Thursday, December 11, 2025

ಸತ್ಯ | ನ್ಯಾಯ |ಧರ್ಮ

“ಡೆವಿಲ್” ಅದ್ಧೂರಿ ಬಿಡುಗಡೆ; ಮುಗಿಲುಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರವು ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಭರ್ಜರಿ ಬಿಡುಗಡೆಯಾಗಿದೆ. ಬೆಳಗ್ಗೆಯೇ ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದರಿಂದ ಸಿನಿತೀಯೇಟರ್‌ಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ನಡೆಯುತ್ತಿದ್ದು, ಮೊದಲ ದಿನವೇ 1,000ಕ್ಕೂ ಹೆಚ್ಚು ಶೋಗಳು ನಿರೀಕ್ಷಿಸಲಾಗುತ್ತಿದೆ.

ಚಿತ್ರ ಬಿಡುಗಡೆಯ ದಿನವೇ ಜೈಲಿನಿಂದಲೇ ದರ್ಶನ್‌ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ. ನಟನ ಪತ್ನಿ ವಿಜಯಲಕ್ಷ್ಮೀ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ದರ್ಶನ್ ನೀಡಿದ ಸಂದೇಶ
“ನನ್ನ ಪ್ರೀತಿಯ ಸೆಲೆಬ್ರಿಟಿಗಳೇ,
ಈ ಸಂದೇಶ ನನ್ನ ಹೃದಯದಿಂದ ಬಂದಿದೆ. ವಿಜಿ ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ರಾಜ್ಯಾದ್ಯಂತ ನೀವು ಮಾಡುತ್ತಿರುವ ಪ್ರಚಾರಗಳ ಬಗ್ಗೆ ನಿರಂತರವಾಗಿ ನನಗೆ ತಿಳಿಸುತ್ತಿದ್ದಾರೆ. ದೂರದಲ್ಲಿದ್ದರೂ ನಿಮ್ಮ ಉಪಸ್ಥಿತಿಯನ್ನು ಪ್ರತಿ ಕ್ಷಣವೂ ನಾನು ಅನುಭವಿಸುತ್ತಿದ್ದೇನೆ,” ಎಂದು ದರ್ಶನ್ ಬರಹದಲ್ಲಿ ತಿಳಿಸಿದ್ದಾರೆ.

ಮುಂದುವರಿದು ಅವರು ಅಭಿಮಾನಿಗಳಿಗೆ ನಕಾರಾತ್ಮಕತೆ ಅಥವಾ ವದಂತಿಗಳ ಬಗ್ಗೆ ಚಿಂತಿಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

“ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ನನ್ನ ಮೇಲೆ ಇಟ್ಟಿರುವ ನಂಬಿಕೆ ಇಂದು ನನಗೆ ನಂಬಿಕೆಯಾಗಿದ್ದು, ನನ್ನ ಬಲವಾಗಿದೆ. ನನ್ನ ಅನುಪಸ್ಥಿತಿಯಲ್ಲಿಯೇ ನೀವು ಎಲ್ಲ ಅನುಮಾನಗಳಿಗೆ, ಧ್ವನಿಗಳಿಗೆ ಪದಗಳಿಂದಲ್ಲ, ಡೆವಿಲ್ ಚಿತ್ರದ ಯಶಸ್ಸಿನಿಂದ ಉತ್ತರಿಸಬೇಕು. ಇದು ನಿಮ್ಮ ಧ್ವನಿ, ನಮ್ಮ ಹೇಳಿಕೆ,” ಎಂದು ದರ್ಶನ್ ಹೇಳಿದ್ದಾರೆ.

ಅಭಿಮಾನಿಗಳ ಏಕತೆ, ಸಮರ್ಪಣೆ ಕುರಿತು ಅವರು ಹೆಮ್ಮೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಅವರನ್ನು ಭೇಟಿ ಮಾಡುವ ದಿನಕ್ಕಾಗಿ ಕಾಯಲಾಗುವುದಿಲ್ಲ ಎಂದೂ ತಿಳಿಸಿದ್ದಾರೆ.

“ನೀವು ನನ್ನನ್ನು ನಂಬುವಂತೆಯೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ನಂಬುತ್ತೇನೆ. ಸಮಯವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ,” ಎಂದು ದರ್ಶನ್ ಸಂದೇಶ ಕೊನೆಗೊಳಿಸಿದ್ದಾರೆ.

ಡೆವಿಲ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ ಬಂದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಸಂತೋಷ ಹೆಚ್ಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page