Monday, November 3, 2025

ಸತ್ಯ | ನ್ಯಾಯ |ಧರ್ಮ

ಸುರಂಗ ರಸ್ತೆ ವಿವಾದ: ‘ಫ್ಲೈಟ್ ಡೋರ್ ತೆಗೆದವರು, ಟ್ರಂಪ್ ಬಳಿ ಉಗಿಸಿಕೊಂಡು ಬಂದವರಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ’ – ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಗರಂ

ಬೆಂಗಳೂರು: ಲಾಲ್‌ಬಾಗ್ ಬಳಿ ಉದ್ದೇಶಿತ ಟನಲ್ ರಸ್ತೆ ನಿರ್ಮಾಣ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಅತ್ಯಂತ ಕಟುವಾದ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ‘ಫ್ಲೈಟ್ ಡೋರ್ ಓಪನ್ ಮಾಡಿದ ದೊಡ್ಡ ಲೀಡರ್ ಅವರಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟನಲ್ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ತಿರುಗೇಟು ನೀಡಿದರು. “ಒಳ್ಳೆಯದು, ಅವರು ಜಾಗೃತಿ ಮೂಡಿಸಲಿ, ಸಹಿ ಸಂಗ್ರಹ ಮಾಡಲಿ. ನಾನು ಲಾಲ್‌ಬಾಗ್ ಹಾಳು ಮಾಡುವಷ್ಟು ಮೂರ್ಖನಲ್ಲ. ನನಗೂ ಅದರ ಇತಿಹಾಸ ಮತ್ತು ಮಹತ್ವದ ಅರಿವಿದೆ. ಬೇಕಿದ್ದರೆ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲೇ ಒಂದು ಸಮಿತಿ ರಚಿಸೋಣ. ಯಾರ್ಯಾರು ಸದಸ್ಯರು ಬೇಕು ಎಂದು ಅವರೇ ಪಟ್ಟಿ ಕೊಡಲಿ. ಇದು ನನ್ನ ಅಥವಾ ಬೇರೆಯವರ ಆಸ್ತಿಯಲ್ಲ, ಇದು ಸಾರ್ವಜನಿಕರಿಗಾಗಿ ರೂಪಿಸುತ್ತಿರುವ ಯೋಜನೆ,” ಎಂದು ಸವಾಲು ಹಾಕಿದರು.

ಬಿಜೆಪಿಯವರು ಕೇವಲ ರಾಜಕಾರಣ ಮಾಡುತ್ತಾರೆ, ಅವರಿಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, “ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದು ಯಾರು? ಟನಲ್ ಮಾಡಿದ್ದರಿಂದಲೇ ಅಲ್ವಾ ಮೆಟ್ರೋ ಮಾಡಲು ಸಾಧ್ಯವಾಗಿದ್ದು. ಬಿಜೆಪಿಯವರು ಮೆಟ್ರೋ ತಂದರಾ? ದಾಖಲೆಗಳನ್ನು ತೆಗೆದು ನೋಡಲಿ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾನು 10 ದೇಶಗಳನ್ನು ಸುತ್ತಿ ವರದಿ ಸಿದ್ಧಪಡಿಸಿ, ಅಂದಿನ ಕೇಂದ್ರ ಸರ್ಕಾರದಲ್ಲಿದ್ದ ವಾಜಪೇಯಿ ಹಾಗೂ ಅನಂತ್‌ಕುಮಾರ್ ಅವರಿಗೆ ಸಲ್ಲಿಸಿದ್ದೆವು. ಹಿಂದೆ ಜಾರ್ಜ್ ಫರ್ನಾಂಡಿಸ್ ಕಾಲದಲ್ಲಿ ಸ್ಟೀಲ್ ಫ್ಲೈಓವರ್ ಯೋಜನೆಗೂ ಇವರೇ ವಿರೋಧ ಮಾಡಿದ್ದರು. ಅವರದ್ದು ಯಾವಾಗಲೂ ಅಭಿವೃದ್ಧಿ ವಿರೋಧಿ ನಿಲುವು,” ಎಂದು ಹರಿಹಾಯ್ದರು.

ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, “ನಮ್ಮ ಎಂಪಿ ಒಬ್ಬ ‘ರೈಲು ಮಾಡಿ’ ಅಂತಾನೆ. ಎಲ್ಲಿ ಜಾಗ ಇದೆ? ಕೇಂದ್ರ ಸರ್ಕಾರ ಮೊದಲು ಜಾಗ ಕೊಡಲಿ. ‘ಟ್ರಾಯ್’ (TROY) ವ್ಯವಸ್ಥೆ ಮಾಡಿ ಎನ್ನುತ್ತಾರೆ, ಅದು ಪ್ರಾಯೋಗಿಕವಾಗಿ ಅಸಾಧ್ಯ. ತೇಜಸ್ವಿ ಸೂರ್ಯ ದೊಡ್ಡ ಬುದ್ಧಿವಂತ, ದೊಡ್ಡ ಲೀಡರ್. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದ್ದ. ಮೊದಲು ಕಾರು ಬೇಡ ಎಂದಿದ್ದ, ಆಮೇಲೆ ಮದುವೆ ಆಗುತ್ತಿದ್ದೇನೆ ಎಂದು ಹೊಸ ಕಾರಿಗೆ ಅರ್ಜಿ ಹಾಕಿದ್ದ,” ಎಂದು ಟೀಕಿಸಿದರು.

“ಅಷ್ಟೇ ಅಲ್ಲ, ಅಮೆರಿಕಾಗೆ ಹೋಗಿ ಅನುಮತಿ ಇಲ್ಲದೆ ಟ್ರಂಪ್ ಬಳಿ ಹೋಗಿ ಉಗಿಸಿಕೊಂಡು ಬಂದ. ಅಂತಹವರಿಂದ ನಾವು ಪಾಠ ಕಲಿಯಬೇಕಾ? ನಿನಗೆ ಹೊಸ ಕಾರು ಯಾಕೆ ಬೇಕಿತ್ತು? ನೀನು ಮೆಟ್ರೋದಲ್ಲಿ ಓಡಾಡು. ಕೇವಲ ನೀನಲ್ಲ, ಎಲ್ಲಾ ಬಿಜೆಪಿ ನಾಯಕರು ಕಾರು ಬಿಟ್ಟು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಲಿ. ಆಗ ವಾಹನ ದಟ್ಟಣೆಯ ಸಮಸ್ಯೆ ಜನರಿಗೆ ಅರ್ಥವಾಗುತ್ತದೆ,” ಎಂದು ಡಿಕೆಶಿ ತೀಕ್ಷ್ಣವಾಗಿ ಸವಾಲೆಸೆದರು.

ಒಟ್ಟಿನಲ್ಲಿ, ಟನಲ್ ರಸ್ತೆ ಯೋಜನೆಯು ಇದೀಗ ಆಡಳಿತ ಮತ್ತು ವಿಪಕ್ಷಗಳ ನಡುವಿನ ಪ್ರತಿಷ್ಠೆಯ ಕಣವಾಗಿದ್ದು, ಡಿ.ಕೆ. ಶಿವಕುಮಾರ್ ಅವರ ಈ ಖಡಕ್ ಹೇಳಿಕೆಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ವಾಕ್ಸಮರಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page