Friday, June 21, 2024

ಸತ್ಯ | ನ್ಯಾಯ |ಧರ್ಮ

ದಂಧೆಯತ್ತ ಮೋಹನನ ಚಿತ್ತ

(ಈ ವರೆಗೆ…)

ಮೋಹನನೊಂದಿಗೆ ಎಸ್‌ ಐ ಮನೆ ತಲಪಿದ ಗಂಗೆ ನಡೆದ ವಿಷಯವನ್ನು ವಿವರಿಸುತ್ತಾಳೆ. ಗಿರಿಗೌಡನನ್ನು ಮಟ್ಟಹಾಕಲು ಕಾಯುತ್ತಿದ್ದ ಎಸ್‌ ಐ ಪೊಲೀಸರನ್ನು ಕಳುಹಿಸಿ ಗಿರಿಗೌಡನ ಸಹಿತ ಸಿಕ್ಕವರನ್ನೆಲ್ಲ ಸ್ಟೇಷನ್‌ ಗೆ ಎಳೆದು ತರುತ್ತಾರೆ. ಲಾಠಿಯ ರುಚಿಉಂಡ ಅವರೆಲ್ಲ ತಪ್ಪೊಪಿಗೆ ಬರೆದು ಕೊಟ್ಟು ಗಂಗೆಯನ್ನು ಊರಿನ ಎಲ್ಲ ಸಮಾರಂಭಗಳಿಗೂ ಕರೆಯುವುದಾಗಿ ಹೇಳಿ ಊರು ಸೇರುತ್ತಾರೆ. ಊರಿನಲ್ಲಿ ಮುಂದೇನಾಯ್ತು? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಎಂಟನೆಯ ಕಂತು.

ಪೊಲೀಸರ ಮಾತಿಗೆ ಕಟ್ಟು ಬಿದ್ದು ಮದುವೆ ಮುಂಜಿ, ನಾಮಕರಣ, ಒಸಗೆ,  ದೇವರ ಪೂಜೆ, ಹೀಗೆ  ಊರಿನ ಎಲ್ಲಾ ಕಾರ್ಯಕ್ರಮಗಳಿಗೂ ಗಂಗೆಯನ್ನು ಬಿಡದೆ ಕರೆಯುತ್ತಿದ್ದ ಜನ, ದಿನ ಕಳೆದಂತೆ ಅವಳ ಒಳ್ಳೆಯ ಮನೋಭಾವ ಪ್ರೀತಿ ತುಂಬಿದ ನಡೆನುಡಿ ಕಂಡು ತಮ್ಮ ಅಸಮಾಧಾನವನ್ನೆಲ್ಲ ತೊರೆದು ಬಹು ಬೇಗ ಅವಳನ್ನು ತಮ್ಮೊಳಗೊಬ್ಬಳನ್ನಾಗಿಸಿಕೊಂಡರು. ಇದುವರೆಗೂ ಒಂದು ನಾಯಿ ಕೂಡ ಸುಳಿಯದ ಚಿಕ್ಕತಾಯಮ್ಮನ ಮನೆ ಈಗ ಮಕ್ಕಳು ಮರಿಗಳಿಂದ ಹಿಡಿದು ಎಲ್ಲಾ ವಯಸ್ಸಿನವರು ನಿಸೂರಾಗಿ ಬಂದು ಆಡಿ ಹರಟಿ ಹೋಗುವ  ಮಾತಿನ ಕಟ್ಟೆಯಾಗಿ ಪರಿವರ್ತನೆ ಆಯಿತು. 

ಇದುವರೆಗೂ ಗಂಗೆಯ ಆಸ್ತಿ ಅಂತಸ್ತು, ಮನೆತನಕ್ಕೆ ಹೆದರಿ ತನ್ನ ಹರಿತವಾದ ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಚಿಕ್ಕ ತಾಯಮ್ಮನಿಗೆ,  ಮನೆ ಮೇಲಿನ ತನ್ನ ಹಿಡಿತವೇ ಕೈ ತಪ್ಪುತ್ತಿರುವುದನ್ನು ಕಂಡು ಸುಮ್ಮನಿರಲಾಗಲಿಲ್ಲ  ಒಳಗೊಳಗೆ ಕುದ್ದು ಕೆಂಡದುಂಡೆಯಂತಾಗಿ, ತನ್ನ ನಂಜನ್ನೆಲ್ಲಾ ಕಾರಿ ಹಗುರಾಗಲು ಅವಕಾಶಕ್ಕಾಗಿ ಹೊಂಚ ತೊಡಗಿದಳು. 

ಈ ಕುದಿ ಎಸರು ಆಗಾಗ ಕುದ್ದು ಹಿಡಿತ ತಪ್ಪಿ ಹೊರಚೆಲ್ಲುತ್ತಿದ್ದದ್ದು ಚಿಕ್ಕತಾಯಮ್ಮನಿಗೆ ಮಾತ್ರವೇ ಅಲ್ಲ, ಮಗ ಮೋಹನನಿಗೂ ಹೀಗೆ ಆಗಿತ್ತು. ಆ ಮನೆಯೊಳಗೆ ಹೊಕ್ಕಾಡುತ್ತಿದ್ದ ಜನ, ಗಂಗೆಯೊಂದಿಗೆ ಮಾತ್ರವೇ ವ್ಯವಹರಿಸಿ ತಮಗೆ ಕವಡೆ ಕಿಮ್ಮತ್ತನ್ನು ಕೊಡದಂತೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದದ್ದು ಮೀಸೆ ಹೊತ್ತ ಇವನಿಗೂ ನುಂಗಲಾರದ ತುತ್ತಾಗಿತ್ತು.  

ಇದೇ ತಿಕ್ಕಾಟದಲ್ಲಿ ಸುಮಾರು ಮೂರುನಾಕು ತಿಂಗಳು ಕಳೆಯುತ್ತಾ ಬಂದಿತ್ತು. ಊರಿನಲ್ಲಿ ದೊಂಬಿ ಎದ್ದ ಆ ರಾತ್ರಿ ಗಂಗೆಯ ಹಿಂದೆ ತಲೆ ತಗ್ಗಿಸಿ ಹೇಡಿಯಂತೆ ಓಡಿಹೋದ ತನ್ನ ಬಗ್ಗೆ ಆಗಾಗ ಮೋಹನನಿಗೆ ರೋಷ ಉಕ್ಕೇರುತ್ತಿತ್ತು . ತನಗೆ ಅವಮಾನ ಮಾಡಲೆಂದೇ ಊರಜನ ಗಂಗೆಯನ್ನು ತಲೆಮೇಲೆ ಹೊತ್ತು ಮೆರೆಯುತ್ತಿದ್ದಾರೆ ಎಂಬ ಅನುಮಾನಕ್ಕೆ ಬಿದ್ದ ಮೋಹನನ ಅಶಾಂತ ಮನಸ್ಸು, ಊರಿನಲ್ಲಿ ಮತ್ತೆ ದೊಂಬಿ ಎಬ್ಬಿಸಿ ತನ್ನ ಗಂಡಸುತನ ತೋರಿಸಲು ಹಾತೊರೆಯುತ್ತಲೆ ಇತ್ತು. ಆ ರಾತ್ರಿ ಊರೆಲ್ಲಾ ಉಂಡು ಮಲಗಿತ್ತು. ಗಂಗೆಯೊಂದಿಗೆ ಕಾಲುಕೆರೆದು ಜಗಳ ತೆಗೆದ ಮೋಹನ, ಇದ್ದಕ್ಕಿದ್ದಂತೆ ದಡಾರನೆ ಮನೆಬಾಗಿಲು ತೆರೆದು ಬೀದಿಗೆ ಬಂದ.

ಇದೇನಾಗುತ್ತಿದೆ ಎಂದು ಗಂಗೆ ನೋಡುವುದರ ಒಳಗೆ  “ಬಡ್ಡಿ ಮಕ್ಳ ಈ ಸರಿ ಅಂತೂ ತಲೆ ತಪ್ಪುಸ್ಕೊಂಡು ಹೋಗೋ ಮಾತೆ ಇಲ್ಲ ಒಂದಿಬ್ರುನ್ನಾದ್ರು ಸಿಗ್ದಾಕೆ ಹೋಗೋದು” ಎಂದು ಗೊಣಗುತ್ತ ಅಂಗಳದಲ್ಲಿದ್ದ ಜಲ್ಲಿಕಲ್ಲಿನ ರಾಶಿಯಿಂದ ಒಂದೊಂದೆ ಕಲ್ಲು ತೆಗೆದು ಗುರಿಯಿಟ್ಟು ಗಿರಿಗೌಡನ ಮನೆಮೇಲೆ ಬೀಸತೊಡಗಿದ. ಇದನ್ನು ಕಂಡು ಗಾಬರಿ ಬಿದ್ದ ಗಂಗೆ ಒಂದೇ ಉಸಿರಿಗೆ ಮನೆಯವರನ್ನೆಲ್ಲಾ ಎಬ್ಬಿಸಿ ಮೋಹನನನ್ನು ಒಳಗೆಳೆದು ತಂದು ಕೂಡಿಹಾಕಿದಳು.

ಮೋಹನನ ಅಟ್ಟಹಾಸವನ್ನು ಹಲ್ಲು ಕಚ್ಚಿ ಸಹಿಸಿದ ಗಿರಿಗೌಡನ ಮನೆಯವರು ದೊಂಬಿದಾಳಿ ಎಬ್ಬಿಸಲು ಹೋಗದೆ, ಅವನ ಮೇಲೆ ದೂರು ಹೊತ್ತು  ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಗಂಡನನ್ನು ಬಿಟ್ಟುಕೊಡಲಾರದೆ ಪೀಕಲಾಟಕ್ಕೆ ಸಿಕ್ಕಿಕೊಂಡ ಗಂಗೆ ತನ್ನ ಜಾಣತನದಿಂದ ಗಿರಿಗೌಡ ಮಾಡಿದ  ಆರೋಪಗಳನ್ನೆಲ್ಲಾ ಅವನ ವಿರುದ್ಧವೇ ತಿರುಗಿಸಿ,  ಪೋಲಿಸಿನವರೆ ತಲೆದೂಗುವಂತೆ ಮಾಡಿ, ಮೋಹನನ ಕೂದಲು ಕೊಂಕದಂತೆ  ಊರಿಗೆ ಕರೆತಂದಳು. 

ಮನೆಯ ಒಳ ಬರದಂತೆ ಮಗ ಸೊಸೆಯನ್ನು ಬಾಗಿಲಲ್ಲಿಯೇ ತಡೆದು ನಿಲ್ಲಿಸಿದ ಚಿಕ್ಕತಾಯಮ್ಮ ” ನಿನ್ನಂತ ಪುಂಡುನ್ನ ಮನೆಲಿಟ್ಕೊಂಡ್ರೆ ಹೊಟ್ಟೆಗೆ  ತಣ್ಣೀರ್ ಬಟ್ಟೆ ಹಾಕಬೇಕಾಯ್ತದೆ. ಒಂದ್ರುಪಾಯಿ ಅದಾಯ ಇಲ್ಲ ಏನಿಲ್ಲ ನಾನ್ಯಾಕೆ ನಿಮ್ಮುನ್ನ ಮನೆಲಿಟ್ಕೊಂಡು ವಾಂಕರಹಾತ್ಲಿ , ಇನ್ಮೇಲೆ ಈ ಮನೆ ಹಾದಿ ಮರ್ತು ಮೈ ಬಗ್ಸಿ ದುಡ್ದು ಉಣ್ಣದ್ ಕಲಿರಿ”  ಎಂದು ಹೇಳಿ ಮೊದಲೇ ಗಂಟು ಕಟ್ಟಿ ಇಟ್ಟಿದ್ದ ಅವರಿಬ್ಬರ ಬಟ್ಟೆ ಬರೆಗಳನ್ನೆಲ್ಲಾ ಜಗಲಿ ಕಟ್ಟೆಯ ಮೇಲಿಟ್ಟು ಬಾಗಿಲು ಮುಚ್ಚಿಕೊಂಡಳು. 

ಇದು ಊರ ಜನರ ಗಮನಕ್ಕೆ ಬರುವ ಮೊದಲೆ ಅಲ್ಲಿಂದ ಜಾಗ ಖಾಲಿ ಮಾಡಿದ ದಂಪತಿಗಳು, ತಮ್ಮ ಬಟ್ಟೆಗಂಟಿನೊಂದಿಗೆ ಬಂದು ನಾರಿಪುರ ಸೇರಿಕೊಂಡರು. ಕೆಲವು ದಿನಗಳು ಅಲ್ಲಿಯೇ ಕತೆಹಾಕಿದ ಮೋಹನ, ಗಂಗೆಯ ಹಿಂಸೆಗೆ ಕಟ್ಟು ಬಿದ್ದು ಬೆಂಗಳೂರು ಸೇರಿ  ಕೆಲಸದ ಹುಡುಕಾಟಕ್ಕಿಳಿದ. ಅಲ್ಲಿ ಯಾವುದೇ ಕೆಲಸಕ್ಕೆ ಕೈಯಿಟ್ಟರು  ತಾನು ಮೊದಲು ಮಾಡುತ್ತಿದ್ದ ಕೆಲಸದಷ್ಟು ಸುಸೂತ್ರವೆನಿಸಲಿಲ್ಲ. ಸದಾ ತನ್ನ ಸುತ್ತ ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಮನಸ್ಸಿಗೆ ಮುದ ನೀಡುತ್ತಿದ್ದ ಹೆಣ್ಣು ಮಕ್ಕಳೊಂದಿಗಿನ ಅನಂದ, ಮತ್ತು ಅವರು ತನಗೆ ನೀಡುತ್ತಿದ್ದ ವಿಶೇಷ ಗೌರವವನೆಲ್ಲ ನೆನೆದು ಮತ್ತೆ ಅವನ ಗಮನವೆಲ್ಲ ಅದೇ ದಂಧೆಯತ್ತ ವಾಲಿತು.

ಮುಗ್ಧೆ ಎಂದುಕೊಂಡಿದ್ದ ಗಂಗೆ ತನ್ನ ಚುರುಕು ಚಾಲಾಕಿತನದಿಂದ ಪೊಲೀಸಿನವರಾದಿಯಾಗಿ ಊರಿನವರೆಲ್ಲರ ಮನಸ್ಸನ್ನು ಸೂರೆಗೊಂಡ ಪರಿ ನೆನೆದು “ಅಂಗೈಯಲ್ಲೆ ಬೆಣ್ಣೆ ಇಟ್ಕೊಂಡು ತುಪ್ಪುಕ್ಕಲಿತಿದ್ದೀನಲ್ಲ” ಎಂದು ಸೋಜಿಗಗೊಂಡ. ಯಾರ ಕಾಲ ಕೆಳಗು ಅಡಿಯಾಳಾಗದೆ ತನ್ನದೆ ಸ್ವಂತ ದಂಧೆ ಆರಂಭಿಸಿ, ವರ್ಷ ಎನ್ನುವುದರೊಳಗೆ ದೊಡ್ಡ ಬಂಗಲೆ ಕೊಂಡು ಅದರ ಮುಂದೆ ಒಂದು ಕಾರನ್ನಾದರು ನಿಲ್ಲಿಸುವಂತಾಗ ಬೇಕು ಎನ್ನುವ ಹುರುಪಿನೊಂದಿಗೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ರೆಡ್ಡಿ ಬಳಿ ಹೋಗಿ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡು ಕೈತುಂಬ ಹಣ ಪಡೆದು ಬಂದ. ಒಂದೆರಡು ಕೋಣೆಗಳು ಹೆಚ್ಚಿಗೆಯೇ ಇರುವಂತಹ  ದೊಡ್ಡ ಮನೆಯನ್ನೆ ಬಾಡಿಗೆ ಹಿಡಿದು ನಾರಿಪುರಕ್ಕೆ ಬಂದ.

ಹೇಗಾದರೂ ಮಾಡಿ ಗಂಗೆಯನ್ನು ಈ ದಂಧೆಗೆ ತಯಾರು ಮಾಡಲೇ ಬೇಕೆಂದುಕೊಂಡು  ಬಂದ ಮೋಹನನಿಗೆ, ಊರಿಗೆ ಬಂದ ಕೂಡಲೇ ಹೆಂಡತಿಯ ಬಸುರಿನ ವಿಷಯ ಕೇಳಿ ತನ್ನ ಕನಸಿನ ಗೋಪುರವೇ ಕುಸಿದಂತಾಯಿತು. ಒಂದೆರಡು ದಿನ ಅವಳೊಂದಿಗೆ ಸರಿಯಾಗಿ ಮಾತು ಕತೆಯಾಡದೆ ಮುಗುಮ್ಮಾಗಿಯೇ ಕಳೆದ. ಆದರೆ ವಾರ ಎನ್ನುವುದರಲ್ಲಿ ಅವಳೊಳಗೆ ನೀರಾಗಿ ಹರಿದ ಮೋಹನನೊಳಗೆ  ತಂದೆತನದ ಭಾವವೊಂದು ಮಿಡುಕಾಡ ತೊಡಗಿತ್ತು. 

ಇಷ್ಟರ ನಡುವೆ ನಾಕೈದು ಬಾರಿ ಸೋಪಾನಪೇಟೆಯತ್ತ  ಎಡತಾಕಿ ಬಂದಿದ್ದ ಮೋಹನನಿಗೆ, ಬಟ್ಟೆ ಅಂಗಡಿಯಲ್ಲಿ ಪರಿಚಯವಾದ ತಿದ್ದಿ ತೀಡಿದ ಗೊಂಬೆಯಂತಿದ್ದ ಸುಕನ್ಯಾಳ ಒಡನಾಟ,  ಕುಸಿಯುತ್ತಿದ್ದ ಅವನ ಕನಸಿನ ಗೋಪುರವನ್ನು ಎತ್ತಿನಿಲ್ಲಿಸಿದಂತಾಗಿತ್ತು. ಈ ಕಾರಣದಿಂದಾಗಿಯೇ ಅವನು ಗಂಗೆಯ ಬಸುರಿನ ವಿಷಯದಲ್ಲಿ ನಿರಾಳವಾಗಲು ಸಾಧ್ಯವಾಯಿತು.

ಇಬ್ಬರನ್ನು ಒಟ್ಟಿಗೆ ಬೆಂಗಳೂರಿನತ್ತ ಕರೆದುಕೊಂಡು ಹೊರಟ ಮೋಹನ, ಮೊದಲೇ ಬಸ್ಸ್ ಹತ್ತಿ ಕುಳಿತಿದ್ದ ಸುಕನ್ಯಾಳನ್ನು ಗಂಗೆಗೆ ಪರಿಚಯಿಸುತ್ತಾ ” ಇವಳು ನನ್ನ ಫ್ರೆಂಡ್ ತಂಗಿ ಗಂಗೂ, ಇವಳು ಕೂಡ ಬೆಂಗ್ಳೂರಲ್ಲೆ ಕೆಲಸಮಾಡ್ತಿರೋದು. ಇವ್ಳು ಒಂತರ ನಮ್ಮನೆ ಹುಡ್ಗಿ ಇದ್ದಂಗೆ.  ಬೇಕು ಅಂದ್ರೆ ಮನೆಯೆಲ್ಲ ಸೆಟ್ರೆಟ್ ಆಗೋವರೆಗೂ ಒಂದು ವಾರ ನಿನ್ಜೊತೆಲೆ ಇಟ್ಕೊ. ನಮ್ಮನೆಯಿಂದ್ಲೆ ಅವಳ್ ಫ್ಯಾಕ್ಟರಿಗ್ ಓಡಾಡ್ತಳೆ ಏನಂತಿ” ಎಂದು ಕೇಳಿದ. ಆ ಅಪರಿಚಿತ ಬೆಂಗಳೂರಿನಲ್ಲಿ ವಾರದ ಮಟ್ಟಿಗಾದರು ಮಾತಾಡಿಕೊಂಡಿರಲು ಒಬ್ಬ ಜೊತೆಗಾತಿ ಸಿಕ್ಕಳಲ್ಲ ಎಂಬ ಖುಷಿಯಲ್ಲಿ ತೇಲಿದ ಗಂಗೆ ” ಅಯ್ಯೋ ಬಾಳ ಒಳ್ಳೆ ಯೋಚ್ನೆ ಮಾಡಿದಿರಿ ಕನಿ ವಾರ ಅಲ್ದಿದ್ರೆ ತಿಂಗ್ಳೆ ಇರ್ಲಿ ಬುಡಿ ಎಂದು ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸುಕನ್ಯಾಳನ್ನು ಕರೆದು, ತನ್ನ  ಪಕ್ಕವೆ ಕೂರಿಸಿಕೊಂಡು ಬೆಂಗಳೂರಿನ ದಾರಿ ಸವೆಸಿದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ಲಾಠಿಯ ರುಚಿ ಸವಿದ ಬೋಗನೂರಿನ ಗಂಡಸರು

Related Articles

ಇತ್ತೀಚಿನ ಸುದ್ದಿಗಳು