Friday, September 27, 2024

ಸತ್ಯ | ನ್ಯಾಯ |ಧರ್ಮ

ರೇಣುಕಾಸ್ವಾಮಿ ಹತ್ಯೆ ಪ್ರಕರಣ| ʼನಾನು ನಿರಪರಾಧಿ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆʼ ಜಾಮೀನು ಕೊಡಿ ಎಂದ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜಿಲ್ಲಾ ಕಾರಾಗೃಹದಲ್ಲಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಅವರು ಜಾಮೀನು ಅರ್ಜಿಯಲ್ಲಿ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಹೈಕೋರ್ಟ್ ಪೀಠ ಶುಕ್ರವಾರ ವಿಚಾರಣೆ ನಡೆಸಲಿದೆ.

ದರ್ಶನ್ ಅವರ ಜಾಮೀನು ಅರ್ಜಿಯಲ್ಲಿ ಅವರನ್ನು ಪ್ರಕರಣದಲ್ಲಿ “ಫಿಕ್ಸ್” ಮಾಡಲಾಗಿದೆ ಎಂದು ಹೇಳಲಾಗಿದೆ. “ತಲೆಯ ಮೇಲಿರುವ ದೊಡ್ಡ ಗಾಯವನ್ನು ಹೊರತುಪಡಿಸಿ, ರೇಣುಕಾಸ್ವಾಮಿ ಅವರ ದೇಹದಲ್ಲಿ ಯಾವುದೇ ದೊಡ್ಡ ಗಾಯಗಳು ಕಂಡುಬಂದಿಲ್ಲ, ಅವರು ಸತ್ತ ಸಮಯದ ಕುರಿತು ನಿಖರವಾದ ಸ್ಪಷ್ಟತೆ ಇಲ್ಲ, ನ್ಯಾಯಾಲಯದ ಮುಂದಿನ ಹೇಳಿಕೆಗಳು ಮತ್ತು ವೈದ್ಯಕೀಯ ವರದಿಗಳ ನಡುವೆ ವಿರೋಧಾಭಾಸಗಳಿವೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲ. ದರ್ಶನ್ ಕೊಲೆಯತ್ನ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅಧಿಕಾರಿಗಳು ದರ್ಶನ್ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.

ಇದಲ್ಲದೆ, ಸೂಪರ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮತ್ತು ಇತರ ದೇಶಗಳಲ್ಲಿ ಅಭಿಮಾನಿಗಳಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ. ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯ ಜಾಮೀನು ಅರ್ಜಿಯನ್ನು ಅಂಗೀಕರಿಸಿದರೆ ದರ್ಶನ್ ಅವರನ್ನು ಹೆಲಿಕಾಪ್ಟರ್ ಮೂಲಕ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಪತ್ನಿ ವಿಜಯಲಕ್ಷ್ಮಿ ಅವರು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಜೂನ್ 9ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಬಂಧಿಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು.

ರೇಣುಕಾಸ್ವಾಮಿಯನ್ನು ಕೊಲೆ ಮಾಡಿ, ಶವವನ್ನು ಸುಮನಹಳ್ಳಿಯ ಚರಂಡಿಗೆ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11ರಂದು ಬೆಳಿಗ್ಗೆ ದರ್ಶನ್ ಮತ್ತು ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ 17 ಜನರನ್ನು ಬಂಧಿಸಲಾಗಿತ್ತು. ಎಲ್ಲಾ ಆರೋಪಿಗಳು ಸದ್ಯ ಜೈಲಿನಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಂಧನದ 102 ದಿನಗಳ ನಂತರ, ದರ್ಶನ್ ಕಳೆದ ಶನಿವಾರ, ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಅವರ ವಕೀಲರು ಕೂಡ ಈ ವಿಷಯದ ಬಗ್ಗೆ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಯಲ್ ಟ್ರೀಟ್ ಮೆಂಟ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಕೂಡ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕಾರಾಗೃಹ ಇಲಾಖೆಗೆ ಸೇರಿದ ಒಂಬತ್ತು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ದರ್ಶನ್ ಮತ್ತು ಇತರರ ಮೇಲೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಅಲ್ಲದೆ ಐಟಿ ಇಲಾಖೆಯ ಅಧಿಕಾರಿಗಳೂ ಅವರನ್ನು ಬಳ್ಳಾರಿ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page