Wednesday, September 24, 2025

ಸತ್ಯ | ನ್ಯಾಯ |ಧರ್ಮ

ರಾಮ್‌ಲೀಲಾ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಹೃದಯಾಘಾತದಿಂದ ಮೃತನಾದ ದಶರಥ ಪಾತ್ರಧಾರಿ

ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಒಂದು ದುಃಖಕರ ಘಟನೆ ನಡೆದಿದೆ. ರಾಮ್‌ಲೀಲಾ ನಾಟಕದಲ್ಲಿ ದಶರಥನ ಪಾತ್ರ ನಿರ್ವಹಿಸುತ್ತಿದ್ದ ನಟನೊಬ್ಬ ವೇದಿಕೆಯ ಮೇಲೆಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತಪಟ್ಟ ನಟನ ಹೆಸರು ಅಮ್ರಿಶ್ ಕುಮಾರ್, ಅವರು ಒಬ್ಬ ಹಿರಿಯ ರಂಗಭೂಮಿ ಕಲಾವಿದರು. ಮಂಗಳವಾರ ರಾತ್ರಿ ನಡೆಯುತ್ತಿದ್ದ ನೇರ ಪ್ರದರ್ಶನದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಿಮಾಚಲ ಪ್ರದೇಶದಲ್ಲಿ ಅಮ್ರಿಶ್ ಕುಮಾರ್ ಅವರಿಗೆ ವಿಶೇಷ ಜನಪ್ರಿಯತೆ ಇತ್ತು. ಅವರು ಸ್ಥಳೀಯ ರಂಗಭೂಮಿ ನಾಟಕಗಳಲ್ಲಿ ನುರಿತ ನಟರಾಗಿದ್ದರು. ಮಂಗಳವಾರ ನಾಟಕ ನಡೆಯುತ್ತಿದ್ದಾಗ, ಅವರು ರಾಮನ ತಂದೆ ದಶರಥನ ಪಾತ್ರದಲ್ಲಿ ತಮ್ಮ ಸಂಭಾಷಣೆಗಳನ್ನು ಹೇಳುತ್ತಿದ್ದಾಗ ಇದ್ದಕ್ಕಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿತು.

ಮಾತನಾಡಲು ತೊದಲಿದ ಅವರು ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನಾಟಕದ ಇತರ ಕಲಾವಿದರು ಮತ್ತು ಪ್ರೇಕ್ಷಕರು ಆತಂಕಗೊಂಡರು. ಆಯೋಜಕರು ತಕ್ಷಣ ನಾಟಕವನ್ನು ನಿಲ್ಲಿಸಿ, ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಹಿಮಾಚಲದಲ್ಲಿ ಅಮ್ರಿಶ್ ಕುಮಾರ್ ಒಬ್ಬ ದೊಡ್ಡ ಸ್ಟಾರ್‌ ಆಗಿದ್ದರು. ಕಳೆದ ಐದು ದಶಕಗಳಿಂದ ರಾಮ್‌ಲೀಲಾ ನಾಟಕದಲ್ಲಿ ನಟಿಸುತ್ತಿದ್ದರು. ಅವರು ತಮ್ಮ ಪ್ರಭಾವಶಾಲಿ ಸಂಭಾಷಣೆಗಳಿಂದ ಜನರನ್ನು ಆಕರ್ಷಿಸುತ್ತಿದ್ದರು. ಅವರು ದಶರಥ ಮತ್ತು ರಾವಣನ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅವರ ಪ್ರದರ್ಶನವನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಅಮ್ರಿಶ್ ಕುಮಾರ್ ಅವರ ನಿಧನದ ಬಗ್ಗೆ ರಾಮ್‌ಲೀಲಾ ಕ್ಲಬ್ ಸದಸ್ಯ ಸುದೇಶ್ ಮಹಾಜನ್ ಸಂತಾಪ ಸೂಚಿಸಿದ್ದಾರೆ. ಇದು ತುಂಬಲಾರದ ನಷ್ಟ ಎಂದು ಅವರು ಹೇಳಿದ್ದಾರೆ. ಅಮ್ರಿಶ್ ಅವರ ಗೌರವಾರ್ಥವಾಗಿ ರಾಮ್‌ಲೀಲಾ ಕ್ಲಬ್ ಕೆಲವು ದಿನಗಳ ಕಾಲ ಪ್ರದರ್ಶನಗಳನ್ನು ರದ್ದುಗೊಳಿಸಿದೆ.
https://x.com/Benarasiyaa/status/1970715918985785458

Related Articles

ಇತ್ತೀಚಿನ ಸುದ್ದಿಗಳು

You cannot copy content of this page