Friday, June 14, 2024

ಸತ್ಯ | ನ್ಯಾಯ |ಧರ್ಮ

ತಿರಂಗಾ ಅಭಿಯಾನದ ಅಡಿಯಲ್ಲಿ ದುರುಪಯೋಗ ಆಗಲಿದೆಯೇ 20 ಕೋಟಿ ಮಂದಿಯ ಡೇಟಾ?

ಸ್ನೇಹಿತರೆ.. ನಿಮಗೆಲ್ಲರಿಗೂ “ಹರ್ ಘರ್ ತಿರಂಗಾ” ಅಭಿಯಾನ ನೆನಪಿರಬೇಕು ಅಲ್ವಾ? ಹೇಗೆ ಮರೆಯೋಕೆ ಸಾಧ್ಯ ಹೇಳಿ. ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ದೇಶದ ಮುಕ್ಕಾಲು ಪಾಲು ಜನತೆ ರಾಷ್ಟ್ರಭಕ್ತಿಯನ್ನು ಪ್ರದರ್ಶನಕ್ಕೆ ಇಟ್ಟ ಆ ಸಂದರ್ಭ ದೇಶದ ಇತಿಹಾಸದಲ್ಲಿ ಮರೆಯಲಾಗದ ಗಳಿಗೆ ಅದು. ಬಿಜೆಪಿಯ ಆಂತರಿಕ ಅಜೆಂಡಾವನ್ನು ಸರ್ಕಾರದ ಒಂದು ಕಾರ್ಯಕ್ರಮವನ್ನಾಗಿಸಿ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಪ್ರತಿ ಮನೆಗೂ ರಾಷ್ಟ್ರಧ್ವಜ ತಲುಪಿಸಿ ಹಾರಿಸುವ ಕಾರ್ಯಕ್ರಮ ಅದಾಗಿತ್ತು.

ಒಂದು ಕಡೆ ಹಾದಿ ಬೀದಿಗಳಲ್ಲಿ ಮಾರಾಟಕ್ಕೆ ಬಂದ ರಾಷ್ಟ್ರಧ್ವಜ, ಇನ್ನೊಂದು ಕಡೆ ಅವ್ಯವಸ್ಥಿತವಾಗಿ ನಿಯೋಜಿಸಿದ ಬಣ್ಣ ಮತ್ತು ಅಶೋಕ ಚಕ್ರ. ಇದರ ನಡುವೆಯೇ ಅದೆಷ್ಟೋ ಕೋಟಿ ಮಂದಿ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಫೋಟೋವನ್ನು ತಮ್ಮ ಜಾಲತಾಣಗಳಲ್ಲಿ ತಮ್ಮ ಲೊಕೇಷನ್ ಸಹಿತ ಅಪ್ಲೋಡ್ ಮಾಡಿದ್ದಾರೆ. ಸರಿ ಈಗ ಆ ತಿರಂಗಾ ಅಭಿಯಾನದ ಇನ್ನೊಂದು ಮಗ್ಗುಲಿನ ಬಗ್ಗೆ ಪರಿಚಯ ಮಾಡಿ ಕೊಡ್ತೀವಿ ಬನ್ನಿ.

ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಮೊಟ್ಟ ಮೊದಲು ಸಾರ್ವಜನಿಕ ಚರ್ಚೆಗೆ ಬಂದದ್ದು ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶವೊಂದರಲ್ಲಿ. ಅದು ಜುಲೈ 2, 2022 ರಂದು ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಈ ಅಭಿಯಾನ ಮಾಡುವುದರಿಂದ 200 ಮಿಲಿಯನ್ ಜನರನ್ನು ಸುಲಭವಾಗಿ ತಲುಪಬಹುದು ಎಂದು ಹೇಳಿದ್ದರು. ಆ ನಂತರ ತಕ್ಷಣವೇ ಜುಲೈ 6 ರಿಂದ ಮುಂದಿನ ಒಂದು ತಿಂಗಳಲ್ಲಿ ಜಾರಿಗೆ ಬರಲಿರುವ ಈ ಅಭಿಯಾನಕ್ಕೆ ಭರದಿಂದ ಸಿದ್ದತೆಗೊಂಡಿತು.

ಆದರೆ ಎಷ್ಟೋ ಜನಕ್ಕೆ ಅರಿವಿಗೆ ಬಾರದ ಒಂದು ಆಘಾತಕಾರಿ ವಿಚಾರ ಏನೆಂದರೆ ಈ ಅಭಿಯಾನ ಒಂದು ಡೇಟಾ ಪ್ರೈವೆಸಿಯ ಲೂಟಿ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮನೆ ಮನೆಗಳಲ್ಲಿ ಧ್ವಜ ಹಾರಿಸಲು ಕರೆ ನೀಡಿದ್ದರು. ಜೊತೆಗೆ ಧ್ವಜದ ಸೆಲ್ಫಿಯೊಂದಿಗೆ harghartiranga.com ಗೆ ನೀವು ಫೋಟೋ ಅಪ್ಲೋಡ್ ಮಾಡಲು ಕರೆ ನೀಡಿದ್ದರು. ಹಾಗೆ ಮಾಡುವಾಗ ಆ ವೆಬ್ಸೈಟ್ ಕೂಡಾ ತಮ್ಮ ಜಿಪಿಎಸ್ ಲೊಕೇಷನ್ ಕಳಿಸಲು ಕೇಳುತ್ತೆ. ಮುಗ್ಧ ಜನ ಹಿಂದೆ ಮುಂದೆ ಯೋಚಿಸದೇ ಜಿಪಿಎಸ್ ಲೊಕೇಷನ್ ಸೇರಿಸಿ ಕಳಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ 200 ಮಿಲಿಯನ್ ಜನರ ವಯಕ್ತಿಕ ಜಿಪಿಎಸ್ ಲೊಕೇಷನ್ ಡೇಟಾ, ಮನೆಯ ಫೋಟೋ ಮೇಲ್ಕಂಡ ವೆಬ್ಸೈಟ್ ಗೆ ಅಪ್ಲೋಡ್ ಆಗಿದೆ‌. ದುರಂತ ಎಂದರೆ ಈ ವೆಬ್ಸೈಟ್ ನೂರಕ್ಕೆ ನೂರರಷ್ಟು ಸರ್ಕಾರದ ಹಿಡಿತದಲ್ಲಿ ಇರುವ ವೆಬ್ಸೈಟ್ ಅಲ್ಲ. ಭಾರತ ಸರ್ಕಾರದ ಎಲ್ಲಾ ವೆಬ್ಸೈಟ್ ಗಳು NIC ಅಥವಾ ERNET ಸರ್ವರ್ ಗಳಲ್ಲಿ ಹೋಸ್ಟ್ ಆಗಬೇಕು. ಅಕಸ್ಮಾತ್ ಮೂರನೇ ವ್ಯಕ್ತಿ ಅಥವಾ ಸಂಸ್ಥೆಯ ಅಡಿಯಲ್ಲಿ ಆದರೂ ಅದು ಭಾರತದ ಒಳಗೇ ಇರಬೇಕು ಮತ್ತು ಅದು ಸರ್ಕಾರದ ಆಡಿಟ್ ಒಳಗೆ ಬರಬೇಕು. ಆದರೆ ಈ ವೆಬ್ಸೈಟ್ ಇರೋದು ಭಾರತದ ಒಳಗಿಲ್ಲ ಎಂಬುದು ಪ್ರಾಥಮಿಕ ಅಂಶಗಳಿಂದ ತಿಳಿದ ವಿಚಾರವಾಗಿದೆ. ಅಂದರೆ ದೇಶದ 200 ಮಿಲಿಯನ್ ಜನರ ವಯಕ್ತಿಕ ಡೇಟಾ ಯಾರೋ ‘ಕಾಣದ ಕೈ’ ಕೆಳಗಿದೆ.

ಇದರಿಂದ ಆಗಬಹುದಾದ ಸಮಸ್ಯೆ ಏನು ಎಂಬುದು ಎಲ್ಲರ ಮೊದಲ ಪ್ರಶ್ನೆ. ಉತ್ತರ ಏನೆಂದರೆ ಇದರಿಂದ ಏನು ಬೇಕಾದರೂ ಆಗಬಹುದು. ಅರ್ಥಾತ್ ಜಿಯೋ ಟ್ಯಾಗಿಂಗ್ ಎಂಬ ಪ್ರಕ್ರಿಯೆಯ ಮೂಲಕ ದೇಶದ ಜನರ ವಯಕ್ತಿಕ ಡೇಟಾಗಳನ್ನ ಪಡೆದುಕೊಂಡು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವ ಹ್ಯಾಕಿಂಗ್ ಗುಂಪುಗಳು ಇದಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತವೆ. ಇಂತಹ ಒಂದೊಂದು ಡೇಟಾಗಳು ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುತ್ತವೆ. ಆನ್ಲೈನ್ ಸರ್ವೆ, ಡಿಜಿಟಲ್ ಕ್ಯಾಂಪೇನ್, ವಯಕ್ತಿಕ ಮಾಹಿತಿಗಳ ಹ್ಯಾಕಿಂಗ್ ಸೇರಿದಂತೆ ಭವಿಷ್ಯದಲ್ಲಿ ಅನಗತ್ಯ ಕಿರಿಕಿರಿಗಳು ಎದುರಾಗಬಹುದು. ತಮಗೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಎದುರಾಗಬಹುದಾದ ಮಾರ್ಕೆಟಿಂಗ್ ಜಾಲಕ್ಕೆ ತಲೆ ಕೊಡುವ ಸಂಭವವೂ ಹೆಚ್ಚಿದೆ.

ಇದಷ್ಟೇ ಅಲ್ಲದೇ ರಾಜಕೀಯವಾಗಿ ಇರುವ ವಿರೋಧಿಗಳನ್ನು ಹುಡುಕಲು, ಮತ್ತು ನೆರೆಹೊರೆಯಲ್ಲೇ ಇರುವ ಸೈದ್ಧಾಂತಿಕ ವಿರೋಧಿಗಳನ್ನು ಗುರುತಿಸಿ ಅವರನ್ನು ಗುರಿಯಾಗಿಸಲು ಬಳಸಬಹುದು. ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, 2015 ರಲ್ಲಿ, ಗಯಾನೀಸ್ ಅಧ್ಯಕ್ಷೀಯ ಅಭ್ಯರ್ಥಿ ಡೇವಿಡ್ ಗ್ರ್ಯಾಂಗರ್, ಚುನಾವಣೆಯಲ್ಲಿ ಗೆದ್ದರು. ಅವರು ತಮ್ಮ ಪ್ರಚಾರದಲ್ಲಿ ಸ್ಥಳ ಆಧಾರಿತ ಕ್ಯಾಂಪೇನ್ ಗೆ ಹೆಚ್ಚು ಒತ್ತು ಕೊಟ್ಟು ಜಾಹೀರಾತುಗಳಿಂದ ಹೆಚ್ಚು ಪ್ರಚಾರಕ್ಕೆ ಬಂದರು.

ಡಿಜಿಟಲ್ ಹಕ್ಕುಗಳ ಸಂಸ್ಥೆ ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಹರ್ ಘರ್ ತಿರಂಗಾ ವೆಬ್‌ಸೈಟ್‌ನ ಗೌಪ್ಯತೆ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಜನರು ಸಲ್ಲಿಸಿದ ಡೇಟಾವನ್ನು ಯಾರು ಹೊಂದಿದ್ದಾರೆ ಮತ್ತು ಅದನ್ನು ಯಾವುದಕ್ಕಾಗಿ ಬಳಸಬಹುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿಯವರೆಗೆ ಸಿಕ್ಕಿಲ್ಲ. ಹರ್ ಘರ್ ತಿರಂಗ ಪೋರ್ಟಲ್ ಅನ್ನು Amazon ವೆಬ್ ಸರ್ವರ್‌ಗಳ ಮೂಲಕ ಹೋಸ್ಟ್ ಮಾಡಲಾಗಿದೆ. ANI ಪ್ರಕಟಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತ, ಸಿಂಗಾಪುರ ಮತ್ತು ದುಬೈ ಮೂಲದ ಖಾಸಗಿ ಕಂಪನಿ ‘ಟ್ಯಾಗ್‌ಬಿನ್’ ವೆಬ್‌ಸೈಟ್ ಹಿಂದೆ ಇದೆ. ವೆಬ್‌ಸೈಟ್ ಸಂಗ್ರಹಿಸಿದ ಡೇಟಾವನ್ನು ಎಲ್ಲಿ ಸಂಗ್ರಹಿಸಲಾಗಿದೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ವೆಬ್‌ಸೈಟ್ ತನ್ನ IP ವಿಳಾಸವನ್ನು 15 ಕ್ಕೂ ಹೆಚ್ಚು ಇತರ ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಳ್ಳುತ್ತಿದೆ.

ಸಧ್ಯ ಇಂತಹದ್ದೊಂದು ಆಘಾತಕಾರಿ ಮಾಹಿತಿ ಡಿಜಿಟಲ್ ತಂತ್ರಜ್ಞರ ನಿದ್ದೆಗೆಡಿಸಿದೆ. ಸ್ವಲ್ಪ ಮಟ್ಟಿಗೆ ಸಾಮಾನ್ಯ ಜ್ಞಾನ ಇರುವ ಜನರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ ಫೋಟೋ ಅಪ್ಲೋಡ್ ಮಾಡಿದ ತಪ್ಪಿಗೆ ಹಣೆ ಚಚ್ಚಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಸಂಗ್ರಹಗೊಂಡ ಡೇಟಾಗಳನ್ನು ಏನು ಮಾಡಲಾಗಿದೆ, ಅದು ಬೇರೆ ಯಾವುದಕ್ಕೆ ಉಪಯೋಗ ಆಗಲಿದೆ ಅಥವಾ ದುರುಪಯೋಗವೇ ಆಗಲಿದೆಯೇ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಇಷ್ಟೆಲ್ಲಾ ಅಭಿಯಾನದ ಜೊತೆಗೆ ಮುಂಚೂಣಿಯಲ್ಲಿ ನಿಂತ ಆಡಳಿತಾರೂಢ ಬಿಜೆಪಿ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

Related Articles

ಇತ್ತೀಚಿನ ಸುದ್ದಿಗಳು