ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು. ಐಮಂಗಲ ಹೋಬಳಿ.ಎಂ.ಡಿ.ಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡವಿ ರಾಮಜೋಗಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಹಾಕಿದ್ದನ್ನು ಖಂಡಿಸಿ ಅದೇ ಗ್ರಾಮದ ಮೇಲ್ಜಾತಿಯ ಕುರುಬ ಮತ್ತು ಒಕ್ಕಲಿಗ ಸಮುದಾಯದವರು ಒಟ್ಟಾಗಿ ಮಾದಿಗರ ಹಟ್ಟಿಗೆ ನುಗ್ಗಿ ಕಂಡಕಂಡವರ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಊರಿನಲ್ಲಿ ಅಂಬೇಡ್ಕರ್ ಬೋರ್ಡ್ ನಿಲ್ಲಿಸಿದ್ದೇ ದಾಳಿಗೆ ಕಾರಣವೆನ್ನಲಾಗಿದ್ದು, ಘಟನೆಯಲ್ಲಿ ಹಲ್ಲೆಗೊಳಗಾದ ಮಾದಿಗ ಸಮುದಾಯದ ಸುಮಾರು 20ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಹಾಗೂ 6ಜನ ಗಂಡು ಮಕ್ಕಳು ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಸಂದರ್ಭದಲ್ಲಿ ಊರಿನ ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿರುವುದಾಗಿ ಊರಿನ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಜಾಗದ ವಿವಾದವೂ ಇದರಲ್ಲಿದೆಯೆಂದೂ ಹೇಳಲಾಗುತ್ತಿದ್ದು ಊರಿಗೆ ನುಗ್ಗಿದ ಮೇಲ್ಜಾತಿಯ ಜನರು ನಿಮ್ಮನ್ನು ಊರು ಬಿಡಿಸುತ್ತೇವೆ ಎನ್ನುವ ಬೆದರಿಕೆಯೊಡ್ಡಿ, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಪ್ರತ್ಯಕ್ಷರ್ಶಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.