Saturday, June 15, 2024

ಸತ್ಯ | ನ್ಯಾಯ |ಧರ್ಮ

ಪಿರಿಯಾಪಟ್ಟಣ : ಧಾರ್ಮಿಕ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ನಿರಾಕರಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದ ದೇವಸ್ಥಾನವೊಂದರಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದ ವೇಳೆ ಡೋಲು ಬಾರಿಸಲು ನಿರಾಕರಿಸಿದ್ದಕ್ಕೆ 65 ವರ್ಷದ ದಲಿತ ವ್ಯಕ್ತಿಯೊಬ್ಬರ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.

ಗ್ರಾಮದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯಲ್ಲಿ ಡೋಲು ಬಾರಿಸಲು ದಲಿತ ಪರಮಯ್ಯ ಅವರನ್ನು ಕರೆಯಲಾಗಿತ್ತು. ಆದರೆ ಪರಮಯ್ಯ ಅವರು ಹುಷಾರಿಲ್ಲದ ಕಾರಣ ಡೋಲು ಬಾರಿಸುವುದಕ್ಕೆ ನಿರಾಕರಿಸಿದ್ದಾರೆ. ಪರಮಯ್ಯನವರ ಪ್ರತಿಕ್ರಿಯೆಯಿಂದ ಕೋಪಗೊಂಡ ಅದೇ ಗ್ರಾಮದ ಕುಮಾರ್ ಎನ್ನುವ ವ್ಯಕ್ತಿ ಪರಮಯ್ಯನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ” ಎಂದು ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದ್ದು, ದಶಕಗಳಿಂದ ಎಲ್ಲಾ ಸಮುದಾಯದವರು ಒಟ್ಟಾಗಿ ವಾರ್ಷಿಕ ಪೂಜೆಯನ್ನು ಆಚರಿಸುತ್ತಿದ್ದಾರೆ. ಡೋಲು ಬಾರಿಸುವುದು ದಲಿತ ಸಮುದಾಯದ ಸಾಂಪ್ರದಾಯಿಕ ಕೆಲಸವಾದ್ದರಿಂದ ಪರಮಯ್ಯ ಅವರಿಗೆ ಡೋಲು ಬಾರಿಸಲು ಒತ್ತಾಯಿಸಲಾಗಿದೆ.

“ನನ್ನ ತಂದೆ ಅಸ್ವಸ್ಥರಾಗಿದ್ದಾರೆ, ಅದಕ್ಕಾಗಿಯೇ ಅವರು ಡ್ರಮ್ ನುಡಿಸಲು ನಿರಾಕರಿಸಿದರು. ದೇವಸ್ಥಾನದ ಕಮಿಟಿಯವರಿಗೆ, ಡೋಲು ಬಾರಿಸುವ ಜವಾಬ್ದಾರಿ ನಾನು ವಹಿಸುತ್ತೇನೆ ಎಂದು ತಿಳಿಸಿದರೂ ಆರೋಪಿಗಳು ನನ್ನ ತಂದೆಗೆ ಡೋಲು ಬಾರಿಸುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ನನ್ನ ತಂದೆ ನಿರಾಕರಿಸಿದಾಗ ಹಲ್ಲೆ ನಡೆಸಿ, ಜಾತಿ ನಿಂದಿಸಿದ್ದಾರೆ’ ಎಂದು ಪರಮಯ್ಯ ಅವರ ಪುತ್ರ ಬಸವರಾಜು ದೂರಿದ್ದಾರೆ.

‘ಗ್ರಾಮದ ಆರಾಧ್ಯ ದೈವ ಎನಿಸಿರುವ ಬಸವೇಶ್ವರ ದೇವಸ್ಥಾನದ ಪೂಜೆಯಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ದಶಕಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಘಟನೆಯಿಂದ ಗ್ರಾಮದ ಐಕ್ಯತೆಗೆ ಧಕ್ಕೆ ಉಂಟಾಗಬಹುದು. ಆ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ಹಾಗೂ ಇತರರ ನಡುವಿನ ಬಿಕ್ಕಟ್ಟು ನಿವಾರಣೆಗೆ ಮುಂದಿನ ವಾರದಲ್ಲಿ ಎಲ್ಲ ಸಮುದಾಯಗಳ ಜತೆ ಸಭೆ ನಡೆಸಲಾಗುವುದು ಎಂದು ಮಾಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಶೈಲಜಾ ತಿಳಿಸಿದ್ದಾರೆ.

ಆರೋಪಿ ಕುಮಾರ್ ದೇವಸ್ಥಾನ ಸಮಿತಿಯ ನಿರ್ದೇಶಕರಾಗಿದ್ದು, ಹಿಂದಿನ ವರ್ಷಗಳಲ್ಲಿ ಮಾಡಿದಂತೆ ವಾರ್ಷಿಕ ದೇವಸ್ಥಾನದ ಪೂಜೆಯನ್ನು ಸುಗಮವಾಗಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಶೈಲಜಾ ತಿಳಿಸಿದ್ದಾರೆ.

“ನಾವು ಕುಮಾರ್ ವಿರುದ್ಧ ಎಸ್‌ಸಿ / ಎಸ್‌ಟಿ ತಡೆ ಕಾಯಿದೆ, ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಪಿರಿಯಾಪಟ್ಟಣ ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ. ”ಪಿರಿಯಾಪಟ್ಟಣ ತಾಲೂಕು ಸರಕಾರಿ ಆಸ್ಪತ್ರೆಗೆ ಪರಮಯ್ಯ ಅವರನ್ನು ದಾಖಲು ಮಾಡಲಾಗಿದೆ. ಹಾಗೆಯೇ ಆರೋಪಿ ಕುಮಾರ್ ಹಾಗೂ ಘಟನೆ ಸಮಯದಲ್ಲಿ ಆರೋಪಿ ಪರ ನಿಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಇನ್‌ಸ್ಪೆಕ್ಟರ್ ಶ್ರೀಧರ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು