Thursday, June 13, 2024

ಸತ್ಯ | ನ್ಯಾಯ |ಧರ್ಮ

ದಲಿತರ ಮನೆ ಭೇಟಿ:‌ ಜಾತಿವಾದ ಪೋಷಣೆಯ ಮಂದರೂಪ

ದಲಿತರ ಮನೆ ಹುಡುಕಿಕೊಂಡು ಬಂದು ಹೋಗುವುದೆಂದರೆ ತಾವು ಸವರ್ಣೀಯರು, ನೀವು ನಿಮ್ನರು ಎಂಬ ಬಗೆದು ನೋಡುವ ನೋಟವನ್ನು ಇನ್ನಷ್ಟು ಆಳಕ್ಕೆ ಬಿತ್ತಿದಂತೆಯೇ ಸರಿ. ಇದು ಒಂದು ರೀತಿಯ ಅಟ್ರಾಸಿಟಿಯ ಮಂದ ರೂಪವೇ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದೇವೆ. ಸಮಾನತೆಯ ಆಶಯ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದಕ್ಕೆ ಪ್ರತಿದಿನವು ಉದಾಹರಣೆಗಳು ಅಂಗೈ ಹುಣ್ಣಿನಂತೆ ಕಾಣುತ್ತಲೆ ಇವೆ.

ಈ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತವರ ಬಳಗದವರು ದಲಿತರ ಮನೆಯಲ್ಲಿ ಮಂಡಕ್ಕಿ ಇತ್ಯಾದಿ ತಿನಿಸು ತಿಂದದ್ದು ಒಂದು ಮಹತ್ತರ ಸಾಧನೆಯಂತೆ ಆತ್ಮರತಿಯಲ್ಲಿ ಮೀಯುತ್ತಿದ್ದಾರೆ. ದಲಿತರ ಮನೆಯಲ್ಲಿ ಊಟ/ ಉಪಹಾರ/ ವಾಸ್ತವ್ಯ., ದಲಿತರ ಪಾದ ತೊಳೆದು ಊದುಬತ್ತಿ ಹಚ್ಚುವುದು ಇವೆಲ್ಲಾ ಶೋಕಿಯಾಗಿ ಬಿಟ್ಟಿವೆ. ಚುನಾವಣೆ ಕಾಲಕ್ಕೊ, ಮತ್ಯಾವುದೋ ಸಂದರ್ಭದಲ್ಲಿ ದಲಿತರ ಮನೆಗಳ ಹುಡುಕಿಕೊಂಡು ಹೋಗುವುದರ ಹಿಂದೆ ಒಂದು ಆತ್ಮವಂಚನೆಯ ರಾಜಕಾರಣ ಮಾತ್ರ ಅಡಗಿದೆಯೇ ಹೊರತು ಜಾತ್ಯತೀತ ಆಶಯದ ಅನುಷ್ಠಾನದ ಪ್ರಾಮಾಣಿಕ ನಡೆಯಲ್ಲ ಎಂಬುದನ್ನು ಭೂತಗನ್ನಡಿ ಹಾಕಿ ‌ಹುಡುಕಬೇಕಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಯಾಗಿರುವ ದಲಿತರೇ ಆದ ಗೋವಿಂದ ಕಾರಜೋಳ,  ತಮ್ಮದೇ ಪಕ್ಷದ  ದಲಿತ ಸಮುದಾಯದ ಶಾಸಕರ ಮನೆಗಳಿಗೆ ಎಂದೂ ಹೋಗಿ ಕುಂತು ಕುಶಲೋಪರಿ ಮಾತಾಡಿ ಊಟ,  ಉಪಹಾರ ತಿಂದಿಲ್ಲವೆ? ಹಾಗೊಮ್ಮೆ ತಿಂದಿದ್ದರೆ ಮತ್ಯಾಕೆ ಯಾರೋ ಬಡ ದಲಿತನ ಮನೆಗೆ ಬಂದು ಮಂಡಕ್ಕಿ, ಕೇಸರಿಬಾತು ಚಪ್ಪರಿಸಿ  ಮಾಧ್ಯಮಗಳಿಗೆ ಮುಖವೊಡ್ಡುವುದರ ಉದ್ದೇಶವೇನು?

ದಲಿತ್ ಐಡೆಂಟಿಟಿಯನ್ನು ರಾಜಕೀಯ ಮಾರಾಟ ಕೌಶಲ (Political marketing skill) ಆಗಿ ಬಳಸಿಕೊಳ್ಳುವ ಕಸುಬು ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಹೊಸತಲ್ಲ. ರಾಜಕಾರಣಿಗಳಾಗಲಿ, ಮಠಾಧಿಪತಿಗಳಾಗಲಿ ಎಂದೋ ಒಂದು ದಿನ ದಲಿತರ ಮನೆಯಲ್ಲಿ ಉಂಡು, ನೀರು ಕುಡಿದು ಹೋದ ಮಾತ್ರಕ್ಕೆ ದಲಿತರನ್ನು ಸಮಾನತೆಯ ಮೇಲ್ಪದರಕ್ಕೆ ತಂದಂತಾಗಲಿ, ಅವರ ಭಾಗ್ಯೋದಯವಾಗಿ ಬಿಡುತ್ತದೆ ಎಂತಾದರೆ ಇಂತಹ ಭೇಟಿಗಳು ನಿರಂತರವಾಗಿ ಸಾಗಲಿ.

ಮೊನ್ನೆ ಮೊನ್ನೆಯಷ್ಟೆ ಉಳ್ಳೇರಳ್ಳಿಯಲ್ಲಿ ದೇವರ ಕೋಲು ಮುಟ್ಟಿದ ದಲಿತ ಬಾಲಕನಿಗೆ ದಂಡ ವಿಧಿಸಿದ ಜಾತಿವಾದಿಗಳ ಕೃತ್ಯವಾಗಲಿ, ಕೋಲಾರದ ದಾನವಳ್ಳಿಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಮಾರಾಮಾರಿಯಾಗಲಿ ಮುಖ್ಯಮಂತ್ರಿಗಳ ಅರಿವಿಗೆ ಬಂದಿಲ್ಲವಾ?

 ಮುಖ್ಯಮಂತ್ರಿಗಳು ವಂದಿಮಾಗಧರ ಸಮೇತ ‘ದಲಿತ’ ನೊಬ್ಬನ ಮನೆಯಲ್ಲಿ ಮಂಡಕ್ಕಿ‌ ಮೆಲ್ಲುತ್ತಿದ್ದರೆ, ಅತ್ತ  ಚಿಕ್ಕಮಗಳೂರು ಜಿಲ್ಲೆಯಲ್ಲಿ ( ಆಡಳಿತಾರೂಢ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಜಿಲ್ಲೆ) ಅವರದ್ದೇ ಪಕ್ಷದ ಮುಖಂಡ ತೋಟದ ಮಾಲೀಕ ದಲಿತ ಕುಟುಂಬವನ್ನು ಲೈನ್ ಮನೆಗಳೆಂಬ ವಧಾಗೃಹಗಳಲ್ಲಿ ಕೂಡಿ ಹಾಕಿ ಬಡಿಯುತ್ತಿದ್ದ ಅಮಾನುಷ ಕೃತ್ಯವನ್ನೇನಾದರೂ ಗಮನಿಸಿದರಾ?

ಹಾಗೊಮ್ಮೆ ಈ ಮೇಲಿನ ತಾಜಾ ಘಟನೆಗಳ ಬಗ್ಗೆ ಸಿಎಂ ಏನಾದರೂ ಟ್ವೀಟ್ ಮಾಡಿದ್ದು ಯಾರಿಗಾದರೂ ಗೊತ್ತಾಯಿತಾ? ಹೋಗಲಿ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳಾಗಲಿ, ವಕ್ತಾರರಾಗಲಿ ಖಂಡನಾ ಹೇಳಿಕೆ ಯಾ ಅಧಿಕಾರ ದಂಡ ಪ್ರಯೋಗದ ಜವಾಬ್ದಾರಿಯ ಮಾತುಗಳನ್ನಾದರೂ ಆಡಿದ್ದು ಯಾರಿಗಾದರೂ ಕೇಳಿಸಿತಾ?

ಅಷ್ಟಕ್ಕೂ ಅಧಿಕಾರಸ್ಥರು, ರಾಜಕಾರಣಿಗಳು ದಲಿತರ ಮನೆಗಳನ್ನು ‘ಹುಡುಕಿಕೊಂಡು’ ಬಂದುಹೋಗುತ್ತಾರೆ ಎಂದರೆ ಈ ಸಮಾಜದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತೀಯತೆಯನ್ನು ಜೀವಂತವಾಗಿರಿಸುವ ಹುನ್ನಾರವೇ ಆಗಿರುತ್ತದೆ.  ಮುಖ್ಯಮಂತ್ರಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಶಾಸಕರು, ಸಚಿವರು, ಅಧಿಕಾರಿಗಳು, ಸಾಮಾನ್ಯರು…ಹೀಗೆ ನಾನಾ ಬಗೆಯ ನೂರಾರು ಜನರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ದಲಿತರೂ ಇರುತ್ತಾರೆ. ಹಾಗಿದ್ದ ಮೇಲೆ ದಲಿತರ ಮನೆಯನ್ನೇ ಹುಡುಕಿಕೊಂಡು ಹೋಗುವುದು ಒಂದು  ಕ್ಷುಲ್ಲಕ ರಾಜಕಾರಣವಷ್ಟೆ ಎನ್ನದೆ ಬೇರೆ ಏನೆನ್ನಬೇಕು?

75 ವರ್ಷಗಳ ನಂತರವೂ ದಲಿತರ ಮನೆಗಳಿಗೆ ಅಧಿಕಾರಸ್ಥ ಸರ್ವರ್ಣೀಯರು ಹೋಗುವ ಮೂಲಕ ಜಾತಿ ತರತಮವನ್ನು ಹೋಗಲಾಡಿಸುವ ಮಹತ್ತರ ಸಂದೇಶ ಸಾರುವುದೇ ಎಂದಾದರೆ ಕಳೆದ 75 ವರ್ಷಗಳ ಕಾಲ ಸಮಸಮಾಜವನ್ನು ಇಚ್ಛಾಶಕ್ತಿಯಿಂದ ಕಟ್ಟಲು ನಾವು ಸೋತಿದ್ದೇವೆ ಎಂಬುದರ ಸಂಕೇತವಲ್ಲವೆ? ನಮ್ಮ ಉತ್ಕೃಷ್ಟ ಸಂವಿಧಾನದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಿಮ್ಮ  ವೈಫಲ್ಯ – ಹೊಣೆಗೇಡಿತನ ಎಂದು ಕರೆದರೆ  ತಪ್ಪೇನು? ದಲಿತರ ಮನೆ ಹುಡುಕಿಕೊಂಡು ಬಂದು ಹೋಗುವುದೆಂದರೆ ತಾವು ಸವರ್ಣೀಯರು, ನೀವು ನಿಮ್ನರು ಎಂಬ ಬಗೆದು ನೋಡುವ ನೋಟವನ್ನು ಇನ್ನಷ್ಟು ಆಳಕ್ಕೆ ಬಿತ್ತಿದಂತೆಯೇ ಸರಿ.  ಇದು ಒಂದು ರೀತಿಯ ಅಟ್ರಾಸಿಟಿಯ ಮಂದ ರೂಪವೇ ಆಗಿರುತ್ತದೆ.

ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ
ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ

ಎಂದ ಬಸವಣ್ಣನನ್ನು ನಿಮ್ಮ ಮನೆಗಳಿಗೆ ತಂದು ನೇತು ಹಾಕಿಕೊಂಡಿರಿ, ಆದರೆ ನಿಮ್ಮ ಮನಗಳಲ್ಲಿ  ನೆಲೆಗೊಳಿಸಿಕೊಂಡಿರಾ?

ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತರತಮವಿಲ್ಲದ ಒಳಗೊಳ್ಳುವಿಕೆ ಎಂಬುದು ಅಂತರ್ಗತ ಅರಿವು ಎಂದಾದಾಗ ಮಾತ್ರ ಯಾರು ಯಾರ ಮನೆಯಲ್ಲಿ ಉಂಡರು, ವಾಸ್ತವ್ಯ ಹೂಡಿದರು ಎಂಬುದು ಮುಖ್ಯವಾಗುವುದೇ ಇಲ್ಲ, ಎಲ್ಲರೂ ‌ಮನುಷ್ಯರಂತೆ ಕಾಣುತ್ತಾರೆ.

ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ, ಆರ್ಥಿಕ‌ ಸ್ವಾತಂತ್ರ್ಯ ವೂ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಅರ್ಥಪೂರ್ಣ. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯ ನಿಷ್ಪ್ರಯೋಜಕ ಎಂದು ಬ್ರಿಟಿಷರಿಂದ ಪಡೆಯಬೇಕಾದ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಕಣ್ಣು ಮತ್ತು ಹೃದಯವನ್ನು ಮೂಡಿಸಿದ ದ್ರಷ್ಟಾರ ಬಾಬಾಸಾಹೇಬ್ ಅಂಬೇಡ್ಕರ್ . ಹೀಗೆ ಸಿಕ್ಕ ಸ್ವಾತಂತ್ರ್ಯ ಕಾಲದಲ್ಲೂ ದಲಿತರ ಪಾಡು ಬದಲಾಗಿಲ್ಲ. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಯೋಜನೆಗಳಿಂದ ದಲಿತರ ಬದುಕನ್ನು, ಅವರ ಸ್ವಾಭಿಮಾನದ ಘನತೆಯನ್ನು ಕಟ್ಟಿಕೊಡಬೇಕಾದ ಆಳುವವರು ಕೇವಲ ಅವನ ಮನೆಯ ತಣಿಗೆಯಲ್ಲಿ ಕೈತೊಳೆದು ಮುಂದೊಂದು ದಿನಕ್ಕೆ ಇನ್ನೊಂದು ಮನೆಗೆ ಕಾಯುತ್ತಾರೆ. ಇಂತಹ  ನಾಟಕಗಳಿಂದ ದಲಿತರ ಬದುಕು ಹಸನಾಗುವುದಿಲ್ಲ. ಫೋಟೋ, ಪ್ರಚಾರಗಳು ಮಾತ್ರ ಉಳಿಯುತ್ತವೆ. ಚುನಾವಣೆಗಳು ಮುಗಿಯುತ್ತವೆ.

ರಾಜ್ಯಸರ್ಕಾರಗಳು ದಲಿತ ಸಮುದಾಯದ ಅಭ್ಯುದಯಕ್ಕಾಗಿ ಮೀಸಲಾಗಿಸಿದ ಎಸ್ ಸಿಪಿ/ ಟಿಎಸ್ ಪಿ ( ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆ) ಅನುದಾನ ಸದ್ಬಳಕೆ ಆಗಿದೆಯಾ? ದಲಿತರು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ  ಆಗಿರಬಹುದಾದ ಪ್ರಗತಿಯನ್ನು ಆಯಾ ವರ್ಷ ಶ್ರೇತಪತ್ರ ಮೂಲಕ ಪ್ರಕಟಿಸಿದ್ದೇ ಆದರೆ ಅದು ಸರ್ಕಾರಗಳ ನಿಜ ಕಾಳಜಿ. ಸರ್ಕಾರದ ಅನುಸೂಚಿತ ಜಾತಿ – ಪಂಗಡಗಳ ಕಲ್ಯಾಣ ಸಮಿತಿಯೇ ತನ್ನ ವರದಿಯಲ್ಲಿ ದಲಿತರ ಕೈಗಾರಿಕಾ ಯೋಜನೆಯ ವೈಫಲ್ಯ, ಕಂಟಕಗಳನ್ನು ಸರ್ಕಾರದ ಮುಂದಿಟ್ಟಿದೆ. ದಲಿತರಿಗೆ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡುವ ಸರ್ಕಾರ ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಕೊಡದೆ ಕತ್ತು‌ ಹಿಸುಕುತ್ತಿರುವುದು ಅಧಿಕೃತ ವರದಿಯಲ್ಲೆ ಬಯಲಾಗಿರುವಾಗ ದಲಿತರ ಮನೆಗಳಲ್ಲಿ ಆತಿಥ್ಯ ಪಡೆದು ಪುಳಕಿತರಾಗುವ ಸರ್ಕಾರ( ಮುಖ್ಯಮಂತ್ರಿ) ದ ನಡೆ  ಕಾಲದ ವಿಡಂಬನೆಯಷ್ಟೆ!

ದಲಿತರಿಗೆ ಯಾರ ಕರುಣೆ, ದೇಣಿಗೆಯೂ ಬೇಕಿಲ್ಲ, ಸಾಂವಿಧಾನಿಕ ಹಕ್ಕು ಮತ್ತು ನ್ಯಾಯ ಮಾತ್ರ ಬೇಕು. ದಲಿತರು ಬಹಿಷ್ಕಾರ ಹಲ್ಲೆಗಳಿಗೊಳಗಾಗುತ್ತಿರುವ ಕಾಲದಲ್ಲೂ ಇತ್ತ  ಮುಖ್ಯಮಂತ್ರಿಗಳಿಗೆ  ದಲಿತರ ಮನೆಯೊಂದರಲ್ಲಿ ತಿನ್ನುವ ಅನ್ನವಾದರೂ ಗಂಟಲಲ್ಲಿ ಹೇಗೆ ಇಳಿಯಬಲ್ಲದು?

ನಮ್ಮ ಮುಖ್ಯಮಂತ್ರಿ ಗಳು,

ದಲಿತರ ಮನೆಯ ಹೊಸ್ತಿಲು ತುಳಿವಾಗ
ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ
ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ. 

ಎಂದು ವಚನ ಧರ್ಮದ ಪ್ರಾಮಾಣಿಕತೆಯನ್ನು ಪ್ರಮಾಣಿಸಿದರಾ?

ಎಷ್ಟೇ ಆಗಲಿ ಅವರು ರಾಜಕಾರಣಿಗಳು. ಆದರೆ ನಮ್ಮ ಮಾಧ್ಯಮಗಳಾದರೂ “ದಲಿತರ ಮನೆ” ಗಳೆಂದು ಬಗೆದು ಬರೆಯುವುದಾದರೂ ಏಕೆ? ಮಾಧ್ಯಮಗಳು ಸ್ಥಾಪಿತ ಸಿದ್ಧಮಾದರಿಗೆ ಜೋತು ಬಿದ್ದು ಪ್ರಜ್ಞಾಪೂರ್ವಕವಾಗಿಯೇ ಜಾತೀಯತೆಯನ್ನು ಆಚರಿಸುತ್ತಾ ಬಂದಿವೆ ಎಂದು ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನಿಲ್ಲ. ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಮತ್ತವರ ದಂಡು ಮಂಡಕ್ಕಿ ತಿಂದ ಮನೆಯನ್ನು ಮನುಷ್ಯರದ್ದು ಎಂದಷ್ಟೆ ಹೇಳುತ್ತಿದ್ದವು “ದಲಿತರ ಮನೆಯಲ್ಲಿ ಊಟ ಮಾಡಿದ / ಉಪಹಾರ ತಿಂದ/ ನೀರು ಕುಡಿದ/ ವಾಸ್ತವ್ಯ ಹೂಡಿದ ಮುಖ್ಯಮಂತ್ರಿಗಳು” ಎಂಬ ತಲೆ ಬರಹಗಳಡಿ ಸಡಗರಪಡುತ್ತಿರಲಿಲ್ಲ.

ದಲಿತರೂ ಕೂಡ ಪಾರಂಪರಿಕ  ದಾಸ್ಯ ಮನೋಭಾವದಿಂದ ಬಿಡುಗಡೆಗೊಳ್ಳದೇ ಹೋದರೆ ‘ಮನೆ’  ಹುಡುಕಿಕೊಂಡು ಬರುವವರು ಇದ್ದೇ ಇರುತ್ತಾರೆ.

ದರ್ವಾಜಾ ಬಂದ್ ರಕೋ…

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.)

ಎನ್‌ ರವಿಕುಮಾರ್‌
ʼಶಿವಮೊಗ್ಗ ಟೆಲೆಕ್ಸ್ʼ ಕನ್ನಡ ದಿನಪತ್ರಿಕೆಯ ಸಂಪಾದಕರು. ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ, ರಾಜಕೀಯ ವಿಶ್ಲೇಷಣಾಕಾರ.

Related Articles

ಇತ್ತೀಚಿನ ಸುದ್ದಿಗಳು