Friday, June 14, 2024

ಸತ್ಯ | ನ್ಯಾಯ |ಧರ್ಮ

ದಮನಿತರ ದಾರಿದೀಪ ಕುದ್ಮುಲ್ ರಂಗರಾವ್

ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ಈ ನಾಡಿನ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನವನ್ನು ಮಾಡುವುದು  ಸ್ವಾತಂತ್ರ್ಯ 75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ.

ಅವರ ಸುಧಾರಣಾ ಕಾರ್ಯಕ್ರಮಗಳನ್ನು ಮೇಲುಜಾತಿಯ ಮಡಿವಂತರು ಸಹಿಸಿಕೊಳ್ಳಲಿಲ್ಲ. ಸನಾತನಿಗಳೂ ವಿರೋಧಿಸಿದರು. ಅವರದೇ  ಸಮಾಜ ಅವರಿಗೆ ಬಹಿಷ್ಕಾರ ಹಾಕಿತ್ತು. ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಮೇಲು ಜಾತಿಯ ಚಿತಾವಣೆಯಿಂದ ಕೆಲ ಕೆಳಜಾತಿಯವರು ಕೂಡಾ ಅವರನ್ನು ದೂರ ಇಟ್ಟಿದ್ದರು. ಕ್ಷೌರಿಕರು ಕೂಡ ಕ್ಷೌರ ಮಾಡಲು ಒಪ್ಪಲಿಲ್ಲ. ಅಗಸರೂ ಅವರ ಕುಟುಂಬದವರ ಬಟ್ಟೆಗಳನ್ನು ಮಡಿ ಮಾಡಲು ನಿರಾಕರಿಸುತ್ತಿದ್ದರು. ರಸ್ತೆಯಲ್ಲಿ ನಡೆಯುವಾಗ ಕಿಡಿಗೇಡಿಗಳು ಅವರತ್ತ ಕಲ್ಲೆಸೆಯುತ್ತಿದ್ದರು. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವ ಘಟನೆಗಳೂ ನಡೆಯುತ್ತಿದ್ದವು. ಅವರ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಅವಮಾನ ಮಾಡುತ್ತಿದ್ದರು. ಶಾಲೆಯ ಒಳಗಡೆಯೂ ಮೇಲು ಜಾತಿಯ ವಿದ್ಯಾರ್ಥಿಗಳು ಆ ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುತ್ತಿದ್ದರು. ಇಂತಹ ನಿರಂತರ ಸಾರ್ವಜನಿಕ ಅವಮಾನ, ಕಿರುಕುಳ, ಬೆದರಿಕೆ, ಬಹಿಷ್ಕಾರಗಳ ಹೊರತಾಗಿಯೂ ದಲಿತೋದ್ಧಾರದ ತಮ್ಮ ಕಾರ್ಯಕ್ರಮಗಳನ್ನು ನಿಲ್ಲಿಸದೆ,  ಅದನ್ನೊಂದು ವೃತದಂತೆ, ಆದ್ಯ ಕರ್ತವ್ಯದಂತೆ ಪಾಲಿಸಿಕೊಂಡು ಬಂದು ತನ್ನ ಜೀವನವನ್ನೇ ಶೋಷಿತರ ಏಳಿಗೆಗೆ ಮೀಸಲಿಟ್ಟು ‘ದಮನಿತರ ದಾರಿದೀಪ’ ‘ಶೋಷಿತರ ಬಂಧು’, ‘ದಲಿತೋದ್ಧಾರಕ’ ಎಂಬೆಲ್ಲ ಬಿರುದು ಸಂಪಾದಿಸಿದ ಮಹಾನುಭಾವ ಬೇರಾರೂ ಅಲ್ಲ ಮಂಗಳೂರಿನ ಕುದ್ಮುಲ್ ರಂಗರಾವ್ (1859-1928) ಅವರು.

ದಲಿತರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದ, ದಲಿತರ ಹಕ್ಕುಗಳಿಗಾಗಿ ಜೀವಮಾನ ಇಡೀ ಹೋರಾಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಬೀಮ್ ರಾವ್ ಅಂಬೇಡ್ಕರ್ ಅವರು ಇನ್ನೂ ಎರಡು ವರ್ಷದ ಮಗುವಾಗಿದ್ದ ಕಾಲದಲ್ಲಿಯೇ, ಅಂದರೆ 1892 ರಲ್ಲಿಯೇ, ದಲಿತರಿಗಾಗಿ ಶಾಲೆ ತೆರೆದು ಅವರ ಏಳಿಗೆಯ ಕಾರ್ಯಕ್ರಮಗಳನ್ನು ರಂಗರಾವ್ ಶುರು ಮಾಡಿಯಾಗಿತ್ತು ಎನ್ನುವಾಗ ಅವರ ಮಹತ್ವ ನಮಗೆ ಅರ್ಥವಾಗಬೇಕು. ಮಹಾತ್ಮಾ ಗಾಂಧಿಯವರು 1934 ರಲ್ಲಿ ಮಂಗಳೂರಿನ ಶೇಡಿಗುಡ್ಡೆಯಲ್ಲಿರುವ ರಂಗರಾವ್ ಕಚೇರಿಗೆ ಭೇಟಿ ನೀಡಿ, ‘ಶೋಷಿತ ಜನವರ್ಗಗಳ ಏಳಿಗೆ ಹಾಗೂ ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ಕುದ್ಮುಲ್ ರಂಗರಾಯರೇ ನನಗೆ ಮಾರ್ಗದರ್ಶಿಗಳು ಮತ್ತು ಪ್ರೇರಕರು’ ಎಂದು ಘೋಷಿಸಿದರು. ರಂಗರಾಯರ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡ ಬ್ರಿಟಿಷ್ ಸರಕಾರವು ಅವರಿಗೆ ‘ರಾವ್ ಸಾಹೇಬ್’ ಎಂಬ ಬಿರುದು ಕೊಟ್ಟಿತು.

ಬಾಲ್ಯ, ವೃತ್ತಿಜೀವನ

ಇಂತಹ ಮಹಾ ಮಾನವತಾವಾದಿ ರಂಗರಾವ್ ಅವರು  ಹುಟ್ಟಿದ್ದು 29.06.1859 ರಂದು ಕೇರಳದ ಕಾಸರಗೋಡಿನ ಕುದ್ಮುಲ್ ಎಂಬ ಊರಿನಲ್ಲಿ. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಲದಲ್ಲಿ ಜನಿಸಿದ ಅವರ ದೇವಪ್ಪಯ್ಯ ಮತ್ತು ತಾಯಿ. ರಂಗರಾಯರ ಸಮಾಜ ಸುಧಾರಣೆಯ ಎಲ್ಲ ಚಟುವಟಿಕೆಗಳ ಹಿಂದೆ ಬೆನ್ನೆಲುಬಾಗಿ ನಿಂತದ್ದು ಅವರ ಪತ್ನಿ ರುಕ್ಮಿಣಿ ಅಮ್ಮ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ರಂಗರಾಯರು ಕಾಸರಗೋಡಿನಿಂದ ಮಂಗಳೂರಿಗೆ ಬಂದು ಮೊದಲು ಶಿಕ್ಷಕವೃತ್ತಿಯನ್ನು ಕೈಗೊಂಡರು. ನಂತರ ಪ್ಲೀಡರ್ ಪರೀಕ್ಷೆಯಲ್ಲಿ ಪಾಸಾಗಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಆರಂಭಿಸಿದರು. ಇವರ ಫಿರ್ಯಾದುದಾರರು ಬಹುತೇಕ ಬಡವರು. ಆದ್ದರಿಂದಲೇ ‘ಬಡವರ ವಕೀಲರು’ ಎಂದು ಜನ ಜನಿತರಾದರು.

ಶೋಷಿತರ ಏಳಿಗೆಗಾಗಿ ರಂಗರಾವ್ ಮಾಡಿದ ಮಾದರಿ ಕೆಲಸಗಳು

  1. ದಲಿತರ ಶಿಕ್ಷಣಕ್ಕಾಗಿ ಮಂಗಳೂರಿನ ಕಂಕನಾಡಿ, ಉಡುಪಿ, ಮೂಲ್ಕಿ, ಉಳ್ಳಾಲ, ಬನ್ನಂಜೆ, ಬೋಳೂರು, ಬಾಬುಗುಡ್ಡೆ, ನೇಜಾರು, ದಡ್ಡಲಕಾಡು,  ಅತ್ತಾವರ ಹೀಗೆ ಅನೇಕ ಕಡೆ ಪಂಚಮ ಶಾಲೆಗಳನ್ನು ತೆರೆದರು. ಪಂಚಮ ಶಾಲೆಯಾಗಿರುವುದರಿಂದ ಸಂಪ್ರದಾಯವಾದಿ ಸವರ್ಣೀಯರು ಶಿಕ್ಷಕರಾಗಲು ಒಪ್ಪದಿದ್ದಾಗ ಕ್ರಿಶ್ಚಿಯನ್ನರನ್ನು ಶಿಕ್ಷಕರನ್ನಾಗಿ ನೇಮಿಸಿದರು.
  2. ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಧ್ಯಾಹ್ನದ ಊಟ ಒದಗಿಸುವ ಕೆಲಸ ಮಾಡಲಾಯಿತು. ದಿನಕ್ಕೆ ಎರಡರಿಂದ ನಾಲ್ಕು ಪೈಸೆಗಳ ಪ್ರೋತ್ಸಾಹಕ ಹಣವೂ ವಿದ್ಯಾರ್ಥಿಗಳಿಗೆ ಸಿಗುತ್ತಿತ್ತು.
  3. ಎಂಟನೆಯ ತರಗತಿಗೆಯವರೆಗೆ ಕಲಿತ ಅಸ್ಪೃಶ್ಯ ವಿದ್ಯಾರ್ಥಿಗಳು ಮುಂದೆ ಮಂಗಳೂರಿನ ಸರಕಾರಿ ಕಾಲೇಜಿಗೆ ಸೇರಲು ಅಗತ್ಯ ಕ್ರಮಗಳನ್ನು ಕೈಗೊಂಡರು.
  4. ಉಡುಪಿ ಮತ್ತು ಪುತ್ತೂರಿನ ಕೊರಗ ಜನಾಂಗದವರಿಗೆ ಸರಕಾರಿ ಭೂಮಿ ಹಂಚಿಕೆ ಮಾಡಿಸಿದರು. ದಲಿತರಿಗೆ ಉಚಿತವಾಗಿ ವಸತಿ ನಿವೇಶನಗಳನ್ನು ಹಂಚಿದರು. ದಲಿತರಿಗೆ ಕುಡಿಯುವ ನೀರಿಗಾಗಿ ಬಾವಿ ತೋಡಿಸಿದರು.
  5. ಜಮೀನುದಾರರಿಂದ ಭೂದಾನ ಮಾಡಿಸಿ ಉಡುಪಿ, ಬನ್ನಂಜೆ, ಉದ್ಯಾವರ, ಪಣಂಬೂರು, ತಣ್ಣೀರು ಬಾವಿ, ಬೈಕಂಪಾಡಿ ಮುಂತಾದೆಡೆಗಳಲ್ಲಿ ದಲಿತರಿಗೆ ಹಂಚಿದರು. ತಮ್ಮ ನೆಂಟರಾದ ಡಾ ಬೆನಗಲ್ ರಾಘವೇಂದ್ರರಾವ್ ಅವರು ಉಡುಪಿಯಲ್ಲಿ ದಾನವಾಗಿ ಕೊಟ್ಟ ಏಳು ಎಕರೆ ಭೂಮಿಯನ್ನು ಅಸ್ಪೃಶ‍್ಯರ ವಸತಿಗಾಗಿ ಹಂಚಿದರು.
  6. ಮಂಗಳೂರಿನ ಶೇಡಿಗುಡ್ಡೆಯಲ್ಲಿ ಕೊರಗ ಕುಟುಂಬದವರಿಗೆ ತಮ್ಮ ಕರಕುಶಲ ಕಲೆಯ ವಸ್ತುಗಳ ತಯಾರಿಕೆಗೆ ಅನುಕೂಲವಾಗುವಂತೆ ಆರ್ಥಿಕ ಸೌಲಭ್ಯ ಒದಗಿಸಿದರು.
  7. ದಕ್ಷಿಣ ಕನ್ನಡ ಜಿಲ್ಲೆಯ ದಲಿತರ ಜೀತ ವಿಮೋಚನೆಗಾಗಿ ದುಡಿದರು.
  8. ಉಳ್ಳಾಲದ ರಘುನಾಥಯ್ಯ ಅವರೊಂದಿಗೆ ಸೇರಿ 1897 ರಲ್ಲಿ ‘ಡಿಪ್ರೆಸ್ಡ್ ಕ್ಲಾಸಸ್ ಮಿಶನ್’ (ಡಿಸಿಎಂ) ಅನ್ನು ಮಂಗಳೂರಿನಲ್ಲಿ ಸ್ಥಾಪಿಸಿದರು. ದಲಿತರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸುವುದು ಇದರ ಮೂಲ ಉದ್ದೇಶವಾಗಿತ್ತು.
  9. ಮಂಗಳೂರಿನ ಕಾಪಿಕಾಡ್ ನಲ್ಲಿ ದಲಿತರಿಗಾಗಿ ಸಮುದಾಯ ಭವನದ ನಿರ್ಮಾಣ ಮಾಡಿದರು
  10. ಜಿಲ್ಲಾ ಮಂಡಳಿ ಮತ್ತು ಮಂಗಳೂರು ಪುರಸಭೆಯಲ್ಲಿ ದಲಿತರಿಗೆ ರಾಜಕೀಯ ಮೀಸಲಾತಿ ಸಿಗುವಂತೆ ಮಾಡಿದರು.
  11. ಶೇಡಿಗುಡ್ಡೆಯಲ್ಲಿ ಆದಿದ್ರಾವಿಡ ಸಹಕಾರ ಸಂಘ ಸ್ಥಾಪಿಸಿದರು.
  12. ಅಂತರ್ ಜಾತೀಯ ಮದುವೆಗೆ ಪ್ರೋತ್ಸಾಹ. ಅಸ್ಪೃಶ್ಯರ ಒಳಪಂಗಡಗಳಲ್ಲಿ ಅಂತರ ಪಂಗಡ ಮದುವೆಗೆ ಪ್ರೋತ್ಸಾಹ. ದೇವದಾಸಿ ಮತ್ತು ಎಲ್ಲ ಜಾತಿಯ ವಿಧವೆಯರಿಗಾಗಿ ಆಶ್ರಮಗಳ ಸ್ಥಾಪನೆ. ಅವರ ವಿವಾಹಕ್ಕೆ ಪ್ರೋತ್ಸಾಹ.
  13. ದಲಿತ ವಿದ್ಯಾರ್ಥಿನಿಯರಿಗಾಗಿ ಮಂಗಳೂರಿನ ಶೇಡಿಗುಡ್ಡೆಯಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದರು. ಕೊಡಿಯಾಲ ಬೈಲ್ ನಲ್ಲಿ ಅವರು ಸ್ಥಾಪಿಸಿದ ವಿದ್ಯಾರ್ಥಿನಿಲಯವು ಸಮಾಜ ಕಲ್ಯಾಣ ಇಲಾಖೆಯಿಂದ ‘ಕುದ್ಮುಲ್ ರಂಗರಾವ್ ವಿದ್ಯಾರ್ಥಿನಿ ನಿಲಯ’ ಎಂಬ ಹೆಸರಿನಲ್ಲಿ ನಡೆಯುತ್ತಿದೆ.( ಈಗ ನವೀಕರಣಗೊಳ್ಳುತ್ತಿದೆ)

ದಲಿತರ ಬಗ್ಗೆ ರಂಗರಾಯರಿಗೆ ಅದೆಂತಹ ಅದಮ್ಯ ಪ್ರೀತಿ ಇತ್ತು, ದಲಿತರ ಏಳಿಗೆಯ ಬಗ್ಗೆ ಅವರ ಬದ್ಧತೆ ಎಷ್ಟು ಅಚಲ ಮತ್ತು ಪ್ರಾಮಾಣಿಕವಾದುದಾಗಿತ್ತು ಎಂದರೆ, ‘ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ’ ಎಂದು ಅವರು ಹೇಳಿದರು. ಮಂಗಳೂರಿನಲ್ಲಿರುವ ಅವರ ಸಮಾಧಿಯಲ್ಲಿ ಇದೇ ಬರೆಹವನ್ನು ಈಗಲೂ ಕಾಣಬಹದು.

ಬ್ರಹ್ಮ ಸಮಾಜದತ್ತ ಒಲವು

ರಾಜಾರಾಮ್ ಮೋಹನ ರಾಯ್ ಸ್ಥಾಪಿಸಿದ ಬ್ರಹ್ಮ ಸಮಾಜದ ಬೋಧನೆಗಳು ರಂಗರಾಯರ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದ್ದವು. ಉಳ್ಳಾಲದ ರಘುನಾಥಯ್ಯನವರೊಂದಿಗೆ ಸೇರಿಕೊಂಡು ಮಂಗಳೂರಿನಲ್ಲಿ ಬ್ರಹ್ಮ ಸಮಾಜದ ಘಟಕವನ್ನೂ ಅವರು ಸ್ಥಾಪಿಸಿದ್ದರು. ಬದುಕಿನ ಕೊನೆಯ ದಿನಗಳಲ್ಲಿ ರಂಗರಾಯರು ಬ್ರಹ್ಮ ಸಮಾಜದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡರು.  1924 ರ ಹೊತ್ತಿಗೆ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. 1927 ರಲ್ಲಿ ದಿಲ್ಲಿಯಿಂದ ಆಗಮಿಸಿದ ಆರ್ಯ ಸಮಾಜದ ಸುವಿಚರಣಾನಂದ ಸ್ವಾಮೀಜಿಯವರಿಂದ ಸನ್ಯಾಸತ್ವ ಸ್ವೀಕರಿಸಿ ‘ಸ್ವಾಮಿ ಈಶ್ವರಾನಂದ’ ಎಂದು ನಾಮಾಂಕಿತರಾದರು.

ಜನವರಿ 30, 1928 ರಂದು ರಂಗರಾಯರು ವಿಧಿವಶರಾದಾಗ ಅವರು ಉಯಿಲಿನಲ್ಲಿ ಬರೆದಿದ್ದಂತೆ ಅಸ್ಪೃಶ್ಯ ತೋಟಿ ಜನಾಂಗದವರು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಬೃಹತ್ ಮೆರವಣಿಗೆಯಲ್ಲಿ ಮೃತ ದೇಹವನ್ನು ಮಂಗಳೂರಿನ ನಂದಿಗುಡ್ಡೆ ಸ್ಮಶಾನಕ್ಕೆ ಒಯ್ದು ಅಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ನಾವೀಗ ಇರುವುದು 21 ನೆಯ ಶತಮಾನದಲ್ಲಿ. ಆದರೆ 19 ನೆಯ ಶತಮಾನದ ಕೊನೆಯ ಭಾಗದಿಂದಲೇ ದಲಿತೋದ್ಧಾರದ ಚಟುವಟಿಕೆಗಳನ್ನು ಶುರು ಮಾಡಿದ ಕುದ್ಮುಲ್ ರಂಗರಾವ್ ನಿಜಕ್ಕೂ ಒಂದು ಬೆರಗು, ಒಂದು ಆದರ್ಶ. ಸಮಾಜ ಸುಧಾರಣೆಯ ಕ್ಷೇತ್ರದ, ಅದರಲ್ಲೂ ಮುಖ್ಯವಾಗಿ ಶಿಕ್ಷಣದ ಮೂಲಕ ಶೋಷಿತರ ವಿಮೋಚನೆಯ ಉಲ್ಲೇಖವಾದಾಗಲೆಲ್ಲ ನೆನಪಾಗುವ ಮತ್ತು ನೆನಪಾಗಲೇಬೇಕಾದ ಒಂದು ಹೆಸರು ಕುದ್ಮುಲ್ ರಂಗರಾವ್. ಕುದ್ಮುಲ್ ರಂಗರಾವ್ ನಮ್ಮವರು, ನಮ್ಮ ಕನ್ನಡದವರು ಎಂಬುದು ಇನ್ನೂ ದೊಡ್ಡ ಹೆಮ್ಮೆ.

ಶ್ರೀನಿವಾಸ ಕಾರ್ಕಳ
ಬರಹಗಾರರು, ಚಿಂತಕರು

Related Articles

ಇತ್ತೀಚಿನ ಸುದ್ದಿಗಳು