಿಯ ಮೂಲಭೂತ ಪ್ರಕ್ರಿಯೆಗಳಲ್ಲೇ ಈ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿವೆ.ಇಡೀ ಪ್ರಕ್ರಿಯೆಯು ಪಾರದರ್ಶಕ ಮತ್ತು ವಿಕೇಂದ್ರೀಕೃತವಾಗಿದೆ ಎಂದು ಸಿಇಸಿ ಜ್ಞಾನೇಶ್ ಕುಮಾರ್ ಇಷ್ಟು ದಿನ ಮಂಡಿಸುತ್ತಿದ್ದ ವಾದಗಳು ಸಂಪೂರ್ಣ ಸುಳ್ಳು ಎಂಬುದು ಈಗ ಬಯಲಾಗಿದೆ ಎಂದು ಪಕ್ಷ ಟೀಕಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಚುನಾವಣಾ ವ್ಯವಸ್ಥೆಯನ್ನು ಅತಿಯಾಗಿ ಕೇಂದ್ರೀಕರಿಸಲಾಗಿದ್ದು, ವಾಸ್ತವದಲ್ಲಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಅಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು ನೋಟಿಸ್‌ಗಳನ್ನು ನೀಡುವಲ್ಲಿ ತೋರಿದ “ಯಾಂತ್ರಿಕ” ಧೋರಣೆಯನ್ನು ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ಎತ್ತಿ ತೋರಿಸಿರುವುದನ್ನು ಪಕ್ಷ ಸ್ಮರಿಸಿದೆ.ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಆಕ್ಷೇಪಣೆಗಳು ಕೇವಲ ಎಸ್‌ಐಆರ್ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿಲ್ಲ; ಅವು ಆಯೋಗದ ಸಾಂಸ್ಥಿಕ ಸಮಗ್ರತೆ, ಪ್ರಜಾಸತ್ತಾತ್ಮಕ ಕಾರ್ಯವೈಖರಿ, ಪಾರದರ್ಶಕತೆ, ಅತಿಯಾದ ಕೇಂದ್ರೀಕರಣ ಹಾಗೂ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ರಕ್ಷಣೆಯಂತಹ ಮಹತ್ವದ ವಿಷಯಗಳಿಗೆ ಸಂಬಂಧಿಸಿವೆ ಎಂದು ಪೊಲಿಟ್‌ಬ್ಯೂರೋ ತಿಳಿಸಿದೆ.

ನಿಷ್ಪಕ್ಷಪಾತ ಸಂಸ್ಥೆಯಾಗಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೇ ಈಗ ಅಪಾಯಕ್ಕೆ ಸಿಲುಕಿದ್ದು, ಇಂತಹ ಆಯೋಗದ ಮೇಲೆ ಜನರಿಗೆ ನಂಬಿಕೆ ಇಲ್ಲದಂತಾಗಿದೆ; ಇದಕ್ಕೆ ಸಿಇಸಿ ಜ್ಞಾನೇಶ್ ಕುಮಾರ್ ಅವರೇ ನೇರ ಹೊಣೆ ಎಂದು ಪಕ್ಷ ಹೇಳಿದೆ. ಆದ್ದರಿಂದ ಅವರು ತಕ್ಷಣವೇ ತಮ್ಮ ಸ್ಥಾನದಲ್ಲಿ ಮುಂದುವರಿಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯೂರೋ ಒತ್ತಾಯಿಸಿದೆ. ಚುನಾವಣಾ ಆಯೋಗದ ಸಮಗ್ರತೆ ಮತ್ತು ಪ್ರಜಾಸತ್ತಾತ್ಮಕ ಕಾರ್ಯವೈಖರಿಯನ್ನು ಮರುಸ್ಥಾಪಿಸುವುದರೊಂದಿಗೆ, ಆಯುಕ್ತರ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಪ್ರಸ್ತುತ ಕಾಯ್ದೆಯನ್ನು ರದ್ದುಪಡಿಸಬೇಕು ಹಾಗೂ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಆಯ್ಕೆ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಒಪ್ಪಿಕೊಂಡು ಹೊಸ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಪಕ್ಷ ಒತ್ತಾಯಿಸಿದೆ.

You cannot copy content of this page

Exit mobile version