Friday, June 14, 2024

ಸತ್ಯ | ನ್ಯಾಯ |ಧರ್ಮ

ತುಳುನಾಡಿನ ಸಾಂಸ್ಕೃತಿಕ ಸ್ಥಿತ್ಯಂತರ- ನಾಗಾರಾಧನೆ

ಅಷ್ಟಮಂಗಲ, ಪ್ರತಿಷ್ಟೆ ಮತ್ತು ಬ್ರಹ್ಮಕಲಶ ಎಂಬ ಮೂರು ತಂತ್ರ ಏನು ಹೇಳುತ್ತದೋ ಹಾಗೇ ಕೇಳಬೇಕಾದ ಮತ್ತು ಅದನ್ನೇ ಪಾಲಿಸಬೇಕಾದ (ದು)ಸ್ಥಿತಿ ಬಂದಿದೆ. ಆ ಮೂಲಕ ಮೂಲನಿವಾಸಿಗಳ ಭಾವನೆಯಲ್ಲಿದ್ದ ನಾಗರಾಧನೆ ಮೇಲ್ವರ್ಗದ ಆರ್ಥಿಕ ತೆಕ್ಕೆಗೆ ಸಂಪೂರ್ಣ ಜಾರಿದೆ.  ಆದ್ದರಿಂದ ತುಳುನಾಡಿನ ನಾಗ ಜನ ಸಾಮಾನ್ಯರ ಮತ್ತು ಇಲ್ಲಿಯ ಮೂಲ ನಿವಾಸಿಗಳ ಕೈಗೆ ಮತ್ತೆ ಸಿಗುವುದು ಗಗನ ಕುಸುಮವೇ ಆಗಿದೆ-ಚೆಲುವರಾಜ ಕೋಡಿಮಲೆ

ತುಳುನಾಡಿನ ನಾಗಾರಾಧನೆಗೆ ಬಹಳ ಪುರಾತನವಾದ ಇತಿಹಾಸವಿದೆ. ಬೇಸಾಯದ ಪ್ರಕ್ರಿಯೆ ಆರಂಭವಾದ ಕಾಲದಲ್ಲಿ ತಗ್ಗು ಪ್ರದೇಶದ ಗದ್ದೆಗಳ ಬದುಗಳಲ್ಲಿ ವಾಸಿಸುತ್ತಿದ್ದ ನಾಗರ ಹಾವುಗಳು ಅಲ್ಲಿ ಕೆಲಸ ಮಾಡುತ್ತಿದ್ದ ಮೂಲ ನಿವಾಸಿಗಳಿಗೆ ಆಗಾಗ ಕಾಣಸಿಗುತ್ತಾ ಹೆಡೆ ಎತ್ತುತ್ತಾ ಹರಿದಾಡುತ್ತಿದ್ದವು. ತಂಪಾದ ಜಾಗದಲ್ಲೇ ಹೆಚ್ಚು ಕಾಣಸಿಗುವ ನಾಗನ ಗುಣ, ಶತ್ರುಗಳನ್ನು ಕಂಡಾಗ ಭಯಭೀತಗೊಂಡು ತನ್ನ ತಲೆಯ ಆಕಾರವನ್ನು ಬದಲಿಸುವ ಇನ್ನೊಂದು ಗುಣ, ಅಕಸ್ಮಾತ್ ಕಚ್ಚಿಬಿಟ್ಟರೆ ತಕ್ಷಣದಲ್ಲಿ ಸಾಯಿಸಬಹುದಾದ ವಿಷವಿರುವ ಅದರ ಮೂರನೇ ಗುಣ, ಗಂಡು ಹೆಣ್ಣು ಕಾಮಕೇಳಿಯಲ್ಲಿ ಬಹಳ ಹೊತ್ತು ಕಳೆಯುವ ಅದರ ಮತ್ತೊಂದು ಗುಣ, ಹೀಗೆ ನೀರು, ಸಂತಾನ ಅಥವಾ ಫಲವಂತಿಕೆ, ಭಯ, ವೈಶಿಷ್ಟ್ಯಗಳ ಈ ಗುಣಗಳಿಂದಾಗಿ ಸಹಜವಾಗಿಯೇ ಇಲ್ಲಿಯ ಮೂಲ ನಿವಾಸಿಗಳು ನಾಗನಿಗೆ ಗೌರವ, ಭಯ ಮತ್ತು ಭಕ್ತಿಯನ್ನು ತೋರಿಸುತ್ತಾ ಬಂದರು. ನಾಗ ನಿರಂತರ ಕಾಣ ಸಿಗುವ ಜಾಗಕ್ಕೆ ಜನ ಸಂಪರ್ಕವನ್ನು ಕಡಿಮೆಗೊಳಿಸಿ ಅಲ್ಲಿ ಒಂದಷ್ಟು ಕಾಡು ಪೊದೆ ಬೆಳೆಯುವಂತೆ ಮಾಡಿದರು. ಕ್ರಮೇಣ ಆ ಜಾಗದಲ್ಲೇ ನಾಗ ಇಲ್ಲದಿದ್ದರೂ ಕಾಡುಕಲ್ಲನ್ನು ಹಾಕಿ ಅದನ್ನು ನಾಗ ಬನವಾಗಿಸಿ ಕೈಮುಗಿಯ ತೊಡಗಿದರು. ಬೇಟೆ ಮುಗಿಸಿ ಬರುವ ನಾಗ ಆ ಪುಟ್ಟ ಕಾಡಿನ ತಂಪಾದ ಜಾಗದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣ ಸಿಗುತ್ತಲೂ ಇತ್ತು. ಹೀಗೆ ನಾಗಾರಾಧನೆ ತುಳುನಾಡಿನ ಗದ್ದೆ ಬದುಗಳಲ್ಲಿ ಆರಂಭವಾಯಿತು. ಏಣಿಲು ಗದ್ದೆಗೆ ಬರುತ್ತಿದ್ದ ಇಲಿಗಳೇ ಅವುಗಳ ಪ್ರಮುಖ ಆಹಾರವೂ ಆಗಿತ್ತು. ಇಲ್ಲಿಂದಲೇ ಕೃಷಿ ಕಾರ್ಮಿಕರಾಗಿದ್ದ ಬಹುತೇಕ ಮೂಲನಿವಾಸಿಗಳು ಹಾಗೂ ಕೃಷಿಕರು ನಾಗನನ್ನು ಆರಾಧಿಸಲು ಆರಂಭಿಸಿದರು. ಈ ಆರಾಧನೆ  ಚಳಿಗಾಲದಲ್ಲಿ ಅಂದರೆ ಸುಗ್ಗಿ ಬೇಸಾಯದ ಆರಂಭದ ಪೂಕರೆ ಸಂದರ್ಭದಲ್ಲಿ ಹೆಚ್ಚು ಕಂಡುಬರುತ್ತಿತ್ತು. ಹಾಗೆಂದು ಪುರಾತನ ನಾಗಾರಾಧನೆಗೆ ನಿರ್ದಿಷ್ಟ ಕಾಲವೆಂಬುದೇ ಇರಲಿಲ್ಲ.

 ಹೀಗೆ ಆರಂಭಗೊಂಡು ಸಹಜ ಸಂಸ್ಕೃತಿಯಾಗಿ ಆರಾಧಿಸುತ್ತಾ ಬಂದ ನಾಗಾರಾಧನೆಗೆ ಕ್ರಮೇಣ ಕಾಡುಕಲ್ಲಿನ ಜಾಗದಲ್ಲಿ ಬಳಪದ ಕಲ್ಲಿನಿಂದ ವಕ್ರವಕ್ರವಾಗಿ ರೂಪಿಸಿದ ನಾಗನ ಶಿಲ್ಪಗಳು ಬಂದವು. ನಿಧಾನಕ್ಕೆ ಅಲ್ಲಿಗೆ ದೇವಭಾಷೆ(?) ಮತ್ತು ಅಕ್ಷರದ ಅರಿವಿದ್ದ ವೈದಿಕರ ಪ್ರವೇಶವಾಯಿತು. ಸುಮಾರು ಐವತ್ತು-ಎಪ್ಪತ್ತು ವರ್ಷಗಳಿಂದ ನಾಗರಪಂಚಮಿ ಎನ್ನುವ ವೈದಿಕ ಆಚರಣೆಯ ನಾಗಾರಾಧನೆಯು ಅಲ್ಲಿಇಲ್ಲಿ ಕಾಣಿಸಲು ಆರಂಭಿಸಿತು. 

 ಕಳೆದ ಮೂವತ್ತು ನಲವತ್ತು ವರ್ಷಗಳಿಂದಲ್ಲಂತೂ ನಾಗಾರಾಧನೆ ಸಂಪೂರ್ಣವಾಗಿ ಬದಲಾಗಿ ಹೋಯಿತು. ನಾಗನ ಗ್ರಾನೈಟ್ ಅಥವಾ ಸಿಮೆಂಟ್ ಕಟ್ಟೆ, ವಿಭಿನ್ನ ಸಂಖ್ಯೆಯ ಹೆಡೆಗಳ ನಾಗಬಿಂಬ, ಅದ್ದೂರಿಯ ಪ್ರತಿಷ್ಟಾಪನೆ ಮತ್ತು ಬ್ರಹ್ಮಕಲಶ ಇತ್ಯಾದಿ ಲಕ್ಷಗಟ್ಟಲೆ ಖರ್ಚಿನ ದಾರಿಗಳು ತೆರೆದುಕೊಂಡವು. ಇದನ್ನು ನಡೆಸುವ ಮೊದಲು ಮತ್ತು ನಡೆಸಿದ ನಂತರ ತಾಂಬೂಲ, ಅಷ್ಟಮಂಗಲ ಪ್ರಶ್ನೆ ಎನ್ನುವ ಅಷ್ಟೇ ಖರ್ಚಿನ ವಿಶ್ಲೇಷಣೆಯ ಭಾಗವೂ ಸೇರಿಕೊಂಡಿತು. ಪರಿಣಾಮ ಪೂಕರೆಯ ಸಂದರ್ಭದಲ್ಲಿ ನಾಗಬಿಂಬವನ್ನು ಮುಟ್ಟಿ ಜೇಡಿಮಣ್ಣನ್ನು ಲೇಪಿಸಿ ತೊಳೆದು ಆರಾಧಿಸುತ್ತಿದ್ದ ಮೂಲ ನಿವಾಸಿ ವರ್ಗ ಅಥವಾ ನಾಗನನ್ನು ಈ ಪರಿಸರದ ವಿಶಿಷ್ಟ ಜೀವಿ ಎಂದು ತಿಳಿದು ಅದಿದ್ದಲ್ಲಿ ನೀರು, ಕಾಡು ಇರುತ್ತದೆ ಎಂದೆಲ್ಲ ತಿಳಿದಿದ್ದ ಮುಗ್ಧ ಜನ ವರ್ಗ ಸಂಪೂರ್ಣ ದೂರ ನಿಲ್ಲುವಂತಾಯಿತು. ಇದರ ಮತ್ತೂ ಮುಂದುವರಿದ ಭಾಗವಾಗಿ ಕೋಟಿ ಖರ್ಚಿಗೂ ಹೇಸದ ನಾಗಮಂಡಲ, ಡಕ್ಕೆಬಲಿಯಂತಹಾ ಆಚರಣೆ, ಸುಬ್ರಹ್ಮಣ್ಯದಂತಹಾ ದೇವಸ್ಥಾನಗಳು ಬೆಳೆಯುತ್ತಾ ಹೋಗುತ್ತಿವೆ.

ಇಂದು ನಾಗಾರಾಧನೆ ತುಳುನಾಡಿನಲ್ಲಿ ಉನ್ನತ ಮಟ್ಟದ ಆರ್ಥಿಕ ವ್ಯವಹಾರದ ಸಂಗತಿ. ಮೇಲ್ವರ್ಗಗಳು ಇದರ ಲಾಭದ ಮೇಲೆ ಕಣ್ಣಿಟ್ಟ ಕಾರಣ ಹಾಗೂ ಅದರಿಂದ ಗೌರವ ಪಡೆಯುತ್ತಿರುವ ಕಾರಣ ನಾಗನನ್ನು ಪ್ರಕೃತಿ ಸಹಜವಾಗಿ ಆರಾಧಿಸುತ್ತಿದ್ದ ಜಾಗ ಮತ್ತು ಜನರಿಗೆ ಅವರ ಇಚ್ಚೆಯಂತೆ ಕಾಣುವುದಕ್ಕೆ ಅವಕಾಶವಿಲ್ಲ. ಅಷ್ಟಮಂಗಲ, ಪ್ರತಿಷ್ಟೆ ಮತ್ತು ಬ್ರಹ್ಮಕಲಶ ಎಂಬ ಮೂರು ತಂತ್ರ ಏನು ಹೇಳುತ್ತದೋ ಹಾಗೇ ಕೇಳಬೇಕಾದ ಮತ್ತು ಅದನ್ನೇ ಪಾಲಿಸಬೇಕಾದ (ದು)ಸ್ಥಿತಿ ಬಂದಿದೆ. ಆ ಮೂಲಕ ಮೂಲನಿವಾಸಿಗಳ ಭಾವನೆಯಲ್ಲಿದ್ದ ನಾಗರಾಧನೆ ಮೇಲ್ವರ್ಗದ ಆರ್ಥಿಕ ತೆಕ್ಕೆಗೆ ಸಂಪೂರ್ಣ ಜಾರಿದೆ.  ಆದ್ದರಿಂದ ತುಳುನಾಡಿನ ನಾಗ ಜನ ಸಾಮಾನ್ಯರ ಮತ್ತು ಇಲ್ಲಿಯ ಮೂಲ ನಿವಾಸಿಗಳ ಕೈಗೆ ಮತ್ತೆ ಸಿಗುವುದು ಗಗನ ಕುಸುಮವೇ ಆಗಿದೆ.

ಚೆಲುವ ರಾಜ ಕೋಡಿಮಲೆ.

ಇದನ್ನೂ ಓದಿ-https://peepalmedia.com/cultural-transition-of-tulunad-bhootha-worship/ http://ತುಳುನಾಡಿನ ಸಾಂಸ್ಕೃತಿಕ ಸ್ಥಿತ್ಯಂತರ-ಭೂತಾರಾಧನೆ

Related Articles

ಇತ್ತೀಚಿನ ಸುದ್ದಿಗಳು