Thursday, June 13, 2024

ಸತ್ಯ | ನ್ಯಾಯ |ಧರ್ಮ

‘ಗೃಹಲಕ್ಷ್ಮಿ’ಗೆ ಡೇಟ್ ಫಿಕ್ಸ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಂದ ಚಾಲನೆ ಸಾಧ್ಯತೆ

ಕರ್ನಾಟಕದ ಮಹಿಳೆಯರ ಭಾರೀ ನಿರೀಕ್ಷೆಯ ‘ಗೃಹ ಲಕ್ಷ್ಮಿ’ ಯೋಜನೆಗೆ ಜುಲೈ 16 ರಿಂದ ಚಾಲನೆ ಸಿಗಲಿದೆ. ಈ ಹಿಂದೆ ಜುಲೈ 14 ಕ್ಕೆ ಗೃಹಲಕ್ಷ್ಮಿ ಚಾಲನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು. ಆದರೆ ಜುಲೈ 16 ರಿಂದ 18 ರ ವರೆಗೆ ದೇಶದ ಎಲ್ಲಾ ಪ್ರತಿಪಕ್ಷಗಳ ಸಭೆಯ ಹಿನ್ನೆಲೆಯಲ್ಲಿ ಅಂದೇ ಚಾಲನೆ ಸಿಗುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

‘ಗೃಹಲಕ್ಷ್ಮಿ’ ಯೋಜನೆಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯವರಿಂದ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಜುಲೈ 16 ರಿಂದ 18ರವರೆಗೆ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕರ ಸಭೆಯ ಹಿನ್ನೆಲೆಯಲ್ಲಿ, ಇದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಒಂದು ಕಡೆ ‘ಶಕ್ತಿ’ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರು ಉಚಿತ ಬಸ್‌ ಪ್ರಯಾಣದ ಖುಷಿಯಲ್ಲಿದ್ದಾಗಲೇ, ‘ಗೃಹಜ್ಯೋತಿ’ಯ ಅರ್ಜಿ ಸ್ವೀಕಾರ ಮಹಿಳೆಯರಿಗೆ ಮತ್ತೊಂದು ಕೊಡುಗೆ ಕೊಟ್ಟಂತಾಗಿದೆ‌. ಕಾಂಗ್ರೆಸ್ ಸರ್ಕಾರ ‘ಗೃಹಲಕ್ಷ್ಮಿ’ ಮೂಲಕ ಬ್ಯಾಕ್ ಟು ಬ್ಯಾಕ್ ಮತ್ತೊಂದು ಸಿಹಿ ಸುದ್ದಿ ಕೊಡಲು ಹೊರಟಿದೆ. ಅಂದುಕೊಂಡಂತೆ ಆದರೆ ಆಗಸ್ಟ್ 15 ರ ಆಸುಪಾಸಿನಲ್ಲಿ ರಾಜ್ಯದ ಪ್ರತಿ ಮನೆಯ ಒಡತಿಯ ಬ್ಯಾಂಕ್ ಖಾತೆಗೆ 2,000 ರೂ ಬರಲಿದೆ.

ಅಂದುಕೊಂಡಂತೆ ಆದರೆ ಜುಲೈ 18ರಂದು ಅರ್ಜಿ ಸ್ವೀಕರಿಸಲು ಪ್ರಕ್ರಿಯೆ ಆರಂಭವಾಗಬಹುದು. ರಾಜ್ಯಾದ್ಯಂತ ಇರುವ ಮನೆಯ ಒಡತಿಯರು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯ ಸರ್ಕಾರದ ವೆಬ್ ಪೋರ್ಟಲ್ ಸೇವಾಸಿಂಧು ಮೂಲಕ ಅಥವಾ ಸಮೀಪದ ನಾಡ ಕಚೇರಿ, ತಾಲ್ಲೂಕು ಕಚೇರಿಗಳಲ್ಲಿ ಗೃಹಲಕ್ಷ್ಮಿ ಅರ್ಜಿ ಸ್ವೀಕಾರ ಆಗುವ ಸಾಧ್ಯತೆ ಇದೆ. ಆ ನಂತರ ಅವುಗಳ ಪರಿಶೀಲನೆ ಮಾಡಿ ಒಂದು ತಿಂಗಳ ಒಳಗೆ ಎಲ್ಲರ ಖಾತೆಗೆ ಹಣ ಹಾಕಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಸಧ್ಯ ಜುಲೈ 16 ಕ್ಕೆ ಚಾಲನೆ ಸಿಕ್ಕರೆ ಜುಲೈ 18ರ ನಂತರ ಅರ್ಜಿ ಸ್ವೀಕಾರವಾಗಲಿದೆ.

ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯು ಈ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮನೆಯ ಯಜಮಾನಿ ಯಾರೆಂದು ಘೋಷಿಸುವ, ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಇರುವ ಫೋನ್ ನಂಬರ್, ರೇಷನ್ ಕಾರ್ಡ್, ವೋಟರ್ ಐಡಿ ಕಾರ್ಡ್ ನಂಬರ್ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

Related Articles

ಇತ್ತೀಚಿನ ಸುದ್ದಿಗಳು