ಕಳ್ಳನೆಂದು ಆರೋಪಿಸಿ ದಲಿತ ಸಮುದಾಯದ ವ್ಯಕ್ತಿಯನ್ನು ಗ್ರಾಮಸ್ಥರು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಫತೇಹ್‌ಪುರದ ನಿವಾಸಿ ಹರಿ ಓಂ ಎಂದು ಗುರುತಿಸಲಾಗಿದೆ.
ಈ ಸಂಬಂಧ 5 ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ. ಜತೆಗೆ ನಿರ್ಲಕ್ಷದ ಆರೋಪದಡಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಳ್ಳ ಎಂದು ಶಂಕಿಸಿದ ಪರಿಣಾಮ ಹರಿ ಓಂ ಎಂಬುವವನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಥಳಿತದ ವಿಡಿಯೋ ಕೂಡ ಉತ್ತರ ಪ್ರದೇಶ ಭಾಗದಲ್ಲಿ ವೈರಲ್ ಆಗಿದೆ.
ಗ್ರಾಮದಲ್ಲಿ ಮನೆಗಳ ಕಳ್ಳತನಕ್ಕಾಗಿ ಗುಂಪೊಂದು ಡ್ರೋನ್ ಬಳಕೆ ಮಾಡುತ್ತಿದೆ ಎಂಬ ವದಂತಿ ಹಬ್ಬಿತ್ತು. ಬಗ್ಗೆ ವದಂತಿ ಹಬ್ಬಿದ್ದರಿಂದ ಕೆಲ ಗ್ರಾಮಸ್ಥರು ರಾತ್ರಿ ಹೊತ್ತು ಕಾವಲು ಕಾಯುತ್ತಿದ್ದರು. ಸಂತ್ರಸ್ತ ಹರಿ ಓಂ ಅವರು ಬುಧವಾರ ರಾತ್ರಿ ಗ್ರಾಮದಲ್ಲಿ ಹೋಗುತ್ತಿದ್ದ ವೇಳೆ ಗ್ರಾಮಸ್ಥರು ತಡೆದು ಬಡಿಗೆಗಳಿಂದ ಮನಬಂದಂತೆ ಥಳಿಸಿದ್ದಾರೆ.
ಗುಂಪು ‘ಬಾಬಾವಾಲೆ’ ಎಂದು ಹೇಳುವಂತೆ ಒತ್ತಾಯಿಸಿದರೂ ಸಂತ್ರಸ್ತ ಯುವಕ ರಾಹುಲ್ ಗಾಂಧಿ ಅವರ ಹೆಸರನ್ನು ಪದೇ ಪದೇ ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಹರಿ ಓಂ ಅವರ ಮೃತದೇಹವು ಗುರುವಾರ ಬೆಳಿಗ್ಗೆ ಸಮೀಪದ ರೈಲು ಹಳಿ ಪಕ್ಕ ಪತ್ತೆಯಾಗಿದೆ. ಅವರ ಬಟ್ಟೆ ಹರಿದಿತ್ತು, ಮೈಮೇಲೆ ಗಾಯದ ಗುರುತುಗಳಿದ್ದವು ಎಂದರು.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಪಕ್ಷ ‘ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಬೇಕು’ ಎಂದು ಆಗ್ರಹಿಸಿದೆ. ಸಂತ್ರಸ್ತನ ಕುಟುಂಬಸ್ಥರಿಗೆ ₹1 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದೆ.
ಘಟನೆ ಖಂಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದೆ. ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರು ಸಂತ್ರಸ್ತನ ಕುಟುಂಬಸ್ಥರೊಂದಿಗೆ ಮಾತನಾಡಿ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.