Saturday, September 6, 2025

ಸತ್ಯ | ನ್ಯಾಯ |ಧರ್ಮ

ಕಾಳಿಂಗ ಸರ್ಪ ಸಂಶೋಧನೆ ಹೆಸರಿನ ಹುಚ್ಚಾಟಗಳು

“..ಕೆಲವು ವರ್ಷಗಳಿಂದ ಇಂತಹ ನಿರುಪದ್ರವಿ ಕಾಳಿಂಗನನ್ನು ಸಂರಕ್ಷಿಸುತ್ತೀವಿ ಎಂದು ಒಂದು ಕೋಲು ಹಿಡಿದು, ಲಕ್ಷಾಂತರ ಬೆಲೆಯ ಕ್ಯಾಮೆರಾ, ಲೆನ್ಸ್, ಉಪಕರಣ ಹಿಡಿದುಕೊಂಡು ಜನ ಬರುತ್ತಿದ್ದಾರೆ. ಆಗುಂಬೆಯ ಕಾಡಿನಲ್ಲಿ ಕಟ್ಟಡ ಕಟ್ಟಿದ್ದಾರೆ. ಅರಣ್ಯ ಒತ್ತುವರಿ ಮಾಡಿದ್ದಾರೆ..” ಪರಿಸರ ಚಿಂತಕರಾದ ನಾಗರಾಜ್ ಕೂವೆ ಅವರ ಬರಹದಲ್ಲಿ

ಕಾಳಿಂಗ ಸರ್ಪಗಳನ್ನು ಹಿಡಿಯಲು, ಫೋಟೋ ತೆಗೆಯಲು, ವಿಡಿಯೋ ಮಾಡಲು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಆಗುಂಬೆ ಮಳೆ ಕಾಡು ಸಂಶೋಧನಾ ಕೇಂದ್ರ, ಕಾಳಿಂಗ ಮನೆ ಸಂಸ್ಥೆಗಳಿಗೆ, ಅಜಯ್ ಗಿರಿ, ಪ್ರದೀಪ್ ಹೆಗಡೆ, ಗೌರಿಶಂಕರ್ ಮತ್ತಿತರ ಹಲವು ವ್ಯಕ್ತಿಗಳಿಗೆ ಅನುಮತಿ ನೀಡಿದವರಾರು? ಕೃತಕವಾಗಿ ಕಾಳಿಂಗ ಸರ್ಪದ ಮರಿ ಮಾಡಲು ಅವಕಾಶ ಕೊಟ್ಟವರಾರು? ಸಂಶೋಧನಾ ಕೇಂದ್ರದ ಹೆಸರಿನಲ್ಲಿ ಕಾಡಿನಲ್ಲಿ ಕಟ್ಟಡಗಳನ್ನು ಕಟ್ಟಲು ಅನುಮತಿ ಹೇಗೆ ದೊರೆಯಿತು? ವಾರಾಂತ್ಯಗಳಲ್ಲಿ ಸಾವಿರಗಟ್ಟಲೆ ಫೀಸಿಟ್ಟು ಕಾರ್ಯಾಗಾರಗಳನ್ನು ನಡೆಸಲು ಅವಕಾಶ ನೀಡಿದವರಾರು? ಇವರೆಲ್ಲ ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972ರ ನಿಯಮಗಳನ್ನು ಮೀರಿದ ವಿಶೇಷ ವ್ಯಕ್ತಿಗಳೇ? ಅರಣ್ಯ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ ಇವರಿಗೆ ಅನ್ವಯಿಸುವುದಿಲ್ಲವೇ? 

ಸಂಶೋಧನಾ ಸಂಸ್ಥೆಗಳು ಮತ್ತು ಸಂಶೋಧಕರು ಹೇಳುವಂತೆ, ಮಲೆನಾಡಿನಲ್ಲಿ ಯಾರೂ ಕಾಳಿಂಗಗಳಿಗೆ ತೊಂದರೆ ಮಾಡುವುದಿಲ್ಲ. ಅವುಗಳ ಮೊಟ್ಟೆಗಳನ್ನು ಮುಟ್ಟುವುದೂ ಇಲ್ಲ.  ಅವುಗಳನ್ನು ಕೊಲ್ಲುವುದಂತೂ ದೂರದ ಮಾತು. ಬದಲಾಗಿ ಅವುಗಳನ್ನು ಪೂಜಿಸುವ ಸಂಸ್ಕೃತಿಯಿದೆ. ಎಷ್ಟೋ ಕಡೆ ಹಳ್ಳಿಗರು ಕಾಳಿಂಗ ಸರ್ಪದ ಹೆಸರು ಕೂಡಾ ಹೇಳುವುದಿಲ್ಲ! ‘ಕರೀದು’ ಎಂದು ಅದನ್ನು ಸಂಬೋಧಿಸುತ್ತಾರೆ. ಈ ಕಾಲದ ಮಕ್ಕಳು-ಯುವಕರು ‘ಕಾಳಿಂಗ’ ಎಂದು ಹೆಸರು ಹೇಳಿದರೂ ಗದರಿಸುತ್ತಾರೆ! ಅಷ್ಟರಮಟ್ಟಿಗೆ ಅದರ ಬಗೆಗೆ ಪೂಜ್ಯ ಭಾವನೆಯಿದೆ. ಅದರ ಸಂರಕ್ಷಣೆ ಮಲೆನಾಡಿನ ಜನಜೀವನ ಸಂಸ್ಕೃತಿಯ ಭಾಗವೇ ಆಗಿದೆ.

ಇನ್ನು ಇವರು ಹೇಳುವ ಮಾನವ-ಕಾಳಿಂಗ ಸಂಘರ್ಷ ಪಶ್ಚಿಮ ಘಟ್ಟದಲ್ಲಂತೂ ಎಲ್ಲೂ ಇಲ್ಲ. ನಾಗರಹಾವು ಕಚ್ಚಿ ಸತ್ತ ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಕಾಳಿಂಗ ಸರ್ಪ ಕಚ್ಚಿ ಸತ್ತ ಉದಾಹರಣೆ ಇಲ್ಲ ( ಕೆಲ ವರ್ಷಗಳ ಹಿಂದೆ ಕಳಸದ ಪ್ರಫುಲ್ಲದಾಸ್ ಭಟ್ಟರು ಸತ್ತಿದ್ದು ಅದನ್ನು ಹಿಡಿದು ಫೋಟೋ ತೆಗೆಯಲು ಹೋಗಿ). ಅದು ಮನುಷ್ಯರಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಎಲ್ಲೋ ಬೆದೆಯ ಸಮಯದಲ್ಲೋ, ಆಹಾರ ಹುಡುಕಿಕೊಂಡು ಬಂದಾಗಲೋ ಅಪರೂಪಕ್ಕೆ ಕಾಣಿಸಿಕೊಳ್ಳುವುದುಂಟು. ಇಂತಹ ನಾಚಿಕೆ ಸ್ವಭಾವದ ಜೀವಿಯೊಂದಿಗೆ ಸಾವಿರಾರು ವರ್ಷಗಳಿಂದ ಮಲೆನಾಡಿಗರು ಸಹಜೀವನ ನಡೆಸುತ್ತಿದ್ದಾರೆ.

ಈಗ ಕೆಲವು ವರ್ಷಗಳಿಂದ ಇಂತಹ ನಿರುಪದ್ರವಿ ಕಾಳಿಂಗನನ್ನು ಸಂರಕ್ಷಿಸುತ್ತೀವಿ ಎಂದು ಒಂದು ಕೋಲು ಹಿಡಿದು, ಲಕ್ಷಾಂತರ ಬೆಲೆಯ ಕ್ಯಾಮೆರಾ, ಲೆನ್ಸ್, ಉಪಕರಣ ಹಿಡಿದುಕೊಂಡು ಜನ ಬರುತ್ತಿದ್ದಾರೆ. ಆಗುಂಬೆಯ ಕಾಡಿನಲ್ಲಿ ಕಟ್ಟಡ ಕಟ್ಟಿದ್ದಾರೆ. ಅರಣ್ಯ ಒತ್ತುವರಿ ಮಾಡಿದ್ದಾರೆ. ಸರಿಯಾಗಿ ಸ್ಥಳೀಯ ಭಾಷೆ, ಸಂಸ್ಕೃತಿಗಳ ಜ್ಞಾನ ಇಲ್ಲದ ಇವರು ಸುಖಾಸುಮ್ಮನೆ ಸ್ಥಳೀಯರನ್ನು ಕಾಳಿಂಗಕ್ಕೆ ಕಂಟಕರು ಎಂಬಂತೆ ಬಿಂಬಿಸಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ, ವೈಭೋಗದ ಜೀವನ ನಡೆಸುತ್ತಾ ಹಳ್ಳಿಗರಿಗೆ ಪರಿಸರ ಸಂರಕ್ಷಣೆಯ ಪಾಠ ಹೇಳುತ್ತಾರೆ. ಸಂಶೋಧನೆ ಹೆಸರಿನಲ್ಲಿ ಶ್ರೀಮಂತರನ್ನು ಕಾಡಂಚಿನಲ್ಲಿ ಉಳಿಸುತ್ತಾರೆ. ಕ್ಯಾಂಪ್ ಮಾಡುತ್ತಾರೆ. ರಾತ್ರಿ ಕಾಡಿಗೂ ಕರೆದುಕೊಂಡು ಹೋಗುತ್ತಾರೆ.

ಕಾಳಿಂಗ ಈಗ ಅಂತಾರಾಷ್ಟ್ರೀಯ ವಸ್ತು. ಅದರ ಆಕರ್ಷಕ ಫೋಟೋ, ಗೂಡು ಮಾಡುವ, ಮೊಟ್ಟೆ ಇಡುವ, ಮರಿ ಹೊರಬರುವ ವಿಡಿಯೋ ತುಣುಕುಗಳಿಗೆ ಲಕ್ಷಾಂತರ ಬೆಲೆಯಿದೆ. ಅದರ ಗಾತ್ರ, ವಿಶಿಷ್ಟ ಜೀವನ, ಪರಿಸರ ವ್ಯವಸ್ಥೆಯಲ್ಲಿ ಅದರ ಪಾತ್ರ ಮೊದಲಾದ ಕಾರಣಗಳಿಗೆ ಅದರ ಸಂಶೋಧನೆಗೆ ಕೋಟ್ಯಂತರ ಹಣವೂ ಹರಿದು ಬರುತ್ತದೆ. ಅದರ ವಿಷದ ಕಳ್ಳ ಸಾಗಾಣಿಕೆಯ ಬೆಲೆಯೂ ದೊಡ್ಡದು. ತಮ್ಮ ಹಣದಾಹಕ್ಕಾಗಿ ಕಾಳಿಂಗ ಅಪಾಯದಲ್ಲಿದೆ, ಸ್ಥಳೀಯ ಜನರಿಂದ ಅದು ತೊಂದರೆಗೊಳಪಟ್ಟಿದೆ ಎಂದು ಇಲ್ಲದ ಕಟ್ಟು ಕಥೆಗಳನ್ನು ಕಟ್ಟಿ ಕಾಳಿಂಗ ಸಂರಕ್ಷಣೆಯ ನಾಟಕ ಕೆಲವು ವರ್ಷಗಳಿಂದ ನಡೆಯುತ್ತಿದೆ.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಭೂಮಿ ಖರೀದಿ
ಕಾಳಿಂಗ ಸಂಶೋಧಕ ಅಜಯ್ ಗಿರಿ ತಮ್ಮ ಪತ್ನಿ ಹೆಸರಿನಲ್ಲಿ (ಮೇಘನ ಎನ್ ಕೋಂ ಅಜಯ್ ವಿಜಯ್ ಗಿರಿ) ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯ ತಲ್ಲೂರು ಗ್ರಾಮದ ಸರ್ವೇ ನಂಬರ್ 11ರಲ್ಲಿ 2.37 ಎಕರೆ ಜಮೀನು ತೆಗೆದುಕೊಂಡಿದ್ದಾರೆ. ಇದು ರಾಮಪತ್ರೆ ಜಡ್ಡಿ ( Myristica swamp) ಇರುವ ವಿಶಿಷ್ಟ ಪರಿಸರ. ಇದು ಜೌಗು ಪ್ರದೇಶವಾಗಿದ್ದು, ಜಲಮೂಲವಾಗಿದೆ. ನದಿಯನ್ನು ಜೀವಂತವಾಗಿಡಲು ಇವುಗಳ ಕೊಡುಗೆ ಅಪಾರವಿದೆ. ಇಂತಲ್ಲಿ ವಿಶಿಷ್ಟ ಪರಿಸರ ವ್ಯವಸ್ಥೆ ಇರಲಿದೆ. ಬೇರೆ ಕಡೆಗಳಲ್ಲಿ ಇಂತಹ ಜಾಗಗಳನ್ನು ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಸಂರಕ್ಷಿಸುತ್ತಿದೆ. 

ಪರಿಸರ ಸೂಕ್ಷ್ಮ ಜಾಗದಲ್ಲಿ ಕಾಳಿಂಗ ಸಂಶೋಧಕರು ಜಾಗ ತೆಗೆದುಕೊಳ್ಳಲು ನಿರಾಕ್ಷೇಪಣಾ ಪತ್ರ ಹೇಗೆ ಸಿಕ್ಕಿತು? ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆಯೇ? ಅದೆಲ್ಲ ಹಾಗಿರಲಿ ಸಂರಕ್ಷಣೆ ಬಗೆಗೆ ಊರಿಗೆಲ್ಲಾ ಪಾಠ ಮಾಡುವವರು ಹೀಗೆ ಮಾಡಬಹುದೇ? ಸಂರಕ್ಷಣೆಯ ಕಾರಣಕ್ಕಾಗಿ ರೈತರು ಕಾಡಂಚಿನ  ಜಮೀನನ್ನು ಇಲಾಖೆಗೆ ಹಸ್ತಾಂತರಿಸುತ್ತಿರುವ ಈ ಸಂದರ್ಭದಲ್ಲಿ ಇವರ ಈ ನಡೆ ಸಂಶಯ ಹುಟ್ಟಿಸುವುದಿಲ್ಲವೇ?

ಜೊತೆಗೆ ಮಲೆನಾಡಿನಲ್ಲಿ ಭೂಮಿಯ ಬೆಲೆ ಗೊತ್ತಿರುವವರಿಗೆ ಈ ಮನುಷ್ಯ ಏನಿಲ್ಲವೆಂದರೂ ಹತ್ತಿರ ಹತ್ತಿರ ಒಂದು ಕೋಟಿ ಕೊಟ್ಟು ಈ ಭೂಮಿ ಕೊಂಡಿರಬಹುದು. ಒಬ್ಬ ಸಂರಕ್ಷಕನಿಗೆ ಅದಕ್ಕೆಲ್ಲ ಹಣ ಎಲ್ಲಿಂದ? ಅಷ್ಟಕ್ಕೂ ಕಾಡೊಳಗೆ ಇವರಿಗೆಲ್ಲಾ ಏನು ಕೆಲಸ? ನಾವು ಕಾಡೊಳಗೆ ಹೋಗಿ ಸಂರಕ್ಷಿಸುವುದು ಏನಿದೆ?

ಫೋಟೋ, ವಿಡಿಯೋ ಚಿತ್ರೀಕರಣ
ವನ್ಯಜೀವಿ ಸಾಕ್ಷ್ಯಚಿತ್ರ ಮಾಡುವುದು ಏಕೆ? ಜನರಿಗೆ ವನ್ಯಜೀವಿಗಳ ಬಗೆಗೆ ತಿಳುವಳಿಕೆ ಮೂಡಿ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಲಿ ಎಂದಲ್ಲವೇ. ಅದಕ್ಕೆ ಕಾಳಿಂಗನ ಫೋಟೋ, ವಿಡಿಯೋ ಮಾಡಿದರೆ ಸಾಕಲ್ಲವೇ? ಅದನ್ನು ಬಿಟ್ಟು, ಪ್ರದೀಪ್ ಹೆಗಡೆ ಎಂಬ ವನ್ಯಜೀವಿ ಛಾಯಾಗ್ರಾಹಕ  ಕಾಳಿಂಗನ ಫೋಟೋ ತೆಗೆಯುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ಫೋಟೋ ತೆಗೆದು, ಅದನ್ನು ಸ್ವತಃ ಪ್ರದೀಪ್ ಹೆಗಡೆ Instagram ಗೆ ಹಾಕುವುದರಲ್ಲಿ ಸಂರಕ್ಷಣೆಯ ಬಗೆಗೆ ಸಂದೇಶ ಏನಿದೆ? ಇದೊಂದು ಶೋಕಿ ಎಂದು ನಿಸ್ಸಂಶಯವಾಗಿ ಹೇಳಬಹುದು.

ಪ್ರದೀಪ್ ಹೆಗಡೆಯವರು ಕಾಳಿಂಗದ  ತೀರಾ ಸಮೀಪ ಹೋಗಿರುವುದಲ್ಲದೇ, ಅವುಗಳ ಮಿಲನವನ್ನು ಚಿತ್ರಿಸುತ್ತಿರುವುದು ಕೊಡುವ ಸಂದೇಶವೇನು? ನೀವೆಲ್ಲಾ ಹೀಗೆಯೇ ಫೋಟೋ ತೆಗೆಯಿರಿ ಎಂದೇ? ಹೋಗಲಿ ಆ ಫೋಟೋದ ಕೆಳಗಾದರೂ ಸಂರಕ್ಷಣೆ ಬಗೆಗೆ ಒಂದು ಸಾಲಾದರೂ ಇರಬೇಕಿತ್ತಲ್ಲ. ಇದು ಯಾವ ಸ್ವರೂಪದಲ್ಲಾದರೂ ನೋಡುಗರನ್ನು ಸಂರಕ್ಷಣೆಯೆಡೆಗೆ ಪ್ರೇರೇಪಿಸುತ್ತದೆಯೇ? ಅರಣ್ಯ ಇಲಾಖೆ ಹೀಗೆ ಶೋಕಿ ಮಾಡಲು ಇವರಿಗೆ ಅನುಮತಿ ಕೊಟ್ಟಿದೆಯೇ? ಇಲಾಖೆ ಛಾಯಾಗ್ರಹಣಕ್ಕೆ ಅನುಮತಿ ಕೊಟ್ಟಿದ್ದರೂ ಆಗ ಹಾಕಿರುವ ಷರತ್ತುಗಳ ಸ್ಪಷ್ಟ ಉಲ್ಲಂಘನೆ ಇದು.

ಕಾಳಿಂಗದ ಮರಿಗಳು ಹೊರಬರುವ ವಿಡಿಯೋ ಮಾಡಲಾಗಿದೆ. ಅಲ್ಲಿ ಒಂದು ದೊಡ್ಡ ಗುಂಪು ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದೆ. ಕಾಳಿಂಗ ಮೊಟ್ಟೆ ಇಟ್ಟು ಮರಿಮಾಡಿದ ಜಾಗಕ್ಕೆ ಸಾರ್ವಜನಿಕರನ್ನು ಗುಂಪು ಗೂಡಿಸಿದ್ದು ಮೊದಲ ತಪ್ಪು. ನಂತರ ಅಲ್ಲಿರುವ ಅಷ್ಟೂ ಮಂದಿ ಕ್ಯಾಮೆರಾ/ಮೊಬೈಲ್ ಹಿಡಿದು ಚಿತ್ರೀಕರಿಸುತ್ತಿದ್ದರೂ ಸಂಬಂಧಿಸಿದವರು ಅದನ್ನು ತಡೆಯದೇ ಇದಿದ್ದೇಕೆ? ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿಲ್ಲವೇ? ವಲಯ ಸಂರಕ್ಷಣಾಧಿಕಾರಿ, ಸಂಶೋಧಕರು, ವನ್ಯಜೀವಿ ಛಾಯಾಗ್ರಾಹಕರು ಈ ನೆಲದ ಕಾನೂನುಗಳನ್ನು ಮೀರಿದವರೇ?

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೆ ಭೇಟಿ ಕೊಟ್ಟಿರುವವರ ವಿವರ, ಅವರ ಕ್ಯಾಮೆರಾಗಳು, ಮೊಬೈಲ್ ಗಳು ಇತ್ಯಾದಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದರೆ, ಈ ಸಂಶೋಧನಾ ಸಂಸ್ಥೆಗಳಿಗೆ ಕೊಟ್ಟ ಅನುಮತಿಯಿಂದ ಹಿಡಿದು ಅವರ ಚಟುವಟಿಕೆಗಳವರೆಗೂ ವಿಚಾರಣೆ ನಡೆಸಿದರೆ ಎಲ್ಲಾ ಹುತ್ತದ ಹಾವುಗಳೂ ಹೊರಬರುತ್ತವೆ. ಎಲ್ಲೆಲ್ಲೂ ಅಪಾರದರ್ಶಕತೆ ತುಂಬಿರುವ ಅವರ ಚಟುವಟಿಕೆಗಳ ಸಂರಕ್ಷಣಾ ಮುಖವಾಡಗಳು ಕಳಚಿ ಬೀಳುತ್ತವೆ. 

ಅಷ್ಟಕ್ಕೂ ಹಾವು ಹಿಡಿಯಲು ಈ ಸ್ವಯಂಘೋಷಿತ ಸಂರಕ್ಷಕರಿಗೆಲ್ಲಾ ಅನುಮತಿ ಕೊಟ್ಟವರಾರು? ಕಾಳಿಂಗದೊಂದಿಗೆ ಮನುಷ್ಯನ ಫೋಟೋ ಹೊಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಅನುಮತಿ ಕೊಟ್ಟಿದ್ಯಾರು? ಎಲ್ಲೋ ಕಾಳಿಂಗ ಹಿಡಿದು ಬಹುದೂರ ಇನ್ನೆಲ್ಲೋ ಬಿಟ್ಟರೆ ಅದು ಬದುಕುವುದಿಲ್ಲ ಎಂಬುದು ಸಂರಕ್ಷಕರಿಗೆ ಗೊತ್ತಿಲ್ಲವೇ? ಕಾಳಿಂಗನ ಹಿಡಿದು ಫೋಟೋ ತೆಗೆಯಬಾರದು, ಅದನ್ನು ಹಿಡಿಯುವುದನ್ನು ವಿಡಿಯೋ ಮಾಡಬಾರದು, ಅದನ್ನು ಶೋಕಿಗಾಗಿ ಸಾರ್ವಜನಿಕವಾಗಿ ಪ್ರದರ್ಶಿಸಿಬಾರದು ಎಂಬ ಸಾಮಾನ್ಯ ಜ್ಞಾನ ಇಲ್ಲವೇ? ವನ್ಯಜೀವಿ ಸಂರಕ್ಷರೇನು ವಿಶೇಷ ವ್ಯಕ್ತಿಗಳಲ್ಲ ಅವರಿಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯವಾಗುತ್ತದೆ. ಇವತ್ತು ಸಂರಕ್ಷಣೆ ಹೆಸರಿನಲ್ಲಿ ಶೋಕಿ, ಹಣ ಮಾಡುವುದೇ ಕೆಲವರ ಕಾಯಕವಾಗಿದೆ.

ಸಂಶೋಧನೆ ಎಂದರೆ ಕೆಲವರಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ಅಷ್ಟೇ. ಇವರು ಆಗುಂಬೆಯಲ್ಲಿ ಸುರಂಗ ಕೊರೆದರೂ ಮಾತನಾಡಲಾರರು, ಆಗುಂಬೆಯ ಸೂಕ್ಷ್ಮ ಪರಿಸರದಲ್ಲಿ ರಸ್ತೆ ವಿಸ್ತರಣೆಯಾದರೂ ಬಾಯ್ಬಿಡಲಾರರು. ಏಕೆಂದರೆ ಇದಾವುದೂ ಅವರ ಸಬ್ಜೆಕ್ಟ್ ಅಲ್ಲ! ಸಿಂಗಳಿಕಗಳು ಆಗುಂಬೆಯ ರಸ್ತೆಗಿಳಿದಾಗ ಒಳ್ಳೆಯ ಫೋಟೋ ಕ್ಲಿಕ್ಕಿಸಬಹುದು ಎಂಬ ಧೋರಣೆ ಇವರದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page