ಸೈಬರ್ ಕ್ರಿಮಿನಲ್ ಸಂಸದರನ್ನೂ ಬಿಡುತ್ತಿಲ್ಲ. ಒಂದು ಕರೆಯೊಂದಿಗೆ ಸಂಸದರ ಖಾತೆಯಿಂದ ಸುಮಾರು 1 ಲಕ್ಷ ರೂ. ಎಗರಿಸಲಾಗಿದೆ. ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಸಂಸದ ದಯಾನಿಧಿ ಮಾರನ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿದ್ದು, ನಂತರ ಅವರ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ಕಾಣೆಯಾಗಿದೆ
ದಯಾನಿಧಿ ಮಾರನ್ ಅವರು ಕರೆ ಮಾಡಿದ ವ್ಯಕ್ತಿಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ಆದರೂ ಅವರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 8ರಂದು ತಮಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಎಂದು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕರೆ ಡಿಸ್ಕನೆಕ್ಟ್ ಮಾಡಿದ ತಕ್ಷಣ ಅವರ ಬ್ಯಾಂಕ್ ಖಾತೆಯಿಂದ 99,999 ರೂಪಾಯಿ ಕಡಿತಗೊಂಡಿರುವ ಕುರಿತು ಸಂದೇಶ ಬಂದಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ಆ ವ್ಯಕ್ತಿ ತಾನು ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದ ಮತ್ತು ಮಾರನ್ ಅವರ ಬಳಿ ಬ್ಯಾಂಕ್ ವಿವರಗಳನ್ನು ಕೇಳಿದ್ದ. ಆದರೆ ಅವರು ಯಾವುದೇ ವಿವರಗಳನ್ನು ನೀಡಿರಲಿಲ್ಲ. ಪೊಲೀಸರ ಪ್ರಕಾರ, ಸಂಸದರು ಕರೆ ಮಾಡಿದವರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಅವರ ಖಾತೆಯಿಂದ ಹಣ ಕಡಿತಗೊಂಡಿದೆ.
ದಯಾನಿಧಿ ಮಾರನ್ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವ ಸಂಖ್ಯೆಯಿಂದ ಕರೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ, ಈ ವಿಷಯದಲ್ಲಿ ಬ್ಯಾಂಕ್‌ನಿಂದಲೂ ಸಹಾಯ ಕೇಳಲಾಗಿದೆ.