Monday, September 16, 2024

ಸತ್ಯ | ನ್ಯಾಯ |ಧರ್ಮ

ದಲಿತ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಕ್ಕೊತ್ತಾಯ ಸಭೆ

ಬೆಂಗಳೂರು: ಸೆಪ್ಟೆಂಬರ್‌ 17 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ʼಒಳಮೀಸಲಾತಿ ಜಾರಿʼ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಹಕ್ಕೊತ್ತಾಯ ಸಭೆಯನ್ನು ಆಯೋಜಿಸಿದ್ದವು.

ಈ ಹಿನ್ನೆಲೆಯಲ್ಲಿ ವಿವಿಧ ಸಂಗಟನೆಗಳು ಹಾಗೂ ನಾಯಕರು ಸೇರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಆಗಸ್ಟ್ 1, 2024ರಂದು ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಯಾವುದೇ ಸಾಂವಿಧಾನಿಕ ತೊಡಕುಗಳಿಲ್ಲ ಹಾಗೂ ರಾಜ್ಯ ಸರ್ಕಾರಕ್ಕೆ ಆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಇಡೀ ಭಾರತ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ರಾಜ್ಯದ ಪರಿಸ್ಥಿತಿಯು ಒಳಮೀಸಲಾತಿ ಜಾರಿಗೆ ಬಹಳ ಅನುಕೂಲಕರವಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗಿ ಒಂದು ದಶಕವೇ ಆಗಿ ಹೋಗುತ್ತಿತ್ತು. ಹಲವು ರಾಜಕೀಯ ಮೇಲಾಟಗಳ ಪರಿಣಾಮವಾಗಿ ಪರಿಶಿಷ್ಟ ಜಾತಿಗಳ ಹೋರಾಟಕ್ಕೆ ಮನ್ನಣೆ ಸಿಗಲಿಲ್ಲ. ಆದರೆ 2023 ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಡ ನಿರ್ಮಾಣವಾದಾಗ, ರಾಷ್ಟ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್‌ ಪಕ್ಷವು ಸಕಾರಾತ್ಮಕವಾಗಿ ಸ್ಪಂಧಿಸಿತು. ಚಿತ್ರದುರ್ಗದಲ್ಲಿ ನಡೆದ ʼಕಾಂಗ್ರೆಸ್‌ ಐಕ್ಯತಾ ಸಮಾವೇಶʼದಲ್ಲಿ ಅಧಿಕಾರಕ್ಕೆ ಬಂದ ಮೊದಲ ಅದಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಅದರಂತೆ ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗಾಗಿ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಶಿಫಾರಸನ್ನು ಮಾಡಲಾಯಿತು. ಈ ಕ್ರಮಕ್ಕೆ ಸಮಸ್ತ ಪರಿಶಿಷ್ಟ ಜಾತಿಗಳೂ ಸಿದ್ಧರಾಮಯ್ಯರವರ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದವು.

ಈಗ ದಾರಿ ಮತ್ತಷ್ಟು ಸುಗಮವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಸಂವಿಧಾನ ತಿದ್ದುಪಡಿಯ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಕರ್ನಾಟಕ ಸರ್ಕಾರವೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬಹುದು. ಸುಪ್ರೀಂ ಕೋರ್ಟ್‌ ತೀರ್ಪು ಬಂದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ್ಪನ್ನು ಸ್ವಾಗತಿಸಿ, ತಮ್ಮ ಬದ್ದತೆ ಪ್ರದರ್ಶಿಸಿದರು. ಆದರೆ ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕು.

ಕರ್ನಾಟಕ ಸರ್ಕಾರದ ಬಳಿ ಈಗಾಗಲೇ ಪರಿಶಿಷ್ಟರ 101 ಜಾತಿಗಳ ಅಂಕಿಅಂಶವಿದೆ. ಇದರ ಜೊತೆಗೆ ಅಗತ್ಯಬಿದ್ದಲ್ಲಿ ಮತ್ತಷ್ಟು ದತ್ತಾಂಶಗಳನ್ನು ಒಂದು ತಿಂಗಳೊಳಗೆ ಕ್ರೋಡೀಕರಿಸಿಕೊಳ್ಳಬಹುದು. ಆದರೆ ಈ ಕೂಡಲೇ ಸುಗ್ರೀವಾಜ್ಞೆಯ ಮೂಲಕ ʼಒಳಮೀಸಲಾತಿʼಯನ್ನು ಜಾರಿಗೊಳಿಸಿ ಆದೇಶಿಸಬೇಕು ಹಾಗೂ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಯಾವುದೇ ನೇಮಕಾತಿಗಳನ್ನು ಮಾಡಿಕೊಳ್ಳಬಾರದು.

ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ನುಡಿದಂತೆ ನಡೆಯುವ ಸರ್ಕಾರ. ಈಗಾಗಲೇ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಮಾತನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ. ಅದೇ ರೀತಿಯಲ್ಲಿ, ರಾಹುಲ್‌ ಗಾಂಧಿಯವರ ಜಿಸ್ ಕಿ ಜಿತ್ನಿ ಆಬಾದಿ, ಉಸ್ ಕಿ ಉತ್ನಿ ಭಾಗೀದಾರಿ ಎಂಬ ಘೋಷವಾಕ್ಯವು ಬರಿ ಬಾಯಿ ಮಾತಲ್ಲ ಎಂಬುದನ್ನು ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸಾಬೀತುಪಡಿಸಬೇಕಿದೆ. ರಾಹುಲ್‌ ಗಾಂಧಿಯವರು ಬಿಜಾಪುರದಲ್ಲಿ ದಲಿತ ನಾಯಕರಿಗೆ ಕೊಟ್ಟ ಮಾತಿನಂತೆ, ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ʼಒಳಮೀಸಲಾತಿ ಜಾರಿʼ ಆಶ್ವಾಸನೆಯನ್ನು ಈಡೇರಿಸಬೇಕು.

ಈ ಕುರಿತಂತೆ, ಸೆಪ್ಟೆಂಬರ್‌ 17 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ʼಒಳಮೀಸಲಾತಿ ಜಾರಿʼ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ʼಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟʼ ಆಗ್ರಹಿಸುತ್ತದೆ. ಇದಕ್ಕೆ ಪೂರಕ ವಾತಾವರಣವನ್ನು ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿಯವರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತದೆ ಎಂದು ವಿವಿಧ ಸಂಘಟನೆಗಳು ಹಾಗೂ ಅದರ ನಾಯಕರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page