Thursday, June 20, 2024

ಸತ್ಯ | ನ್ಯಾಯ |ಧರ್ಮ

ಮುಖ್ಯಮಂತ್ರಿಗೆ ಪ್ರಶ್ನಿಸಲು ಹೊರಟ ದಲಿತ ಮುಖಂಡರ ವಶಕ್ಕೆ ಪಡೆದ ಪೊಲೀಸರು

ತೀರ್ಥಹಳ್ಳಿ : ಸಾರ್ವಜನಿಕ ಕೆಲಸಗಾರರಿಂದ ವಿಪರೀತ ಲಂಚದ ಬೇಡಿಕೆ, ಹದಗೆಟ್ಟ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಅವಕಾಶ ಕೋರಿದ್ದ ತೀರ್ಥಹಳ್ಳಿ ತಾಲ್ಲೂಕು ದಲಿತ ಮುಖಂಡ ಇಬ್ಬರನ್ನು ಇಂದು ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಪ್ರಗತಿ ಪರಿಶೀಲನೆಗೆಂದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊಪ್ಪ ಮತ್ತು ತೀರ್ಥಹಳ್ಳಿಗೆ ಆಗಮಿಸುವ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿ, ಸ್ಥಳೀಯ ಹದಗೆಟ್ಟ ಆಡಳಿತ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಶಿವಮೊಗ್ಗ ಜಿಲ್ಲಾ ಮಟ್ಟದ ಮುಖಂಡರು ಸಿದ್ಧತೆ ನಡೆಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಸೂಕ್ತ ಪರಿಹಾರ ಮತ್ತು ಬೇಡಿಕೆಗಳ ಈಡೇರಿಸಲು ಮುಂದಾಗದಿದ್ದರೆ ಅಲ್ಲೇ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದಾಗಿಯೂ ನವೆಂಬರ್ 26 ರ ಶನಿವಾರ ಪತ್ರಿಕಾ ಹೇಳಿಕೆ ನೀಡಿದ್ದರು. ಈ ಸಂಬಂಧ ನವೆಂಬರ್ 27 ರ ಭಾನುವಾರ ಬೆಳಿಗ್ಗೆಯೇ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕೀಗಡಿ ಕೃಷ್ಣಮೂರ್ತಿ ಮತ್ತು ಹಾರೇಗೊಳಿಗೆ ವಿಶ್ವನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಹದಗೆಟ್ಟ ಆಡಳಿತ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕು, ಬಗರ್ ಹುಕುಂ ಸಾಗುವಳಿ ಜಮೀನಿಗೆ ದಾಖಲೆ ಒದಗಿಸಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಅಕ್ರಮ ಸಕ್ರಮ, 94 ಸಿ, 94ಸಿಸಿ, ಹಕ್ಕುಪತ್ರ ಇದ್ದರೂ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿಲ್ಲ. ಇಂತಹ ಹಕ್ಕುಪತ್ರ ಇದ್ದರೆಷ್ಟು ಬಿಟ್ಟರೆಷ್ಟು. ಇವುಗಳನ್ನು ಸರಿಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಾಲ್ಲೂಕಿನಲ್ಲಿ ಮಿತಿಮೀರಿದ ಸರ್ಕಾರಿ ಅಧಿಕಾರಿಗಳ ಲಂಚದ ಹಾವಳಿಗೆ ಕಡಿವಾಣ ಹಾಕಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಇಟ್ಟು ದಲಿತ ಮುಖಂಡರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ಆಶಯದಂತೆ ಸಾರ್ವಜನಿಕರು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಪ್ರಶ್ನೆ ಮಾಡುವುದನ್ನು ಹತ್ತಿಕ್ಕಲು ಇದೇನು ರಾಜಪ್ರಭುತ್ವ ಅಲ್ಲ. ಆ ಮೂಲಕ ತಾಲ್ಲೂಕಿನಲ್ಲಿ ಅರಾಜಕತೆ ಸೃಷ್ಟಿ ಆಗಿದೆ ಎಂಬುದನ್ನು ಬಿಜೆಪಿ ಮುಖಂಡರೇ ಸಾಭೀತುಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು