ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಭಾರಿ ಆರ್ಥಿಕ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬುಧವಾರ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಬ್ಯಾಂಕ್ ಖಾತೆಗಳಿಗೆ ಹಾಗೂ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೂ ನಿಯಮಬಾಹಿರವಾಗಿ ಹಣ ಜಮೆ ಮಾಡಲಾಗಿದೆ ಎಂಬ ಗಂಭೀರ ಅಂಶವನ್ನು ಲೆಕ್ಕಪರಿಶೋಧಕ ಮತ್ತು ಮಹಾಲೆಕ್ಕಪಾಲಕರ ವರದಿಯೇ ಬಹಿರಂಗಪಡಿಸಿದೆ ಎಂದು ನೆನಪಿಸಿದರು.
ಯೋಜನೆಯಡಿ ಒಟ್ಟು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ಸುಮಾರು 5,000 ಕೋಟಿ ರೂ. ಮೊತ್ತ ಅವರ ಖಾತೆಗಳಿಗೆ ತಲುಪಿಲ್ಲ ಎಂದು ಆರೋಪಿಸಿದ ಸಿ.ಟಿ. ರವಿ, ಈ ಬೃಹತ್ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬ ಬಲವಾದ ಅನುಮಾನ ಕಾಡುತ್ತಿದೆ ಎಂದರು. ಬಡ ಮಹಿಳೆಯರಿಗೆ ಸೇರಬೇಕಾದ ಹಣ ಲೂಟಿಯಾಗುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ ಮತ್ತು ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಈವರೆಗೆ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಸತತ ಎರಡು ತಿಂಗಳ ಕಾಲ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ತಲುಪದ ಕಾರಣ ಈ ವಿಷಯ ವಿಧಾನಸಭೆಯಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಸರ್ಕಾರ ಅಕ್ರಮ ತಡೆಯಲು ಅಥವಾ ವ್ಯವಸ್ಥೆ ಸರಿಪಡಿಸಲು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು. ಜೊತೆಗೆ, ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಈಗ ಗ್ಯಾರಂಟಿ ಯೋಜನೆಗಳಿಗೆ ಒಂದೊಂದೇ ಹೊಸ ಷರತ್ತುಗಳನ್ನು ವಿಧಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಜನರಿಗೆ ನೀಡಿದ ಭರವಸೆಯನ್ನು ಮುಕ್ತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.
