Monday, June 24, 2024

ಸತ್ಯ | ನ್ಯಾಯ |ಧರ್ಮ

ದಲಿತ ಮಗುವನ್ನು ಥಳಿಸಿ ಕೊಂದ ಶಿಕ್ಷಕ; ರಾಜಸ್ಥಾನದಲ್ಲಿ ಹೀಗೊಂದು ಪೈಶಾಚಿಕ ಕೃತ್ಯ

ದೇಶ ಒಂದು ಕಡೆ ಸ್ವಾತಂತ್ರ್ಯ ದಿನದ 75 ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದ್ದರೆ, ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಶಿಕ್ಷಕನೊಬ್ಬ 9 ವರ್ಷದ ಮಗುವನ್ನು ಥಳಿಸಿ ಕೊಂದ ಪ್ರಕರಣವೊಂದು ದಾಖಲಾಗಿದೆ. ದುರಂತ ಎಂದರೆ ದಲಿತ ಸಮುದಾಯಕ್ಕೆ ಸೇರಿದ ಆ ಮಗು ಕುಡಿಯುವ ನೀರಿನ ಪಾತ್ರೆ ಮುಟ್ಟಿದ ಏಕೈಕ ಕಾರಣಕ್ಕೆ ಶಿಕ್ಷಕ ತನ್ನ ಪೈಶಾಚಿಕ ಕೃತ್ಯ ಮೆರೆದಿದ್ದಾನೆ.

ಹಲ್ಲೆ ನಡೆದ ಕೆಲವೇ ಹೊತ್ತಿನಲ್ಲಿ ಅಹಮದಾಬಾದಿನ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಯಿತು. ಆದರೆ ಮಗುವಿನ ಮೇಲೆ ಗಂಭೀರವಾದ ಗಾಯ ಮತ್ತು ಶಿಕ್ಷಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಗು ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದೆ ಎಂದು ವರದಿಯಾಗಿದೆ.

ಜಲೋರ್ ಜಿಲ್ಲೆಯ ಸರಸ್ವತಿ ವಿದ್ಯಾಮಂದಿರದಲ್ಲಿ 3 ನೇ ತರಗತಿಯಲ್ಲಿ ಓದುತ್ತಿದ್ದ ಇಂದ್ರ ಕುಮಾರ್ ಮೇಲ್ಜಾತಿಯ ಮಕ್ಕಳು ಕುಡಿಯುವ ನೀರನ್ನು ಕುಡಿದಿದ್ದಾನೆ. ಇದನ್ನು ಕಂಡ ಶಿಕ್ಷಕ ಚೈಲ್ ಸಿಂಗ್, ಸಿಂಗ್ ಸಮುದಾಯದ ಮಕ್ಕಳಿಗೆ ಇಟ್ಟ ನೀರನ್ನು ಕುಡಿದಿದ್ದೀಯ ಎಂದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತನ್ನ ಮಗನಿಗೆ ಅದು ಯಾವ ಜಾತಿಯವರು ಕುಡಿಯುವ ನೀರು ಎಂಬ ಬಗ್ಗೆ ತಿಳಿದಿರಲಿಲ್ಲ. ತಿಳಿಯದೇ ಮಾಡಿದ ಕೆಲಸಕ್ಕೆ ಈ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಮೃತ ಮಗುವಿನ ತಂದೆ ದೇವರಾಮ್ ಮೇಘವಾಲ್ ತಮ್ಮ ಸಂಕಟ ತೋಡಿಕೊಂಡಿದ್ದಾರೆ.

“ತನ್ನ ಮಗನ ಸಾವಿಗೆ ಜಾತಿ ತಾರತಮ್ಯವೇ ಮುಖ್ಯ ಕಾರಣ, ನಾವು ದಲಿತರಾಗಿದ್ದ ಕಾರಣ ಅರಿವಿಗೆ ಬಾರದೇ ಮೇಲ್ಜಾತಿಯವರಿಗೆ ಇಟ್ಟಿದ್ದ ನೀರು ಮುಟ್ಟಿದ ಹಿನ್ನೆಲೆಯಲ್ಲಿ ಈ ರೀತಿಯ ನೋವು ತಿನ್ನಬೇಕಾಯಿತು” ಎಂದು ಮಾಧ್ಯಮಗಳಿಗೆ ತಮ್ಮ ನೋವು ತೋಡಿಕೊಂಡರು.

ಈ ಹಿನ್ನೆಲೆಯಲ್ಲಿ ಮಗುವಿನ ಕುಟುಂಬಸ್ಥರು ಶಿಕ್ಷಕನ ಮೇಲೆ ದೂರು ದಾಖಲಿಸಿದ್ದಾರೆ. ಕೊಲೆ ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಪ್ರಕರಣದ ಅಡಿಯಲ್ಲಿ ಶಿಕ್ಷಕನ ಮೇಲೆ FIR ದಾಖಲಾಗಿದ್ದು ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಲೋರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರವಾಲ್ ತಿಳಿಸಿದ್ದಾರೆ.

ಘಟನೆ ಸಂಬಂಧ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ನೋಟ್ ಟ್ವಿಟ್ ಮಾಡಿದ್ದು ಮಗುವಿನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಿಂದ ನೋವುಂಟಾಗಿದೆ. ಶಿಕ್ಷಕನನ್ನು ಬಂಧಿಸಿ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು