ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ಮುಂಜಾನೆ ಹರಿದ್ವಾರದಿಂದ ಇಂದೋರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸೊಂದು ಟ್ರೈಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಡಿಕ್ಕಿಯ ತೀವ್ರತೆಗೆ ಬಸ್ಸು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ತಕ್ಷಣವೇ ಅದರ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಭೀಕರ ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು, ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣವೇ ಧಾವಿಸಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಪ್ರಯಾಣಿಕರನ್ನು ಹೊರಕ್ಕೆ ಎಳೆದಿದ್ದಾರೆ ಹಾಗೂ ಗಾಯಾಳುಗಳನ್ನು ದೌಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರನ್ನು ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸುವ ಮುನ್ನವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಬಸ್ಸಿನ ಮೇಲಿನ ಬರ್ತ್‌ಗಳಲ್ಲಿದ್ದ ಕೆಲವು ಪ್ರಯಾಣಿಕರು ಕೆಳಕ್ಕೆ ಬಿದ್ದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಪೊಲೀಸರು ಬಸ್ ಮತ್ತು ಟ್ರೈಲರ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
ಹಿರಿಯ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಈ ಅಪಘಾತದಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
