Home ಬ್ರೇಕಿಂಗ್ ಸುದ್ದಿ ಖತರ್ನಾಕ್ ಗ್ಯಾಂಗ್ ಬಂಧನ‌ – ಹೆದ್ದಾರಿಯ ಒಂಟಿ ಮನೆಗಳೇ ಇವರ ಟಾರ್ಗೆಟ್

ಖತರ್ನಾಕ್ ಗ್ಯಾಂಗ್ ಬಂಧನ‌ – ಹೆದ್ದಾರಿಯ ಒಂಟಿ ಮನೆಗಳೇ ಇವರ ಟಾರ್ಗೆಟ್

ಹಾಸನ: ಆಲೂರು ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ–75ರ ಪಕ್ಕದಲ್ಲಿರುವ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದ ತಂಡವನ್ನು ಹಾಸನ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಂಧನದೊಂದಿಗೆ ಕಳೆದ ಕೆಲ ದಿನಗಳಿಂದ ಆತಂಕದಲ್ಲಿದ್ದ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ.

ಆಲೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ–75ರ ಪಕ್ಕದಲ್ಲಿರುವ ಎರಡು ಒಂಟಿ ಮನೆಗಳನ್ನು ದರೋಡೆಕೋರರು ಗುರಿಯಾಗಿಸಿಕೊಂಡಿದ್ದರು. ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು. ಸರಣಿ ದರೋಡೆ ಪ್ರಕರಣಗಳಿಂದ ಸ್ಥಳೀಯರಲ್ಲಿ ಭೀತಿ ಮೂಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿತ್ತು. ತನಿಖೆ ನಡೆಸಿದ ಪೊಲೀಸರು ದರೋಡೆಕೋರರ ತಂಡವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಅಶ್ರಫ್, ಇಬ್ರಾಹಿಂ ಖಲೀಲ್, ಹಮೀದ್, ಸಂಕೇತ್, ರಘು, ಹಾವೇರಿ ಮೂಲದ ಈರಣ್ಣ, ಆಲೂರು ತಾಲೂಕಿನ ಈಶ್ವರಹಳ್ಳಿ ಪೂಜೆ ನಿವಾಸಿ ಸುಲೇಮಾನ್ ಹಾಗೂ ಕಿತ್ತಗೆರೆ ಗ್ರಾಮದ ನಿವಾಸಿ ರಘು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸ್ಥಳೀಯ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ಒಂಟಿ ಮನೆಗಳನ್ನು ಗುರುತಿಸಿ, ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದರೋಡೆಗೆ ಯೋಜನೆ ರೂಪಿಸುತ್ತಿದ್ದರು. ಬಳಿಕ ಹೊರ ಜಿಲ್ಲೆಗಳಲ್ಲಿದ್ದ ಸಹಚರರಿಗೆ ಮಾಹಿತಿ ನೀಡುತ್ತಿದ್ದರು. ಎಲ್ಲರೂ ಒಟ್ಟಾಗಿ ಸೇರಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಅಥವಾ ಕಟ್ಟಿ ಹಾಕಿ ದರೋಡೆ ನಡೆಸಿ ಸ್ಥಳದಿಂದ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳ ಪೈಕಿ ಕೆಲವರು ಈ ಹಿಂದೆಯೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಕೋರರ ಬಂಧನದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಅವರು ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.

ವಿಶೇಷ ತಂಡದ ಕಾರ್ಯಾಚರಣೆಯಿಂದಾಗಿ ಆಲೂರು ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದ್ದ ಒಂಟಿ ಮನೆ ದರೋಡೆ ಪ್ರಕರಣಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ಮೂಡಿದೆ.

You cannot copy content of this page

Exit mobile version