Friday, June 14, 2024

ಸತ್ಯ | ನ್ಯಾಯ |ಧರ್ಮ

ದಲಿತರ ವಿರೋಧ: ಪೂಜೆಗೆಂದು ಬಂದು ಬರಿಗೈಯಲ್ಲಿ ಮರಳಿದ ಸಂಸದ ಪ್ರತಾಪ ಸಿಂಹ

ಮೈಸೂರು: ಅಯೋಧ್ಯೆಯಲ್ಲಿ ಸ್ಥಾಪಿಸಲಾಗುತ್ತಿರುವ ಬಾಲರಾಮನ ವಿಗ್ರಹದ ಕಲ್ಲು ದೊರೆತ ಸ್ಥಳಕ್ಕೆ ಪೂಜೆಗೆಂದು ತೆರಳಿದ್ದ ಮೈಸೂರು -ಕೊಡಗು ಸಂಸದ ಪ್ರತಾಪ ಸಿಂಹ್‌ ಮುಖಭಂಗ ಎದುರಿಸಿ ಸ್ಥಳದಿಂದ ವಾಪಾಸ್‌ ಬಂದಿದ್ದಾರೆ.

ಮೈಸೂರಿನ ಹಾರೋಹಳ್ಳಿಯಲ್ಲಿ ರಾಮನ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಇಂದು ಗುದ್ದಲಿ ಪೂಜೆ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಕೂಡಾ ಆಗಮಿಸಿದ್ದರು. ಈ ವೇಳೆ ಕೆಲ ಸ್ಥಳೀಯರು ಸಂಸದರಿಗೆ ಮುತ್ತಿಗೆ ಹಾಕಿ ಮಹಿಷಾ ದಸರಾ ನೆಪದಲ್ಲಿ ದಲಿತರನ್ನು ಅಪಮಾನಿಸಿದ ನೀವು ದಲಿತ ವಿರೋಧಿ ಎಂದು ಕರೆದು ಕಾರ್ಯಕ್ರಮಕ್ಕೆ ಬರದಂತೆ ಅಡ್ಡಿಪಡಿಸಿದರು.

ಆಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಟಾಪಿಸಲಾಗುತ್ತಿರುವ ರಾಮನ ಮೂರ್ತಿಯನ್ನು ಕೆತ್ತಲಾಗಿರುವ ಕೃಷ್ಣ ಶಿಲೆ ಹಾರೋಹಳ್ಳಿ ಬಳಿಯ ಗಯಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ದೊರಕಿತ್ತು. ಈ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಲುವಾಗಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಭೂಮಿಪೂಜೆ ಮತ್ತು ರಾಮನ ಪೂಜೆ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆಂದು ಪ್ರತಾಪ ಸಿಂಹ ಬಂದಿಳಿಯುತ್ತಿದ್ದಂತೆ ಸ್ಥಳೀಯ ದಲಿತರು ಪ್ರತಾಪ ಸಿಂಹ ಗೋ ಬ್ಯಾಕ್‌ ಎನ್ನುವ ಘೋಷಣೆಗಳನ್ನು ಕೂಗುತ್ತಾ ಅವರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಪ್ರತಾಪ ಸಿಂಹ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದರಾದರೂ ಜನರು ಅದಕ್ಕೆ ಸೊಪ್ಪು ಹಾಕದೆ ಪ್ರತಿರೋಧ ಮುಂದುವರೆಸಿದರು.

“ನೀವೊಬ್ಬ ದಲಿತ ವಿರೋಧಿ. ನಿಮ್ಮ ನಡವಳಿಕೆಯಿಂದ ದಲಿತರ ಭಾವನೆಗೆ ಧಕ್ಕೆಯುಂಟಾಗಿದೆ. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ದಲಿತರನ್ನು ತುಳಿದು ಹಾಕಿ ಬಿಡುತ್ತೇನೆ, ಹೊಸಕಿ ಹಾಕಿ ಬಿಡುತ್ತೇನೆ ಎಂದು ಬೆದರಿಸಿದ್ದ ನೀವು ದಲಿತರ ಜಮೀನಿಗೆ ಏಕೆ ಬರುತ್ತೀರಿ? ಇಲ್ಲಿಂದ ಹೊರ ನಡೆಯಿರಿ’ ಎಂದು ಮಾಜಿ ತಾಪಂ ಸದಸ್ಯ ಹಾರೋಹಳ್ಳಿ ಸುರೇಶ್ ಹೇಳಿದರು.

ಆಗ ಪ್ರತಾಪ ಸಿಂಹ ಮತ್ತೆ ಜನರನ್ನು ಸಂಭಾಳಿಸಲು ನೋಡಿದರಾದರೂ ಮೊದಲೇ ಕೆರಳಿದ್ದ ಜನರು ಅವರ ಮಾತುಗಳನ್ನು ಕೇಳಿಸಿಕೊಳ್ಳದೆ “ನೀವು ಏನು ಹೇಳುವುದೂ ಬೇಕಿಲ್ಲ. ಇಲ್ಲಿಂದ ಜಾಗ ಖಾಲಿ ಮಾಡಿ” ಎಂದು ನೂಕು ನುಗ್ಗಲು ಉಂಟುಮಾಡಿದ್ದಾರೆ.

ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ವ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್‌ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಪಟ್ಟರಾದರೂ ಊರಿನ ಜನರು ಒಂದಿಷ್ಟೂ ಜಗ್ಗಲಿಲ್ಲ.

ಇನ್ನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸಂಸದ ಪ್ರತಾಪ ಅಲ್ಲಿಂದ ಪೆಚ್ಚು ಮೋರೆಯೊಂದಿಗೆ ಸ್ಥಳದಿಂದ ಕಾಲ್ಕಿತ್ತರು.

ಘಟನೆಯ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಹಾರೋಹಳ್ಳಿ ಸುರೇಶ್, ದಸಂಸ ಮುಖಂಡ ನಟರಾಜ್, ಗ್ರಾಮಸ್ಥರಾದ ಚಲುವರಾಜ್, ಸೋಮಶೇಖರ್, ಬೀರಪ್ಪ, ಧನಗಳ್ಳಿ ಸ್ವಾಮಿ, ರಾಜೇಶ್ ರಾಜೇಂದ್ರ, ಕಿರಣ್, ಸಿ.ಡಿ.ಚಲುವರಾಜು, ಸುನೀಲ್ ಸೇರಿದಂತೆ ಹಲವರು ಸ್ಥಳದಲ್ಲಿದ್ದರು.

ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ: ಧರಣಿ ಕುಳಿತ ರಾಹುಲ್‌ ಗಾಂಧಿ

Related Articles

ಇತ್ತೀಚಿನ ಸುದ್ದಿಗಳು