Tuesday, September 3, 2024

ಸತ್ಯ | ನ್ಯಾಯ |ಧರ್ಮ

ಫೊರೆನಿಕ್ಸ್ ಲ್ಯಾಬಲ್ಲಿ ಪತ್ತೆಯಾದ ಮೊಸಳೆ ಕಣ್ಣೀರು (ರಾಜಕೀಯ ವಿಡಂಬನೆ)

ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ ಕೇಳಿ ಗೊಣಗುತ್ತ ಅರೆನಿದ್ದೆಯಿಂದ ಎಚ್ಚೆತ್ತ. ನಮೋ ಗ್ರಹಚಾರವನ್ನು ಹಳಿಯುತ್ತ ಅರಮನೆಯತ್ತ ಹೆಜ್ಜೆ ಹಾಕಿದ.

ಇನ್ನೇನು ಅರಮನೆ ಬಂತು ಅನ್ನುವಷ್ಟರಲ್ಲಿ ಗಕ್ಕನೆ ನಿಂತ ಅಪರಿಮಿತ ಕುತಂತ್ರಿ ಆಕಾಶದತ್ತ ದಿಟ್ಟಿಸಿದ. ಫಳಫಳನೆ ಹೊಳೆವ ನಕ್ಷತ್ರಗಳು, ಚಂದ್ರನ ಬಿಟ್ಟರೆ ಎಲ್ಲೂ ಚಾದರದಷ್ಟು ಮೋಡಗಳು ಕಾಣಲಿಲ್ಲ. ಹಾಗಿದ್ದರೆ, ರಸ್ತೆಯೆಲ್ಲಾ ತೇವಗೊಂಡು ನೀರು ಹರಿದು ಬರುತ್ತಿರುವುದಾದರೂ ಎಲ್ಲಿಂದ? ಗಾಬರಿಯಿಂದ ಅರಮನೆ ಹೊಕ್ಕಾಗ ಅಲ್ಲಿಯ ದೃಶ್ಯ ಕಂಡು ಗಕ್ಕನೆ ನಿಂತ. ನೆರೆದಿದ್ದ ನೂರಾರು ಲಂಡಭಕ್ತರ ರೋದನೆಯ ಕಣ್ಣೀರು ಹೊಳೆಯಾಗಿ ಹರಿದು ಬರುತ್ತಿತ್ತು.

ಹೆಜ್ಜೆ ಇರಿಸಲು ಜಾಗವಿಲ್ಲದಂತೆ ನೆರೆದಿದ್ದ ಭಕ್ತರ ಮಧ್ಯೆ ಇರುಕಿಸಿಕೊಂಡವನು ತಳ್ಳಾಡುತ್ತ ಅವರನ್ನು ದೂಡಿ ಕೊಂಡು ನಮೋ ಕೊಠಡಿಯತ್ತ ಬಂದ. ಅದಾಗಲೇ ಮಂತ್ರಿಗಳು, ಪೂರ್ವಾಶ್ರಮದ ಚಡ್ಡಿಧಾರಿಗಳು, ಗೋದಿ ಮಾಧ್ಯಮದ ಬಕೆಟ್ ಪತ್ರಕರ್ತರು – ಎಲ್ಲರೂ ಮ್ಲಾನವದನರಾಗಿ ನಿಂತದ್ದು ಕಂಡ ಅಪರಿಮಿತ ಕುತಂತ್ರಿಗೆ ಸುದ್ದಿ ತನಗೆ ತಡವಾಗಿ ಸಿಕ್ಕು ಕೊನೆಯವನಾಗಿ ಬಂದದ್ದಕ್ಕೆ ಮುಜುಗರವಾಯಿತು. ಏನು ನಡೆದಿದೆ? ಸಾಮ್ರಾಟನಿಗೆ ಏನಾದರೂ ವಿಪತ್ತು ಒದಗಿ ಬಂತೆ? ಏನೊಂದು ತಿಳಿಯದೆ ಕಮಲೀ ಮುಖಂಡ ಕಪಿ ದಡ್ಡನತ್ತ ಕಣ್ಸನ್ನೆಯಲ್ಲಿ ಕೇಳಿದರೆ ʼಎಲ್ಲಾ ಮುಗಿದು ಹೋದ ಹಾಗೆ!ʼ ಎನ್ನುವಂತೆ ಕೊಠಡಿಯತ್ತ ಜೋಲು ಮೋರೆ ಮಾಡಿದ. ಕೊಠಡಿಯ ಬಾಗಿಲ ಕೆಳಗಿನ ಸಂದಿಯಲ್ಲಿ ನೀರು ಹರಿದು ಬಂದು ಲಂಡಭಕ್ತರ ಕಣ್ಣೀರನ ಮುಖ್ಯವಾಹಿನಿಯಲ್ಲಿ ಸೇರುತ್ತಿತ್ತು.

ಮತ್ತಷ್ಟು ಗೊಂದಲಗೊಂಡ ಅಪರಿಮಿತ ಕುತಂತ್ರಿ, ಅಲ್ಲೇ ನಿಂತು ಕಣ್ಣೀರನ್ನು ಒರೆಸುತ್ತ ಕರ್ಚೀಫನ್ನು ಹಿಂಡುತ್ತಿದ್ದ ನಮೋ ಆಪ್ತಕಾರ್ಯದರ್ಶಿಗೆ “ಸಾಮ್ರಾಟರು ಎಲ್ಲಿ?” ಎಂದ.

“ವಿದೇಶಕ್ಕೆ ತೆರಳಿದ್ದ ನಮೋ ಮಹಾಸ್ವಾಮಿಗಳು ತಡರಾತ್ರಿ ಬಂದಾಗ ಬಹಳ ಚಿಂತೆಯಲ್ಲಿದ್ದಂತೆ ಕಂಡರು. ತುಟಿ ಎರಡು ಮಾಡದೆ ಬಿರುಗಾಳಿಯಂತೆ ಕೊಠಡಿ ಸೇರಿ ದಢಾರೆಂದು ಅಗುಳಿ ಹಾಕಿಕೊಂಡರು. ನಾನು ಮಾತಾಡಿಸುವ ಧೈರ್ಯ ಮಾಡಲಿಲ್ಲ. ಅರ್ಧತಾಸಿನ ನಂತರ “ಅಯ್ಯೋ!” ಎಂದು ಕೂಗಿದ ಹಾಗಾಯಿತು. ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಒಂದೇ ಸಮನೆ ನೀರು ಪ್ರವಾಹದಂತೆ ಹರಿದು ಬಂತು”

ಕಳೆದ ವರ್ಷ ಕೂಡ ಇಂಥದ್ದೇ ಪ್ರಸಂಗ ನಡೆದದ್ದು ಅ. ಕುತಂತ್ರಿಯ ನೆನಪಿಗೆ ಬಂತು. ʼಆಗ ಮಮ್ಮೀ…ಮಮ್ಮೀನ ನೋಡ್ಬೇಕು ಅಂತ ರಚ್ಚೆ ಹಿಡಿದಿದ್ದ. ಈಗ ಮಮ್ಮೀ ಇಲ್ಲ. ಮತ್ಯಾವ ಹೊಸ ನೌಟಂಕಿ ಶುರು ಮಾಡಿದ್ದಾನೊ! ಇತ್ತೀಚಿಗೆ ಮೆಥೆಡ್ ಆಕ್ಟಿಂಗ್ ಬೇರೆ ಪ್ರಾಕ್ಟಿಸ್ ಮಾಡ್ತಿದ್ದಾನೆʼ ಎಂದು ತಲೆ ಕೆರೆದುಕೊಂಡು, ಬಾಗಿಲನ್ನು ಒಡೆಯಲು ಕಾವಲುಗಾರರಿಗೆ ಹೇಳಿದ.

ಯಾರೂ ಒಳ ಬರದಂತೆ ಎಚ್ಚರಿಸಿ ತಾನೊಬ್ಬನೇ ರೂಮಿನೊಳಗೆ ಬಂದರೆ, ನಮೋ ಬಿಟ್ಟ ಕಣ್ಣು ಬಿಟ್ಟಂತೆ ಶೂನ್ಯದತ್ತ ದಿಟ್ಟಿಸುತ್ತ ಮಂಚದ ಮೇಲೆ ಕುಳಿತಿದ್ದ. ಮುಖದಲ್ಲಿ ದುಃಖ ಕೆರೆಯಂತೆ ನಿಂತಿತ್ತು. ಬಲಗಣ್ಣಿಂದ ಮಾತ್ರ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ʼಒಂದೇ ಕಣ್ಣಿನಿಂದ ಅಳು…ವಾಹ್! ಗ್ರೇಟ್ ಆಕ್ಟಿಂಗ್ʼ. ಯಾವುದಕ್ಕೂ ಇರಲಿ ಎಂದು ತನ್ನ ಮೊಬೈಲಲ್ಲಿ ಫೋಟೊ ಕ್ಲಿಕ್ಕಿಸಿದ. ಹಿನ್ನೆಲೆಯಲ್ಲಿ ಕಣ್ಣೀರಧಾರೆ…ಇದೇಕೆ…ಇದೇಕೆ…ಪ್ಯಾತೊ ಸಾಂಗ್ ಕೇಳಿಬರುತ್ತಿತ್ತು. “ಮಹಾಸ್ವಾಮಿಗಳೆ… ಏನಾಯಿತು? ಎಚ್ಚರಗೊಳ್ಳಿ” ಎಂದರೆ ನಮೋ ಅಲುಗಾಡದೆ ಶಿಲೆಯಾಗಿದ್ದ.

ಅ. ಕುತಂತ್ರಿ ಕೂಡಲೇ – ಆಪ್ತಕಾರ್ಯದರ್ಶಿ, ಕಪಿ ದಡ್ಡ, ಮಂತ್ರಿಮಂಡಲ, ಮಾ.ಕೃ.ಕುಟೀರದ ಪುರೋಹಿತ ಸೇರಿದಂತೆ ಎಲ್ಲಾ ಕೇಸರಿ ಪ್ರಮುಖರನ್ನು ಸೇರಿಸಿ ನಮೋ ಸಾಮ್ರಾಟರಿಗೆ ಆಗಿರುವ ಆಘಾತವನ್ನು ಅರಿಯಲು ತುರ್ತುಸಭೆಯನ್ನು ಕರೆದ. ಸಭೆಯಲ್ಲಿ ಕಳೆದೆರೆಡು ದಿನಗಳಿಂದ ನಮೋ ಸುತ್ತ ಆದ ಘಟನೆಗಳನ್ನು ಕೆದಕುತ್ತ ಶೋಧನೆ ನಡೆಯಿತು.

24×7 – ನಮೋಗೆ ಸಕಲ ಇಷ್ಟಾರ್ಥ ಸೇವೆ ಸಲ್ಲಿಸುತ್ತ ಜೊತೆಗಿರುವ ಆಪ್ತಕಾರ್ಯದರ್ಶಿಯ ಅಭಿಪ್ರಾಯವನ್ನು ಮೊದಲು ಕೇಳಲಾಗಿ “ಬಾಲಕನಂತಿದ್ದ ರಾಗಾ ಈಗ ಬ್ಲಾಕ್ ಬೆಲ್ಟ್ ತೊಟ್ಟು, ತೊಡೆ ತಟ್ಟುತ್ತ ಅಗ್ನಿವೀರ್, ಶೇರ್ ಮಾರ್ಕೆಟ್ ಸ್ಕಾಂಡಲ್, ಪರೀಕ್ಷೆ ಪೇಪರ್ ಲೀಕ್, ಜಾತಿ ಜನಗಣತಿ..ಎಕ್ಸೆಟ್ರಾಂತ ಇತ್ತೀಚಿಗೆ ಎಸೆಯುವ ಸವಾಲುಗಳಿಗೆ ಕೌಂಟರ್ ಕೊಡಲಾಗದೆ ಮಹಾಸ್ವಾಮಿಗಳು ಕಂಗೆಟ್ಟಿದ್ದರು. ಅದೂ ಸಾಲದೂಂತ ತಮ್ಮದೇ ಕಮಲೀ ಸಭಾ ನಡಾವಳಿಗಳ ಬಗ್ಗೆ ಬಹಳ ಕಳವಳಗೊಂಡಿದ್ದರು. ತಾನು ಎತ್ತಿ ಆಡಿಸಿ, ಮುದ್ದಾಡಿ ಗದ್ದುಗೆ ಮೇಲೆ ಕೂರಿಸಿದ ಬುಲ್ಡ್ ಡೋಜರ್ ಭೋಗಿಬಾಬಾ, ಸಭೆಗಳಲ್ಲಿ ಎಲ್ಲರಂತೆ ಸಾಷ್ಟಾಂಗ ಬೀಳುವುದಿರಲಿ ಕನಿಷ್ಟ ನಮಸ್ಕರಿಸಿ ಗೌರವ ಕೊಡದೆ ಅಪಮಾನಿಸಿದ್ದು ಅವರನ್ನು ಚಿಂತೆಯ ಕೂಪಕ್ಕೆ ತಳ್ಳಿತ್ತು. ಮೊನ್ನೆ ಅವರ ಫ್ಯಾಷನ್ ಡಿಸೈನರ್ ಅಳತೆ ತೆಗೆದುಕೊಳ್ಳುವಾಗ ಐವತ್ತಾರು ಇದ್ದ ಎದೆ ಗಾತ್ರ ಇಂಚಿನ ಪಟ್ಟಿಯಲ್ಲಿ ಮೂವತ್ತಾರಕ್ಕೆ ಇಳಿದದ್ದನ್ನು ನೋಡಿ ಅವರು ಕುಸಿದು ಹೋಗಿದ್ದರು” ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.

“ಅದು ಇರಬಹುದು. ಆದರೆ…” ಎಂದು ಮಧ್ಯೆ ಬಾಯಿ ಹಾಕಿದ ವಿದೇಶಾಂಗ ಮಂತ್ರಿ “ನೆನ್ನೆ ರೂಸ್ ಗೆ ಹೋಗಿದ್ದಾಗ ಎರಡೂ ದೇಶದ ಪ್ರಧಾನಿಗಳನ್ನು ಕೂಡಿಸಿ ʼಫಾರಿನ್ ಮಿತ್ರೋ…ಇದು ಕಲಹಕ್ಕೆ ಕಾಲವಲ್ಲ. ಯುದ್ದ ನಿಲ್ಲಿಸಿʼ ಎಂದು ಶಾಂತಿಯ ಮಂತ್ರ ಜಪಿಸಿದ ವಿಶ್ವಗುರುವಿನ ಮಾತಿಗೆ ಅವರುಗಳು ಮೊದಲಿಗೆ ತಲೆಯಾಡಿಸಿ, ಕೈ ಕುಲುಕಿ ಹಗ್ ಮಾಡಿದ್ದರು. ಆದರೆ…ಅನಿವಾಸಿಗಳನ್ನು ಸ್ಟೇಡಿಯಮ್ಮಲ್ಲಿ ಗುಡ್ಡೇ ಹಾಕಿ, ದೇಶದಲ್ಲಿ ಆಗುತ್ತಿರುವ ಬುಲೆಟ್ ಟ್ರೈನ್ ಸ್ಪೀಡಿನ ಡೆವಲಪ್ ಮೆಂಟ್ ಬಗ್ಗೆ ಬುರುಡೆ ಬಿಡುತ್ತಿರಬೇಕಾದರೆ ಬಾಂಬೊಂದು ನಮೋ ಸಾಹೇಬರ ಅಡಿಗೆ ಬಂದು ಬಿತ್ತು. ಎದ್ದೇನೊ ಬಿದ್ದೇನೆಂದು ಪುಷ್ಪಕ ವಿಮಾನ ಹತ್ತಿ ವಾಪಸ್ಸು ಬರೋವಾಗ ನಮೋ ಸಾಹೇಬರು ಭಯದಿಂದ ನಡುಗುತ್ತಿದ್ದರು. ಅದೂ ಒಂದು ಕಾರಣ ಇರಬಹುದು” ಎಂದದ್ದು ಅ.ಕುತಂತ್ರಿಗೆ ಸರಿಬರಲಿಲ್ಲ. “ಹು…ಹು…ಇಲ್ಲ..ನಮೋ ಸಾಹೇಬರು ರಾಕೆಟ್ಟುಗಳನ್ನು ಕೈಯಲ್ಲೇ ಹಿಡಿದು ಹಾರಿಸುವ ಎಂಟೆದೆ ಅಲ್ಲ…ಹದಿನೆಂಟೆದೆ ಭಂಟ. ಹೆದರಿಕೊಂಡು ಬಂದಿರಲಾರರು. ತಾನಿಲ್ಲದ ಟೈಮಲ್ಲಿ ವೈರಿಗಳು ದೇಶವನ್ನು ಒಡೆದು ಹಾಕುತ್ತಾರೆಂದು ಬೇಗ ಬಂದಿದ್ದಾರೆ…ಅಷ್ಟೇ” ಎಂದು ಕಿತ್ತು ಹೋದ ನಮೋ ಧೈರ್ಯಕ್ಕೆ ಒಂದಷ್ಟು ತೇಪೆ ಮೆತ್ತಿದ.

ಅಷ್ಟರಲ್ಲಿ ಕಪಿ ದಡ್ಡ “ಕುತಂತ್ರಿಗಳೇ…ಸಾಮ್ರಾಟರ ಮನೋ ವೇದನೆಗೆ ನಾನೂ ಕಾರಣ ಇರಬಹುದು. ಆ ಪೊಮೆರಿಯನ್ ತಳಿಯ ಮಂಗನಾ ಶೇಪೌಟನ್ನು ಕಮಲೀ ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ. ಎಷ್ಟು ಹೇಳಿದರೂ ನಾಬಾಲಿಕ್ ಬುದ್ದಿಯ ಅದಕ್ಕೆ ಅರ್ಥವಾಗುತ್ತಿಲ್ಲ. ಚಳುವಳಿ ಮಾಡುತ್ತಿರುವ ರೈತರು ಟೆರರಿಷ್ಟ್ ಗಳು. ಅಲ್ಲಿ ರೇಪ್ ಗಳು ಆಗುತ್ತಿವೆ. ಮರ್ಡರ್ ಮಾಡಿ ಡೆಡ್ ಬಾಡಿಗಳನ್ನು ನೇತು ಹಾಕಿದ್ದಾರೆ…ಹೀಗೆ ತಲೆಬುಡ ಇಲ್ಲದೆ ಮಾತಾಡುತ್ತಿದ್ದಾಳೆ. ಜನರು, ವಿರೋಧಿಗಳು ಇವೆಲ್ಲ ನಮೋ ಹೇಳಿಕೊಟ್ಟ ಗಿಳಿಮಾತುಗಳು ಎಂದು ವೃಥಾ ಸಾಮ್ರಾಟರನ್ನು ಛೇಡಿಸುತ್ತಿದ್ದಾರೆ. ಅಕಟಕಟಾ…” ಎಂದು ಗದ್ಗದಿತನಾದ.

ಎಷ್ಟು ಚರ್ಚಿಸಿದರೂ ನಮೋ ರೋದನೆಯ ಮೂಲ ಯಾವುದೆಂದು ತಿಳಿಯಲು ಸಭೆ ಸೋತಾಗ ಅ.ಕುತಂತ್ರಿ ಫೋರೆನಿಕ್ಸ್ ಲ್ಯಾಬ್ ತಂತ್ರಜ್ಞರಿಗೆ ಬರಹೇಳಿದ. ಇಡೀ ದೇಹ ಮುಚ್ಚುವಂತೆ ಪಿಪಿಇ ತೊಟ್ಟು ಬಂದ ಪರಿಣಿತರು ಸ್ಟ್ಯಾಚು ಆಗಿದ್ದ ನಮೋ ಕಣ್ಣೀರಿನ ಸ್ಯಾಂಪಲ್ಲನ್ನು ಸಂಗ್ರಹಿಸಿ ಅ.ಕುತಂತ್ರಿಗೆ ವಂದಿಸಿ ಹೊರಟಾಗ, “ವರ್ಷಗಟ್ಟಲೆ ರಿಸರ್ಚ್ ಮಾಡುತ್ತ ಕೂರಬೇಡಿ. ಬೇಗ ರಿಸಲ್ಟ್ ಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ” ಎಂದು ಗುಟುರು ಹಾಕಿದ. ಅಷ್ಟರಲ್ಲಿ ಕಾವಲುಗಾರ ಬಂದು ಆಪ್ತಕಾರ್ಯದರ್ಶಿಯ ಕಿವಿಗೆ ಉಸಿರಿದ್ದನ್ನು, ಅವನು ಅ.ಕುತಂತ್ರಿಯ ಕಿವಿಗೆ ಸುರಿದ.

ನಮೋ ಸಂಕಟದಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. “ಏನದು ಹೇಳಿ. ನಿಮ್ಮ ಬೇಗುದಿ ಕಡಿಮೆಯಾಗುತ್ತೆ” ಎಂದು ಅ.ಕುತಂತ್ರಿ ಬೆನ್ನನ್ನು ನೀವಿದ. “ಅಲ್ಲಿ…ಅಲ್ಲಿ…ಬಂಗಾಲದಲ್ಲಿ… ಅತ್ಯಾಚಾರ…ಬಲಾತ್ಕಾರ…ದೀದಿ…ದೀದಿ…ಬೇಟಿ ಬಚಾವ್…ಬೇಟಿ ಪಡಾವ್” ಎಂದು ತೊದಲುತ್ತ ತೆರೆದಿದ್ದ ಕಣ್ಣುಗಳನ್ನು ಮುಚ್ಚಿ ಹಾಸಿಗೆಗೆ ಒರಗಿದ. ಒಂಟಿ ಕಣ್ಣೀರು ಮತ್ತಷ್ಟು ಒಸರಿ ಬಂತು.

ಮಹಿಳೆ ಶೋಷಣೆ ಬಗ್ಗೆ ನಮೋ ಸುರಿಸಿದ ಕೊಳಗಗಟ್ಟಲೆ ಕಣ್ಣೀರ ಬಗ್ಗೆ ಬಕೆಟ್ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಗಳನ್ನು ಕೊಟ್ಟು ಪ್ರಸಾರ ಮಾಡಿದವು. ಮಾತೃಹೃದಯದ ನಮೋ ಸಂಕಟಕ್ಕೆ ಲಂಡಭಕ್ತರ ಕರುಳು ಕಿವಿಚಿ ಬಂದು ಕಣ್ಣೀರಧಾರೆಯನ್ನು ಹರಿಸಿ, ಅಂಗಡಿಮುಂಗಟ್ಟು ಆಸ್ಪತ್ರೆಗಳ ಮೇಲೆ ದಾಳಿ ಎಸಗಿ ಧ್ವಂಸ ಮಾಡಿದರು. ರಸ್ತೆಗಳನ್ನು ಬಂದು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಶೋಷಿತಳಿಗೆ ಸಂತಾಪ ಸೂಚಿಸಿದರು.

ಫೋರೆನಿಕ್ಸ್ ಲ್ಯಾಬ್ ನಲ್ಲಿ ತನಿಖೆ ನಡೆಸಿದ್ದ ತಂತ್ರಜ್ಞರಿಗೆ ಅಸಹಜ, ವಿಶೇಷವಾದ ಫಲಿತಾಂಶ ದೊರೆತು ʼಯುರೇಕಾ!ʼ ಎಂದು ಸಂಭ್ರಮಗೊಂಡರು. “ನಮೋ ಅವರ ಒಂದೇ ಕಣ್ಣಿನಲ್ಲಿ ಅಶ್ರು ಬಂದದ್ದಕ್ಕೆ ಕಾರಣ ಸಿಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬಹುದು. ಆದರೆ, ನಮೋ ಅವರು ಸುರಿಸಿದ ಕಣ್ಣೀರು, ಮೊಸಳೆ ಕಣ್ಣೀರಿಗೆ ಹೋಲಿಕೆಯಾಗುತ್ತಿರುವುದು ತನಿಖೆಯಲ್ಲಿ ತಿಳಿದು ಬಂದು ಅಚ್ಚರಿ ತಂದಿದೆ” ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.

“ದೇಶದಲ್ಲಿ ಇಪ್ಪತ್ತು ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಯೋಧರ ಪತ್ನಿಯರನ್ನು ಸೇರಿ ಹಲವು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಾನಭಂಗ ಎಸಗಲಾಗಿದೆ. ಇದ್ಯಾವುದರ ಬಗ್ಗೆ ಉಸಿರೆತ್ತದೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುವ ಸಾಮ್ರಾಟ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಎಂಥಾ ನಾಚಿಗೆಗೇಡು!” ಎಂದು ದೇಶವಾಸಿಗಳು ನಮೋ ಆಷಾಢಭೂತಿತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.

ಚಂದ್ರಪ್ರಭ ಕಠಾರಿ
cpkatari@yahoo.com

Related Articles

ಇತ್ತೀಚಿನ ಸುದ್ದಿಗಳು

You cannot copy content of this page