Wednesday, December 10, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಸಮಾವೇಶದ ಹೆಸರಿನಲ್ಲಿ ಕೋಟ್ಯಂತರ ತೆರಿಗೆ ಹಣ ದುರ್ಬಳಕೆ – ಅಗಿಲೆ ಯೋಗೀಶ್

ರಾಜ್ಯಪಾಲರಿಗೆ ದೂರು ಸಲ್ಲಿಸಲು ಎಎಪಿ ಸಜ್ಜು : ಅಗಿಲೆ ಯೋಗೀಶ್ ಗಂಭೀರ ಆರೋಪ

ಹಾಸನ: ರಾಜ್ಯದ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ಸಮಾವೇಶದ ಹೆಸರಿನಲ್ಲಿ ದುರ್ಬಳಕೆ ಮಾಡಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಜೊತೆಗೆ ಬೆಂಗಳೂರಿನ ರಾಜಭವನಕ್ಕೆ ಅಧಿಕೃತ ದೂರು ಸಲ್ಲಿಸುವುದಾಗಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಫಲಾನುಭವಿಗಳಿಗೆ ಸೌಲಭ್ಯಗಳ ಸಮರ್ಪಣಾ ಸಮಾವೇಶ ಹೆಸರಿನಲ್ಲಿ ಹಾಸನದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿ ವ್ಯಯ ಮಾಡಿದೆ. ಜನರ ತೆರಿಗೆ ಹಣವನ್ನು ರಾಜಕೀಯ ಪ್ರದರ್ಶನಕ್ಕಾಗಿ ದುರ್ಬಳಕೆ ಮಾಡುವುದು ಹೇಗೆ ನ್ಯಾಯಸಮ್ಮತ ಎಂದು ಪ್ರಶ್ನಿಸಿದರು. ನಗರವೆಲ್ಲಾ ಕಟೌಟ್‌ಗಳಿಂದ ಅಲಂಕರಿಸಿರುವುದು ಹಣ ಯಾರ ಮನೆಯದ್ದು? ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಸನ ನಗರದೆಲ್ಲೆಡೆ ಭಾರೀ ಗಾತ್ರದ ಕಟೌಟ್‌ಗಳು, ಫ್ಲೆಕ್ಸ್ ಪೋಸ್ಟರ್‌ಗಳು, ರಾಜಕೀಯ ನಾಯಕರ ಭಾವಚಿತ್ರಗಳು ಅಳವಡಿಸಲಾಗಿದೆ. ಈ ಕಟೌಟ್‌ಗಳ ಹಣ ಸರ್ಕಾರದದೋ? ಅಧಿಕಾರಿಗಳದು? ಅಥವಾ ಸಾರ್ವಜನಿಕರ ತೆರಿಗೆ ಹಣವೇನು? ಜಿಲ್ಲಾಡಳಿತ ಸರ್ಕಾರದ ಕೈಗೊಂಬೆಯಂತೆ ವರ್ತಿಸಿ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದೆ ಎಂದು ದೂರಿದರು. ಸಾವಿರಾರು ಬಸ್ಸುಗಳನ್ನು ಕರೆಸಿಕೊಂಡು ಜನರನ್ನು ಕಾರ್ಯಕ್ರಮಕ್ಕೆ ತರಲಾಗಿದೆ? ಇದರ ವೆಚ್ಚ ಯಾರ ಮೇಲೆ? ಇವೆಲ್ಲದರ ಕುರಿತು ಜಿಲ್ಲಾಡಳಿತವೂ ಮೌನವಾಗಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಹಾಸನದಲ್ಲಿ ನಡೆದ ಸರ್ಕಾರಿ ಸಮಾವೇಶ ಇಷ್ಟು ದೊಡ್ಡ ಮಟ್ಟದ ಆಡಂಬರದ ಕಾರ್ಯಕ್ರಮವಾಗಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಂಡಿಲ್ಲ. ಸಾಮಾನ್ಯ ಸರ್ಕಾರಿ ಸಮಾರಂಭವನ್ನು ರಾಜಕೀಯ ರ‍್ಯಾಲಿಯಂತೆ ನಡೆಸಲಾಗಿದೆ. ಅಲ್ಲದೆ, ಪರಿಸರ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಗರಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಿರುವುದು ಕಾನೂನು ಬಾಹಿರ ಎಂದರು. ಫ್ಲೆಕ್ಸ್ ನಿಷೇಧ, ಪರಿಸರ ಮಾರ್ಗಸೂಚಿ, ಸರ್ಕಾರಿ ವೆಚ್ಚ ನಿಯಮಗಳು ಇವೆಲ್ಲವನ್ನು ಉಲ್ಲಂಘಿಸಿ ಅಧಿಕಾರಿಗಳು ತಾವೇ ನಿಯಮಬಾಹಿರ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಖರ್ಚಾದ ಪ್ರತಿಯೊಂದು ರೂಪಾಯಿಯ ಲೆಕ್ಕವನ್ನು ಆರ್.ಟಿ.ಐ.ಮೂಲಕ ಪಡೆಯುತ್ತೇನೆ. ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಿದ್ದೇನೆ ಎಂದು ಹೇಳಿದರು. ಜನರ ಹಣದಿಂದ ವೈಭವಶಾಲಿ ಸಮಾವೇಶಗಳನ್ನು ನಡೆಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಸಾರ್ವಜನಿಕರು ಇದನ್ನು ಗಮನಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯಕರ್ತೆ ಶೋಭಾ ಉಪಸ್ಥಿತರಿದ್ದರು.

;;;;;;;;;;;;;;; ;;;;;;;;;;;;;;;;; ;;;;;;;;;;;;;;;;; ;;;;;;;;;;;;;;;;;;; ;;;;;;;;;;;;;;;; ;;;;;;;;;;;;;;;;;;;


Srinivasa……..
I LIKE GOOD FRIEND ONLY

Related Articles

ಇತ್ತೀಚಿನ ಸುದ್ದಿಗಳು

You cannot copy content of this page