Thursday, December 18, 2025

ಸತ್ಯ | ನ್ಯಾಯ |ಧರ್ಮ

ನೀವು ಪೋರ್ನ್‌ಹಬ್ ಬಳಕೆದಾರರೇ? ಹ್ಯಾಕರ್ಸ್ಇಂದ 200 ಮಿಲಿಯನ್‌ ಪ್ರಿಮಿಯಂ ಬಳಕೆದಾರರ ಡೇಟಾ ಲೀಕ್!

ವಿಶ್ವದ ಅತ್ಯಂತ ಹೆಚ್ಚು ಬಳಸಲಾಗುವ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಒಂದಾದ ಪೋರ್ನ್‌ಹಬ್‌ನ ಪ್ರೀಮಿಯಂ ಬಳಕೆದಾರರ ವೈಯಕ್ತಿಕ ಡೇಟಾಗೆ ಹ್ಯಾಕರ್‌ಗಳು ಅನಧಿಕೃತವಾಗಿ ಪ್ರವೇಶ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಪ್ರೀಮಿಯಂ ಸದಸ್ಯರ ಇಮೇಲ್ ವಿಳಾಸಗಳು, ಅವರು ಹುಡುಕಿದ ವಿಷಯಗಳು, ವೀಕ್ಷಿಸಿದ ವೀಡಿಯೊಗಳ ಮಾಹಿತಿ ಹಾಗೂ ಸ್ಥಳದ ವಿವರಗಳನ್ನು ಒಳಗೊಂಡಂತೆ 200 ಮಿಲಿಯನ್‌ಗಿಂತ ಹೆಚ್ಚು ಡೇಟಾ ದಾಖಲೆಗಳು ಲೀಕ್ ಆಗಿವೆ. ಪೋರ್ನ್‌ಹಬ್ ಜಾಗತಿಕವಾಗಿ ಪ್ರತಿದಿನ 100 ಮಿಲಿಯನ್‌ಗಿಂತ ಹೆಚ್ಚು ಭೇಟಿ ಪಡೆಯುವ ವೆಬ್‌ಸೈಟ್ ಆಗಿದೆ.

ಈ ಸೈಬರ್ ದಾಳಿಯನ್ನು ಪಾಶ್ಚಿಮಾತ್ಯ ಮೂಲದ “ಶೈನಿಹಂಟರ್ಸ್” ಎಂಬ ಹ್ಯಾಕರ್ ಗುಂಪು ನಡೆಸಿದೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಮೊದಲು ಬ್ಲೀಪಿಂಗ್ ಕಂಪ್ಯೂಟರ್ ಎಂಬ ತಂತ್ರಜ್ಞಾನ ವೆಬ್‌ಸೈಟ್ ವರದಿ ಮಾಡಿದೆ. ಒಟ್ಟು 201 ಮಿಲಿಯನ್ ಪ್ರೀಮಿಯಂ ಬಳಕೆದಾರರ ದಾಖಲೆಗಳು ಹ್ಯಾಕರ್‌ಗಳ ಕೈಗೆ ಸಿಕ್ಕಿವೆ ಎನ್ನಲಾಗಿದೆ.

ಕೆನಡಾದ ಒಡೆತನದಲ್ಲಿರುವ ಪೋರ್ನ್‌ಹಬ್ ಕಂಪನಿಗೆ ಹ್ಯಾಕರ್ ಗುಂಪಿನಿಂದ ಸುಲಿಗೆ ಬೇಡಿಕೆ ಕೂಡ ಬಂದಿದ್ದು, ಡೇಟಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದೇ ಅಳಿಸುವುದಕ್ಕಾಗಿ ಬಿಟ್‌ಕಾಯಿನ್‌ನಲ್ಲಿ ಹಣ ಪಾವತಿಸುವಂತೆ ಒತ್ತಾಯಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಪೋರ್ನ್‌ಹಬ್ ಸ್ಪಷ್ಟನೆ ನೀಡಿದ್ದು, ಇದು ಪೋರ್ನ್‌ಹಬ್‌ನ ಮುಖ್ಯ ವ್ಯವಸ್ಥೆಗಳ ಮೇಲೆ ನಡೆದ ದಾಳಿ ಅಲ್ಲ ಎಂದು ಹೇಳಿದೆ. ಡೇಟಾ ವಿಶ್ಲೇಷಣಾ ಸೇವೆ ನೀಡುತ್ತಿದ್ದ ಮಿಕ್ಸ್‌ಪ್ಯಾನೆಲ್ ಕಂಪನಿಯ ಮೇಲಿನ ಸೈಬರ್ ದಾಳಿಯಿಂದಾಗಿ ಕೆಲ ಪ್ರೀಮಿಯಂ ಬಳಕೆದಾರರ ಮಾಹಿತಿ ಲೀಕ್ ಆಗಿದೆ ಎಂದು ತಿಳಿಸಿದೆ. ಈ ಡೇಟಾ ಇತ್ತೀಚಿನದಲ್ಲ ಹಾಗೂ 2021ರಲ್ಲೇ ಮಿಕ್ಸ್‌ಪ್ಯಾನೆಲ್ ಜೊತೆಗಿನ ಸಹಕಾರವನ್ನು ಪೋರ್ನ್‌ಹಬ್ ಸ್ಥಗಿತಗೊಳಿಸಿತ್ತು ಎಂದು ಹೇಳಿದೆ.

“ಪೋರ್ನ್‌ಹಬ್ ಪ್ರೀಮಿಯಂ ಬಳಕೆದಾರರ ಪಾಸ್‌ವರ್ಡ್‌ಗಳು, ಪಾವತಿ ವಿವರಗಳು ಮತ್ತು ಹಣಕಾಸು ಮಾಹಿತಿ ಸಂಪೂರ್ಣ ಸುರಕ್ಷಿತವಾಗಿವೆ. ಅವು ಯಾವುದೇ ರೀತಿಯಲ್ಲಿ ಲೀಕ್ ಆಗಿಲ್ಲ” ಎಂದು ಕಂಪನಿ ಸ್ಪಷ್ಟಪಡಿಸಿದೆ.

ಲೀಕ್ ಆದ ಮಾಹಿತಿಯಲ್ಲಿ ವೀಡಿಯೊಗಳ ಹೆಸರು, ವೀಡಿಯೊ ಲಿಂಕ್‌ಗಳು, ಸಂಬಂಧಿತ ಕೀವರ್ಡ್‌ಗಳು ಹಾಗೂ ವೀಕ್ಷಣೆ ನಡೆದ ಸಮಯದ ವಿವರಗಳು ಸೇರಿವೆ ಎಂದು ವರದಿ ತಿಳಿಸಿದೆ.

ಸೈಬರ್ ಭದ್ರತಾ ಸಂಸ್ಥೆ ಸೋಫೋಸ್, ಈ ಡೇಟಾವನ್ನು ಸಾರ್ವಜನಿಕ ಲೀಕ್ ವೆಬ್‌ಸೈಟ್‌ಗಳಲ್ಲಿ ಅಥವಾ ಹ್ಯಾಕರ್‌ಗಳಿಗೆ ಸಂಬಂಧಿಸಿದ ಆನ್‌ಲೈನ್ ಚಾಟ್‌ಗಳಲ್ಲಿ ಪ್ರಕಟಿಸಿರುವ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ತಿಳಿಸಿದೆ. ಶೈನಿಹಂಟರ್ಸ್ ಗುಂಪು ‘ದಿ ಕಾಮ್’ ಎಂಬ ಅಂತಾರಾಷ್ಟ್ರೀಯ ಸೈಬರ್ ಅಪರಾಧಿಗಳ ಜಾಲದ ಭಾಗವಾಗಿದ್ದು, ಇತ್ತೀಚಿನ ಹಲವು ದೊಡ್ಡ ಹ್ಯಾಕಿಂಗ್ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಕೂಡ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page