Friday, July 11, 2025

ಸತ್ಯ | ನ್ಯಾಯ |ಧರ್ಮ

ದರ್ಶನ್‌ ಅವಮಾನ ಖಂಡನೀಯ: ʼನಾವು ಪ್ರೀತಿ ಮತ್ತು ಗೌರವವನ್ನು ಅಷ್ಟೇ ಹಂಚಬೇಕುʼ- ಕಿಚ್ಚ ಸುದೀಪ್‌

ಬೆಂಗಳೂರು: ಹೊಸಪೇಟೆಯಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೇಲೆ ಚಪ್ಪಲಿ ಎಸೆದಿರುವ ಘಟನೆಯನ್ನು ನಟ ಕಿಚ್ಚ ಸುದೀಪ್‌ ಖಂಡಿಸಿದ್ದು, ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ, ʼನಾವು ಪ್ರೀತಿ ಮತ್ತು ಗೌರವವನ್ನು ಹಂಚಬೇಕುʼ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಹೊಸಪೇಟೆಯಲ್ಲಿ ಕನ್ನಡ ಭಾಷೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾದ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗದ ಖ್ಯಾತ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾರ್ಯಕ್ರಮದ ಕುರಿತು ಮಾತನಾಡುವಾಗ, ಕೆಲವು ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ಎಸೆದಿದ್ದರು. ಈ ಘಟನೆಯು ಕನ್ನಡ ಚಿತ್ರರಂಗಕ್ಕೆ ಅವಮಾನ ಎಂದು ರಾಜ್ಯದಾದ್ಯಂತ ಹಲವು ನಟರು, ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ದರ್ಶನ್‌ ಪರ ನಿಂತಿದ್ದಾರೆ.
ಈ ವೇಳೆ ನಾಯಕ ನಟ ಕಿಚ್ಚ ಸುದೀಪ್‌ ಕೂಡ ದರ್ಶನ್‌ ಪರ ನಿಂತಿದ್ದು, ಟ್ವೀಟ್‌ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ʼದ್ವೇಷವೇ ಎಲ್ಲದಕ್ಕೂ ಉತ್ತರವಲ್ಲʼ ನಮ್ಮ ನೆಲ, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು, ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು ಪರಿಹಾರವು ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ. ಮತ್ತು ಸಮಸ್ಯೆಯನ್ನು ಆಹ್ಲಾದಕರ, ಶಾಂತ ರೀತಿಯಲ್ಲಿ ಪರಿಹರಿಸಬಹುದುʼ ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ʼಆ ವಿಡಿಯೋವನ್ನು ನೋಡಿ ನಾನು ತುಂಬಾ ವಿಚಲಿತನಾದೆ. ಆ ಸಿನಿಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು. ಅವರೆಲ್ಲ ಆ ಸಿನಿಮಾ ಕಾರ್ಯಕ್ರಮದ ಭಾಗವಾಗಿದ್ದರು. ಆ ಸಮಯದಲ್ಲಿ ಸಂಭವಿಸಿದ ಅಗೌರವದ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಈ ಅನ್ಯಾಯದ ಪ್ರತಿಕ್ರಿಯೆಗಳಿಗೆ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹಾಗಾಗಿ ಒಳಗಿರುವ ಆಕ್ರೋಶವನ್ನು ಹೊರಹಾಕುವ ಮಾರ್ಗವೂ ಇದಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ʼದರ್ಶನ್ ಮತ್ತು ಪುನೀತ್ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಿಗೆ ಅಸಮಾಧಾನವಿದೆ ಎಂಬುದು ನನಗೆ ಗೊತ್ತಿದೆ. ಆದರೆ ಪುನೀತ್‌ರವರು ಕೂಡ ಈ ರೀತಿಯ ಘಟನೆಗಳನ್ನು ಒಪ್ಪುತ್ತಿರಲಿಲ್ಲ ಮತ್ತು ಸಹಕರಿಸುತ್ತಿರಲಿಲ್ಲ. ಏಕೆಂದರೆ ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ಯಾವನೋ ಒಬ್ಬ ಗುಂಪಲ್ಲಿ ಮಾಡುವ ಕ್ಷುಲ್ಲಕ ಕೆಲಸಕ್ಕೆ ಇಡೀ ವ್ಯವಸ್ಥೆಯನ್ನು ದೂಷಣೆ ಮಾಡುವುದು ಬೇಡ. ಇಡೀ ವ್ಯವಸ್ಥೆ ಪ್ರೀತಿ, ಘನತೆ, ಗೌರವದಿಂದ ತುಂಬಿದೆ ಎಂಬುದು ಪುನೀತ್ ಅಭಿಮಾನಿಗಳಿಗೆ ಗೊತ್ತಿರಬೇಕುʼ ಎಂದು ಸುದೀಪ್‌ ಹೇಳಿದ್ದಾರೆ.
ʼದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಲೇಬೇಕು. ನಿಜಕ್ಕೂ ಈ ಘಟನೆ ನನ್ನನ್ನು ವಿಚಲಿತನನ್ನಾಗಿ ಮಾಡಿದೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʼಕನ್ನಡ ಚಿತ್ರರಂಗ ಮತ್ತು ಜನ ಕನ್ನಡ ಹಾಗೂ ಕರ್ನಾಟಕಕ್ಕೆ ಹಾಗೂ ಎಲ್ಲರಿಗೂ ಗೌರವ ತಂದುಕೊಡುವ ಕೊಡುವ ಕೆಲಸ ಮಾಡಿದೆ. ಒಳ್ಳೆಯದನ್ನು ನಾವು ಎಲ್ಲೆಡೆ ಹರಡಬೇಕೆ ವಿನಃ ಇಂತಹ ನೀಚ ಕೃತ್ಯಗಳ ಮೂಲಕ ಕೆಟ್ಟ ಸಂದೇಶವನ್ನು ಹರಡಬಾರದುʼ ಎಂದಿದ್ದಾರೆ.

ʼನನಗೆ ಗೊತ್ತಿದೆ. ಕೆಲವು ನಟರುಗಳ ನಡುವೆ ಹಾಗೂ ಅಭಿಮಾನಿಗಳ ಮಧ್ಯೆ ಅಸಮಾಧಾನವಿದೆ. ಭಿನ್ನಾಭಿಪ್ರಾಯವಿದೆ. ನಾನೂ ದರ್ಶನ್ ಮತ್ತು ಮನೀತ್ ಇಬ್ಬರನ್ನೂ ಹತ್ತಿರದಿಂದ ಬಲ್ಲವನಾಗಿದ್ದೇನೆ. ಇಬ್ಬರ ಜೀವನವನ್ನು ನೋಡಿದ್ದೇನೆ. ಆ ಸಲುಗೆಯಿಂದ ನನ್ನ ಮನದ ಮಾತುಗಳನ್ನು ಹೇಳುತ್ತಿದ್ದೇನೆ. ನಾನು 27 ವರ್ಷ ಸಿನಿಮಾರಂಗದಲ್ಲಿ ಜೀವಿಸಿದ್ದೇನೆ. ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ನೋಡಿದ್ದೇನೆ. ನಾವು ಪ್ರೀತಿ ಮತ್ತು ಗೌರವವನ್ನು ಹಂಚಬೇಕು, ಇದೇ ನಮಗೆ ಪ್ರತಿಯಾಗಿ ಸಿಗುವುದು ಕೂಡ. ಇದೊಂದೇ ದಾರಿ ಪ್ರತಿಯೊಂದು ಸಂದರ್ಭ ಮತ್ತು ಎಲ್ಲರನ್ನು ಗೆಲ್ಲಲು ಎಂದು ಕಿಚ್ಚ ಸುದೀಪ್‌ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page