Saturday, July 12, 2025

ಸತ್ಯ | ನ್ಯಾಯ |ಧರ್ಮ

ಗುಜರಾತ್ ನಲ್ಲಿ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿ ಜಾತಿ ದೌರ್ಜನ್ಯ: ಪೊಲೀಸರಿಂದ ಸಮರ್ಥನೆ

ಗಾಂಧಿನಗರ: ಮದುವೆಯ ಮೆರವಣಿಗೆ ವೇಳೆ ದಲಿತ ವರನನ್ನುಬಲವಂತವಾಗಿ ಕುದುರೆಯಿಂದ ಕೆಳಗಿಳಿಸಿ ಜಾತಿ ನಿಂದನೆ ಮಾಡಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಚಡಸಾನಾ ಗ್ರಾಮದಲ್ಲಿ ನಡೆದಿದೆ.


ಈ ಕುರಿತು ವರನ ಸೋದರ ಸಂಬಂಧಿ ಮತ್ತು ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ನಾಲ್ವರು ಯುವಕರನ್ನು ಬಂಧಿಸಿದ್ದಲ್ಲದೇ ಗಾಂಧಿನಗರದ ಮಾನಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ವರ ಸುಮಾರು 100 ಜನರೊಂದಿಗೆ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ. ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ಮೆರವಣಿಗೆ ನಡೆಸದಂತೆ ಬೆದರಿಕೆ ಹಾಕಿ ಗಲಾಟೆ ಶುರು ಮಾಡಿದ್ದಾರೆ, ಇನ್ನೊಂದಿಷ್ಟು ಜನ ಅವನ ಜೊತೆಗೂಡಿ ಜನಾಂಗೀಯ ನಿಂದನೆಯಲ್ಲಿ ತೊಡಗಿದ್ದಾರೆ.


ವರನ ಸಹೋದರ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನನ್ನ ಸಹೋದರನನ್ನು ಬಲವಂತವಾಗಿ ಕುದುರೆಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ನಮ್ಮ ಕುಟುಂಬ ಸದಸ್ಯರು ಮತ್ತು ಸಮುದಾಯದ ಮುಖ್ಯಸ್ಥರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದೆವು. ಈ ಸಂದರ್ಭದಲ್ಲಿ ಇತರ ಮೂವರು ಮಧ್ಯಪ್ರವೇಶಿಸಿ ನನ್ನ ಸಹೋದರನನ್ನು ಕುದುರೆಯಿಂದ ಕೆಳಗಿಳಿಸಿ ಜಾತಿ ನಿಂದನೆ ಮಾಡಿದ್ದಾರೆ. ಮತ್ತು ಕುಟುಂಬದ ಸದಸ್ಯರ ಕಪಾಳಕ್ಕೆ ಹೊಡೆದರು ಎಂದು ಆರೋಪಿಸಲಾಗಿದೆ.


ಹೊಲೆಮಾದಿಗರಾದ ನೀವು ಎಲ್ಲೆ ಇರಬೇಕೋ ಅಲ್ಲೇ ಇರಬೇಕು. ನೀವು ಕುದುರೆ ಸವಾರಿ ಮಾಡುವಂತಿಲ್ಲ, ನಿಮಗೆ ಹಳ್ಳಿಯ ಸಂಪ್ರದಾಯ ಗೊತ್ತಿಲ್ಲವೇ? ಏನಾದರೂ ಮಾಡುವ ಮುನ್ನ ನೀವು ನಮ್ಮಿಂದ ಅನುಮತಿ ಪಡೆಯಬೇಕು. ಠಾಕೋರ್‌ಗಳು ಮಾತ್ರ ಕುದುರೆ ಸವಾರಿ ಮಾಡಬೇಕು ಎಂದು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.


ಪೊಲೀಸರಿಂದ ಸಮರ್ಥನೆ
ಈ ಪ್ರಕರಣಗದ ಗಾಂಧಿನಗರ ಕಲೋಲ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮನ್ವಾರ್ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ದುಷ್ಕರ್ಮಿಗಳ ನಡೆಯನ್ನು ಸಮರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ ಮಾತನಾಡಿದ್ದಾರೆ.
ಮಾನಸಾದ ಚಡಸಾನ ಗ್ರಾಮದಲ್ಲಿ ಮದುವೆ ಮೆರವಣಿಗೆ ಡಿಜೆ ಸೌಂಡ್ ಸಿಸ್ಟಂನೊಂದಿಗೆ ತೆರಳುತ್ತಿದ್ದುದರಿಂದ ಗ್ರಾಮದ ಮೂವರು ವಿರೋಧಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಡಿಜೆ ವಿಷಯಕ್ಕೆ ಘರ್ಷಣೆ ಪ್ರಾರಂಭವಾಯಿತು ಮತ್ತು ನಂತರ ಕುದುರೆಯ ಮೇಲೆ ಕುಳಿತುಕೊಂಡವನನ್ನು ಕೆಳಗೆ ಇಳಿಸಿದರು. ಪೊಲೀಸರು ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸೈಲೇಶ್ ಠಾಕೋರ್, ಜಯೇಶ್ ಠಾಕೋರ್, ಸಮೀರ್ ಠಾಕೋರ್ ಮತ್ತು ಅಶ್ವಿನ್ ಠಾಕೋರ್ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page