Home ಬೆಂಗಳೂರು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ ಪ್ರಸ್ತಾಪಕ್ಕೆ ಸಿಪಿಐ(ಎಂ) ಬೆಂಬಲ

ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ ಪ್ರಸ್ತಾಪಕ್ಕೆ ಸಿಪಿಐ(ಎಂ) ಬೆಂಬಲ

0

ಬೆಂಗಳೂರು: ಸರ್ಕಾರಿ, ಸಾರ್ವಜನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಡೆಸುವ ಚಟುವಟಿಕೆಗಳನ್ನು ನಿಯಂತ್ರಿಸುವ ಅಥವಾ ನಿಷೇಧಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ, ಅದೇ ಸಮಯದಲ್ಲಿ, ಕೇವಲ ನಿಷೇಧ ಹೇರುವುದು ಶಾಶ್ವತ ಪರಿಹಾರವಲ್ಲ, ಬದಲಿಗೆ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸರ್ಕಾರ ಮತ್ತು ಸಮಾಜ ಸನ್ನದ್ಧವಾಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಬಹುತ್ವವೇ ಭಾರತದ ಮೂಲಾಧಾರವಾಗಿರುವಾಗ, ಹಿಂದುತ್ವವಾದದ ಮೂಲಕ ಏಕ ಧರ್ಮವನ್ನು ಹೇರುವ ಕನಸಿನೊಂದಿಗೆ ಮುನ್ನಡೆಯುತ್ತಿರುವ ಆರ್‌ಎಸ್‌ಎಸ್‌ಗೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅದರ ಚಟುವಟಿಕೆಗಳನ್ನು ಅವಲೋಕಿಸಿದರೆ, ಅದು ಜನರನ್ನು ಭಾವನಾತ್ಮಕವಾಗಿ ಸೆಳೆದು ಧರ್ಮಾಧಾರಿತ ವಿಭಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

“ಎಳೆ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಅವರು ನಡೆಸುವ ಚಟುವಟಿಕೆಗಳು ಭವಿಷ್ಯದ ಭಾರತವನ್ನು ಕೋಮುದ್ವೇಷದ ಜ್ವಾಲಾಮುಖಿಯಾಗಿ ಮಾರ್ಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ,” ಎಂದು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ.

ಆಡಳಿತದಲ್ಲಿ ಸಿದ್ಧಾಂತ ಬೆಂಬಲಿಗರ ಒಳನುಸುಳುವಿಕೆ: ಜನರ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತುವ ಉದ್ದೇಶದಿಂದಲೇ ಆರ್‌ಎಸ್‌ಎಸ್‌ ಆಡಳಿತದ ಎಲ್ಲಾ ವಿಭಾಗಗಳಲ್ಲಿ ತನ್ನ ಸಿದ್ಧಾಂತವನ್ನು ಬೆಂಬಲಿಸುವವರನ್ನು ಸೇರಿಸುತ್ತಿದ್ದು, ನೆಲದ ಕಾನೂನನ್ನು ಕಡೆಗಣಿಸುತ್ತಿದೆ.

ದ್ವೇಷ ರಾಜಕಾರಣದ ನಿಯಂತ್ರಣ: ಆರ್‌ಎಸ್‌ಎಸ್ ತಾನೊಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ದೇಶದ ರಾಜಕಾರಣವನ್ನು ನಿಯಂತ್ರಿಸುತ್ತದೆ ಮತ್ತು ದ್ವೇಷ ರಾಜಕಾರಣವನ್ನು ಮುನ್ನಡೆಸುತ್ತಿದೆ ಎಂಬುದು ಜಗಜ್ಜಾಹೀರಾಗಿದೆ.

ಪೊಲೀಸ್ ಇಲಾಖೆಯ ತಾರತಮ್ಯ: ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರತಿಭಟನೆ ಮತ್ತು ಮೆರವಣಿಗೆಗಳಿಗೆ ನಿರ್ಬಂಧ ಹೇಳಿ ಪ್ರಕರಣ ದಾಖಲಿಸುವ ನಗರ ಪೊಲೀಸ್ ಇಲಾಖೆ, ಆರ್‌ಎಸ್‌ಎಸ್‌ಗೆ ಮಾತ್ರ ಪಥಸಂಚಲನಕ್ಕೆ ಅನುಮತಿ ನೀಡಿ, ಸಂಚಾರ ನಿರ್ಬಂಧ ಹೇರಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಸಿಕೊಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ‘ಸರಕಾರ ಇವರದು, ಅಧಿಕಾರ ಅವರದು’ ಎಂಬಂತಹ ಸ್ಥಿತಿ ಇದೆ ಎಂದು ಸಿಪಿಐ(ಎಂ) ಟೀಕಿಸಿದೆ.

ಈ ಹಿಂದೆ, ಪೆಹಲ್ಗಾಮ್ ದುರಂತದ ವಿರುದ್ಧ ಇತರ ಸಂಘಟನೆಗಳಿಗೆ ಖಂಡನಾ ಸಭೆ ನಡೆಸಲು ಅವಕಾಶ ನಿರಾಕರಿಸಿ, ಸಂಘದ ಸದಸ್ಯರೂ ಇರುವ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಘಟನೆಯನ್ನೂ ಸಿಪಿಐ(ಎಂ) ನೆನಪಿಸಿದೆ.

“ಈ ಎಲ್ಲ ಸಂಗತಿಗಳನ್ನು ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಪಾದಿಸುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಬೇಕು. ಸಹಬಾಳ್ವೆಯ ಸಾಮರಸ್ಯದ ಮೌಲ್ಯಗಳನ್ನು ಸ್ಥಿರವಾಗಿಸಲು ಜನರನ್ನು ಒಗ್ಗೂಡಿಸಬೇಕು,” ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಅವರು ಕರೆ ನೀಡಿದ್ದಾರೆ.

You cannot copy content of this page

Exit mobile version