Friday, October 4, 2024

ಸತ್ಯ | ನ್ಯಾಯ |ಧರ್ಮ

ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಾಳೆ(ಅ.5)ಗೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆಯಿತು. ಜಾಮೀನು ಅರ್ಜಿ ವಿಚಾರಣೆ ಸಂಬಂಧ ಹಿರಿಯ ವಕೀಲ ಸಿಎನ್ ನಾಗೇಶ್ ಅವರು ಇಂದು ದರ್ಶನ್ ಪರ ವಾದ ಮಂಡಿಸಿದರು.

ಎಸ್​ಪಿಪಿ ಪ್ರಸನ್ನ ಕುಮಾರ್ ಹಾಜರಿಯಲ್ಲಿ ವಾದ ಮಂಡನೆ ಆರಂಭಿಸಿದ ಹಿರಿಯ ವಕೀಲ ಸಿವಿ ನಾಗೇಶ್, ಪ್ರಕರಣದಲ್ಲಿ ಮಾಧ್ಯಮಗಳು ದರ್ಶನ್ ಅನ್ನು ಅಪರಾಧಿ ಎಂದೇ ಬಿಂಬಿಸಿವೆ ಎಂದು ಟೀಕೆ ವ್ಯಕ್ತಪಡಿಸಿದ ಸಿವಿ ನಾಗೇಶ್ ಆನಂತರ ಎಸ್​ಪಿಪಿ ಅವರು ಈ ತನಿಖೆಯನ್ನು ಅತ್ಯುತ್ತಮ ಎಂದಿದ್ದಾರೆ ಎಂದು ತಮ್ಮ ವಾದ ಆರಂಭಿಸಿದರು.

ಆದರೆ ಇದೊಂದು ಕಳಪೆ ತನಿಖೆ ವರದಿ ಎಂದು ವಾದಿಸಿದ ಸಿವಿ ನಾಗೇಶ್, ಪ್ರಕರಣಕ್ಕೆ ಸಂಬಂಧಿಸಿದಂತೆ ವಾದದ ಟಿಪ್ಪಣಿ ಸಲ್ಲಿಸಿ, ಆ ಬಳಿಕ ಎರಡು ಸುಪ್ರೀಂ ಕೋರ್ಟ್​ನ ಆದೇಶಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.

ಈ ಪ್ರಕರಣದಲ್ಲಿ ಮಾಧ್ಯಮಗಳ ವರದಿ ಆಧಾರದಲ್ಲಿ ತೀರ್ಪು ನೀಡಬಾರದೆಂದು ಮನವಿ ಮಾಡಿದ ವಕೀಲ ಸಿವಿ ನಾಗೇಶ್, ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆ ಗಮನ ಸೆಳೆದರು. ಜೊತೆಗೆ ಸುಪ್ರೀಂ ಕೋರ್ಟ್​ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ, ಪೊಲೀಸರು ತನಿಖೆಯ ವೇಳೆ ವಶಪಡಿಸಿಕೊಂಡಿರುವ ವಸ್ತುಗಳನ್ನು ಗಂಭೀರವಾಗಿ ಅಂದರೆ ಸಾಕ್ಷಿಗಳೆಂದು ಪರಿಗಣಿಸುವ ಅಗತ್ಯವಿಲ್ಲವೆಂದು ವಾದಿಸಿದರು.

ಸಧ್ಯ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಸಿವಿ ನಾಗೇಶ್ ಅವರ ವಾದ ನಾಳೆಗೂ ಮುಂದುವರೆಯಲಿದ್ದು, ಅದಾದ ಬಳಿಕ ಪ್ರಸನ್ನ ಅವರ ಆಕ್ಷೇಪಣೆ ಸಹ ಇರುವ ಸಾಧ್ಯತೆ ಇದೆ. ಆ ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತಂತೆ ತೀರ್ಪು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page