ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕರ ನಡುವಿನ ಬಿಕ್ಕಟ್ಟು ಹೆಚ್ಚುತ್ತಿರುವ ನಡುವೆ, ಎನ್‌ಸಿಪಿ (ಎಸ್‌ಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ ಬಿಜೆಪಿಗೆ ಇನ್ನು ಶಿಂಧೆ ಅವರ ಅಗತ್ಯವಿಲ್ಲವೆಂಬ ಸ್ಪಷ್ಟ ಸಂದೇಶ ನೀಡಿದೆ ಎಂದು ಟೀಕಿಸಿದರು.
ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಶಿಂಧೆ ಬಣದ ಸಚಿವರು ಬಹಿಷ್ಕರಿಸಿದ್ದು, ಶಿಂಧೆ ಮಾತ್ರ ಸಭೆಗೆ ಹಾಜರಾಗಿದ್ದರು. ಇದನ್ನು ಉಲ್ಲೇಖಿಸಿದ ಕ್ರಾಸ್ಟೊ, ಫಡ್ನವೀಸ್ ಅವರಿಗೆ ಶಿಂಧೆ ಬಗ್ಗೆ ಗೌರವವಿಲ್ಲವೆಂಬುದೇ ಈ ಬೆಳವಣಿಗೆ ತೋರಿಸುತ್ತದೆ ಎಂದು ಹೇಳಿದರು.
“ಏಕನಾಥ್ ಶಿಂಧೆ ಅವರಿಗೆ ಸ್ವಾಭಿಮಾನ ಇದ್ದರೆ, ಅವರು ಬಿಜೆಪಿಯೊಂದಿನ ಮೈತ್ರಿಯನ್ನು ತೊರೆಯಬೇಕು. ಇಲ್ಲದಿದ್ದರೆ ಬಿಜೆಪಿ ಅವರಿಗೆ ಶೀಘ್ರದಲ್ಲೇ ಬಾಗಿಲು ತೋರಿಸುತ್ತದೆ,” ಎಂದು ಕ್ರಾಸ್ಟೊ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿ ಮಹಾಯುತಿ ಮೈತ್ರಿಯಾಗಿದ್ದು, ಇತ್ತೀಚಿನ ಬಿರುಕಿನಿಂದ ರಾಜಕೀಯ ತಳಮಳ ಹೆಚ್ಚಾಗಿದೆ.
ಮಂಗಳವಾರ ನಡೆದ ಸಭೆಗೆ ಹಾಜರಾಗದ ಶಿವಸೇನೆ ಸಚಿವರು ನಂತರ ಸಭೆಯಲ್ಲಿ ಫಡ್ನವೀಸ್ ಹಾಗೂ ಶಿಂಧೆ ಜೊತೆ ಚರ್ಚೆ ನಡೆಸಿ ಒಪ್ಪಂದ ಸಾಧಿಸಿದಂತೆ ತಿಳಿದುಬಂದಿದೆ. ಶಿಂಧೆ, ಮೈತ್ರಿ ಪಕ್ಷಗಳು ಪರಸ್ಪರ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂಬ ನಿರ್ಧಾರ ಮೈತ್ರಿಯೊಳಗೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
