Wednesday, May 28, 2025

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಕನ್ನಡ ಜಿಲ್ಲೆಯನ್ನು  ಕೋಮು ಹಿಂಸಾ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಿ…

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಹಿಂಸೆಗಳು ಒಂದು ಶಾಪದಂತಾಗಿದೆ. ಹಿಂದು ಮುಸ್ಲಿಮರ ನಡುವೆ ವೈಷಮ್ಯ ಹುಟ್ಟಿಸಿ ಬಡವರ ಮನೆಯ ಮಕ್ಕಳನ್ನು ಬಲಿ ಕೊಡುವ ಪ್ರಚೋದಿತ ಬೆಂಕಿ ಮಾತುಗಳು ಜಿಲ್ಲೆಯನ್ನು  ಪ್ರಕ್ಷುಬ್ದ ಸ್ಥಿತಿಗೆ ತಂದು ನಿಲ್ಲಿಸಿದೆ.
ದಿನಕ್ಕೊಂದು ಕೊಲೆಗಳು, ನನ್ನನ್ನು ಯಾಕೆ ಸಾಯಿಸಿದರೆಂದು ಕೊಲೆಯಾದವನಿಗೂ ಗೊತ್ತಿಲ್ಲ, ನಾನೇಕೆ ಕೊಲೆ ಮಾಡಿದೆ ಎಂದು ಕೊಲೆಗಡುಕರಿಗೂ ಗೊತ್ತಿಲ್ಲ.
ಕೋಮು ಹಿಂಸೆಗೆ ಹರಿಯುತ್ತಿರುವ ಅಮಾಯಕರ ರಕ್ತಗಳು ಅರಬೀ ಕಡಲೇ ಕೆಂಪಾಗಿಸುವಂತಿದೆ.

ಜಿಲ್ಲೆಯ ಮುಸ್ಲಿಮರ ಕೂಗು ಅರಣ್ಯ ರೋದನವಾಗುತ್ತಿದೆ. ಕೊಲೆಯಾದವರು ಸ್ಮಶಾನ ಸೇರುತ್ತಿದ್ದಾರೆ, ಕೊಲೆಗಾರರು ಜೈಲುಪಾಲಾಗುತ್ತಿದ್ದಾರೆ ಇದಕ್ಕೆಲ್ಲಾ ಸಾಕ್ಷಿಯಾದ ಸಾಮಾನ್ಯ ಜನರು ಪ್ರತಿದಿನ ಸತ್ತು ಬದುಕುತ್ತಿದ್ದಾರೆ. ದಿನವೂ ದುಡಿದು ಬದುಕುವ ಜನರು ಕಂಗಾಲಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮಂಗಳೂರಿನ ಆರ್ಥಿಕತೆ ನರಸತ್ತಂತಾಗಿದೆ  ಸಣ್ಣ ಪುಟ್ಟ ವ್ಯಾಪಾರಿಗಳು ಕಷ್ಟ ನಷ್ಟ ಅನುಭವಿಸಿದ್ದಾರೆ. ಹೆಣ ಬೀಳುವುದನ್ನೇ ಕಾಯುತ್ತಿರುವ ಕೆಲವು ಮುನ್ನೆಲೆಯ ಮಾಧ್ಯಮಗಳು ಮಂಗಳೂರನ್ನು  ಕೊತ ಕೊತ ಕುದಿಸಲು, ರಕ್ತದೋಕುಳಿ ಹರಿಸಲು ಭಯಾನಕ ಸುದ್ದಿಗಳನ್ನು ಹರಡಿ ಮಂಗಳೂರಿಗೆ ಹೊರಗಿನವರನ್ನು ಕಾಲಿಡದಂತೆ ಮಾಡುತ್ತಿದೆ.

ಜನರಿಗೆ ಧೈರ್ಯ ತುಂಬಿ ಕ್ರಿಮಿನಲುಗಳ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಬೇಕಾದ ಪೊಲೀಸರು ಜನರನ್ನೇ ಅಟ್ಟಾಡಿಸಿ ಬೀದಿಗಿಳಿಯದಂತೆ ಮಾಡಿ ಮನೆಗಳಲ್ಲೇ ಜನರನ್ನು ಬಂಧಿಸಿಡಲಾಗುತ್ತಿದೆ

ಕೋಮು ಹಿಂಸೆಗಳನ್ನು ನಿಯಂತ್ರಿಸಲಾಗದ ಮತ್ತು ದ್ವೇಷ ಭಾಷಣಗಾರರನ್ನು, ಕಮ್ಯುನಲ್ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದ, ಮತೀಯ ಸಂಘರ್ಷಗಳನ್ನು ಹತ್ತಿಕ್ಕಲಾಗದ ರಾಜ್ಯ ಸರಕಾರ ದ.ಕ ಜಿಲ್ಲೆಯನ್ನು ಕೋಮು ಹಿಂಸಾಪೀಡಿತ ಜಿಲ್ಲೆ ಎಂದು ಘೋಷಣೆ  ಮಾಡಿ  ಜಿಲ್ಲೆಗೆ ದೊಡ್ಡ ಬೀಗ ಜಡಿದು ಬಿಡಲಿ..

ಬಿಕೆ ಇಮ್ತಿಯಾಝ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page