Home ವಿಶೇಷ ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ದೈವಗಳಿಗೆ ಅವಮಾನ: ಸಾಂಸ್ಕೃತಿಕವಾಗಿ ಅಪಾಯಕಾರಿ ನಡೆ

ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ದೈವಗಳಿಗೆ ಅವಮಾನ: ಸಾಂಸ್ಕೃತಿಕವಾಗಿ ಅಪಾಯಕಾರಿ ನಡೆ

0

ಸೃಷ್ಟಿಗೆ ಸಂಬಂಧಿಸಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಅನೇಕಾನೇಕ ಬಗೆಯ ಪುರಾಣಗಳು ಇವೆ. ಕರಾವಳಿಯನ್ನು ಪರಶುರಾಮ ಸೃಷ್ಟಿ ಎಂದು ಕಥಿಸುವವರು ಇರುವಂತೆಯೇ; ಕರಾವಳಿಯ ನೆಲ-ಜಲ-ಅರಣ್ಯದ ನಿಜವಾದ  ವಾರೀಸುದಾರರು ಯಾರು ಎಂಬುದರ ಬಗ್ಗೆ ಇಲ್ಲಿಯ ಮೂಲನಿವಾಸಿಗಳಾದ ಕೊರಗರಲ್ಲೂ  ಅವರದ್ದೇ ಆದ ಒಂದು  ಕಥೆಯೂ ಪ್ರಚಲಿತದಲ್ಲಿದೆ.

ಸಮುದ್ರ ಮೇಲೆ ಬಂದು ಕರಾವಳಿಯ ಮಣ್ಣನ್ನು ಕಬಳಿಸಿದ ಸಂದರ್ಭದಲ್ಲಿ ಕೊರಗ ದಂಪತಿಗಳು ತಮ್ಮ ಡೋಲಿನ ಒಳಗೆ ದವಸ ಧಾನ್ಯಗಳನ್ನು, ಬಿತ್ತನೆ ಬೀಜಗಳನ್ನು ತುಂಬಿಸಿಕೊಂಡು, ತಾವು ಡೋಲು ಸಹಿತ ನೀರಲ್ಲೇ ತೇಲುತ್ತ ಇದ್ದು, ಸಮುದ್ರ ಇಳಿದು ಸಹಜ ಸ್ಥಿತಿಗೆ ಬಂದಾಗ ತಾವು ಸಂಗ್ರಹಿಸಿದ್ದ ಬೀಜ ಬಿತ್ತಿ ಇಲ್ಲಿ ಸೃಷ್ಟಿ ಕ್ರಿಯೆಯಲ್ಲಿ ತೊಡಗಿದರು ಎಂಬುದು ಅತ್ಯಂತ ಪುರಾತನವಾದ ಜನಪದ ಕಥೆ.

ರಕ್ತಸಿಕ್ತ  ಕೊಡಲಿ ಎಸೆದು ಆ ಕೊಡಲಿಗೆ ಹೇಸಿ ಸಮುದ್ರ ಹಿಂಜರಿದ ಕಥೆಗಿಂತ ಕೊರಗ ದಂಪತಿಗಳ ಈ ಕಥೆ ಹೆಚ್ಚು ಆರ್ದ್ರವಾಗಿದೆ, ಹೆಚ್ಚು ಮಾನವೀಯವಾಗಿದೆ.

ಆದರೆ ಎಲ್ಲ ಕಡೆಗಳಲ್ಲಿ ಆಗುವಂತೆ ಇಲ್ಲೂ ಕೂಡ ಪರಶುರಾಮ ಸೃಷ್ಟಿಯ ಕಥೆಯನ್ನು ಸಹಜಗೊಳಿಸಲಾಗಿದೆ. ಪರಶುರಾಮ ಸೃಷ್ಟಿಯ ಈ ಕಥೆಯನ್ನು ಇಲ್ಲಿ ಜನಪ್ರಿಯ ಗೊಳಿಸಿದವರು ಯಕ್ಷಗಾನದ ಕಲಾವಿದರು ಮತ್ತು ಯಕ್ಷಗಾನ ಪ್ರಸಂಗ ರಚನೆ ಮಾಡಿದ ಕವಿಗಳು.

ಪರಶುರಾಮ ಸೃಷ್ಟಿ ಎಂದು ಹೇಳಲಾಗುವ ಈ ಭೂಭಾಗದಲ್ಲಿ ಮೊನ್ನೆ ಮೊನ್ನೆಯವರೆಗೆ ಪರಶುರಾಮನ ಹೆಸರಲ್ಲಿ ಒಂದು ಗುಡಿಯೂ ಇರಲಿಲ್ಲ. ನನ್ನ ತಿಳಿವಳಿಕೆಯ ಪ್ರಕಾರ ಬಹಳ ಇತ್ತೀಚೆಗೆ ಮುಂಡಾಜೆಯ ಪಕ್ಕ ಮತ್ತು ಉಡುಪಿಯ ಸಮೀಪದ ಕುಂಜಾರುಗಿರಿಯಲ್ಲಿ ಪರಶುರಾಮನ ಗುಡಿ ನಿರ್ಮಾಣ ಆಗಿದೆ.

ಮೂಲತಃ ಚಿತ್ಪಾವನ ಬ್ರಾಹ್ಮಣರ ಆರಾಧ್ಯ ದೈವವಾದ ಪರಶುರಾಮ ಕರಾವಳಿಯಲ್ಲಿ ಥೀಮ್ ಪಾರ್ಕ್‌ನ ಮುಖ್ಯ ಆಕರ್ಷಣೆಯಾಗಿ ಬಂದಿರುವುದು ಆಸ್ತಿಕರ ದೃಷ್ಟಿಯಿಂದಲೂ ಸಂಭ್ರಮಿಸುವ ವಿಷಯ ಅಲ್ಲ.  ಜನಸಮುದಾಯಗಳು ಭಕ್ತಿಯಿಂದ ನಡೆದುಕೊಳ್ಳುವ ದೇವರುಗಳು ಟೂರಿಂಗ್ ಸ್ಪಾಟ್ ಗಳ ಮುಖ್ಯ ಕೇಂದ್ರಗಳಾಗುವುದು, ಧರ್ಮ, ದೇವರು ಹಿಂದಾಗಿ ದುಡ್ಡು-ಕಾಸು ಮುಂದಾಗುವ ಕೇಡುಗಾಲ. ಧಾರ್ಮಿಕ ಶ್ರದ್ಧೆಯ ಕೇಂದ್ರಗಳು ವ್ಯಾಪಾರದ ಕೇಂದ್ರಗಳಾಗುವುದು  ಅಪಾಯಕಾರಿ ವಿದ್ಯಮಾನವೇ ಆಗಿದೆ.

ಇದರ ಜೊತೆಗೆ ಒಂದು ಸಮುದಾಯದ ದೇವರನ್ನು ಇನ್ನೊಂದು ಸಮುದಾಯದ ದೈವ- ದೇವರುಗಳ ತಲೆ ಮೇಲೆ ಕೂರಿಸುವುದನ್ನು ಸ್ವತಃ ಆ ದೇವರುಗಳೂ ಒಪ್ಪಲಾರರು.

ಸಮುದಾಯಗಳು ತಮ್ಮ ಅನನ್ಯತೆ ಮತ್ತು ಅಸ್ಮಿತೆಯ ಬಗ್ಗೆ ಹೆಚ್ಚು ಸೂಕ್ಷ್ಮ ಆಗಿರುವ ಕಾಲದಲ್ಲಿ ಇಂತಹ ಅ-ಸೂಕ್ಷ್ಮ ನಡೆಗಳು ಸಾಂಸ್ಕೃತಿಕವಾಗಿ ಅಪಾಯಕಾರಿ ಆಗಿವೆ.

ಆಧುನಿಕ ಭಾರತದಲ್ಲಿ ಸಂವಿಧಾನವೇ ಅಂತಿಮ ಎಂದು ನಾವೆಲ್ಲರೂ ಅಂಗೀಕರಿಸಿದ ಬಳಿಕ, ನಮಗೆ ನಾವೇ ಸಂವಿಧಾನವನ್ನು ಅರ್ಪಿಸಿಕೊಂಡ ಬಳಿಕ, ಹಾಗೂ ಸಾಂವಿಧಾನಿಕ ಪ್ರಜ್ಞೆ ಎಲ್ಲರಿಗೂ ಬಂದ ಬಳಿಕ ನಮ್ಮನಮ್ಮ ದೈವ-ದೇವರುಗಳನ್ನೂ ಪ್ರಜಾಸತ್ತಾತ್ಮಕವಾಗಿ ಸಮಾನತೆಯ ಪೀಠದಲ್ಲಿ ಪ್ರತಿಷ್ಠಾಪಿಸಬೇಕಾಗಿದೆ.

ನಿತ್ಯಾನಂದ ಬಿ.ಶೆಟ್ಟಿ

You cannot copy content of this page

Exit mobile version