Monday, December 9, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಡಿಸಿ ಚಾಲನೆ; ಮಕ್ಕಳ ಆರೋಗ್ಯ, ಪೌಷ್ಠಿಕತೆ ಸುಧಾರಣೆಗೆ ವಿವಿಧ ಯೋಜನೆಗಳ ಅನುಷ್ಠಾನ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ (ಕರ್ನಾಟಕ ವಾರ್ತೆ) ಡಿಸೆಂಬರ 09: ಆರೋಗ್ಯವಂತ ಮಕ್ಕಳು ರಾಷ್ಟ್ರದ ಬಹುದೊಡ್ಡ ಆಸ್ತಿ, ಮಕ್ಕಳ ಆರೋಗ್ಯಯುತ ಬೆಳವಣಿಗೆ ಮತ್ತು ಅವರಿಗೆ ಸಮಗ್ರ ಪೌಷ್ಠಕಾಂಶಗಳು ದೊರಕುವಂತೆ ಮಾಡಲು ಸರಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅವುಗಳ ಪರಿಣಾಮಕಾರಿ ಜಾರಿ ನಮ್ಮ ಜವಾಬ್ದಾರಿ ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಕೆ.ಇ.ಬೋರ್ಡ ಸಂಸ್ಥೆಯ ಕರ್ನಾಟಕ ಹೈಸ್ಕೂಲ್‍ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಿಸುವ ಮೂಲಕ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ 2024ನೇ ಸಾಲಿಗೆ ಇಂದಿನಿಂದ ಜಿಲ್ಲೆಯ 1 ರಿಂದ 19 ವರ್ಷದೊಳಗಿನ ಸುಮಾರು 5,80,127 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಅಲ್ಬೆಂಡಜೋಲ್ ಮಾತ್ರೆಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಶಾಲಾ ಕಾಲೇಜುಗಳಿಂದ ಹೊರಗುಳಿದ ಮಕ್ಕಳಿಗೆ ಮಾಪ್ ಆಪ್ ಸುತ್ತಿನಲ್ಲಿ ಡಿಸೆಂಬರ 16 ರಂದು ಅಲ್ಬೆಂಡಜೋಲ್ ಮಾತ್ರೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸರಕಾರದಿಂದ ಮಕ್ಕಳ ವಿದ್ಯಾಭ್ಯಾಸ ಸುಧಾರಣೆಗೆ ಆರೋಗ್ಯ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಬಾಲ್ಯ ಸ್ವಾಥ್ಯ ಯೋಜನೆ, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿ ಊಟ, ಪೂರಕ ಪೌಷ್ಠಿಕ ಆಹಾರಗಳಾದ ಮೊಟ್ಟೆ, ಚಿಕ್ಕೆ, ಬಾಳೆಹಣ್ಣು ಮುಂತಾದವುಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇಂದು ದೇಶದಾದ್ಯಂತ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲೆಯಲ್ಲಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ವರ್ಷದ ಪದವಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ, 1 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಜಂತುಹುಳುವಿನ ಮಾತ್ರೆ ಹಾಗೂ ಅದರಿಂದಾಗುವ ಉಪಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ಆರೋಗ್ಯದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರದ ರೀತಿಯಲ್ಲಿ ಮಾತ್ರೆಯನ್ನು ತಯಾರಿಸಲಾಗಿದ್ದು, ಮಕ್ಕಳು ನಿಶ್ಚಿಂತೆಯಿಂದ ಯಾವುದೇ ಭಯ ಅಥವಾ ಹಿಂಜರಿಕೆ ಪಡದೆ 6 ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಕಂಡುಬರುವ ಹೊಟ್ಟೆನೋವು, ಆಯಾಸ ಹಾಗೂ ಇನ್ನಿತರ ಸಮಸ್ಯೆಗಳು ಕಡಿಮೆಯಾಗಿ ಅನಿಮಿಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಹಾಗಾಗಿ ಸದೃಢ ಅರೋಗ್ಯವಂತ ಭಾರತವನ್ನು ನಿರ್ಮಿಸಲು ಇಂದಿನಿಂದಲೇ ಮಕ್ಕಳು ಹೆಚ್ಚೆಚ್ಚು ಅರೋಗ್ಯ ಅಧಿಕಾರಿಗಳು ಶಿಕ್ಷಕರು ನೀಡುವ ಸಲಹೆಯನ್ನು ಪಾಲಿಸಬೇಕು ಎಂದು ಅವರು ಹೇಳಿದರು.

ರಕ್ತ ಹೀನತೆ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದ್ದು, ಅದನ್ನು ನಿಯಂತ್ರಿಸಿ ರಕ್ತ ಹೀನತೆ ಮುಕ್ತ ಭಾರತನ್ನಾಗಿ ಮಾಡಲು ಕ್ರಮವಹಿಸಲಾಗಿದೆ. ಈ ನಿಟ್ಟಿನಲ್ಲಿ ಜಂತುಹುಳುವನ್ನು ನಿಯಂತ್ರಿಸಿದರೆ ಶೇ. 70 ರಷ್ಟು ರಕ್ತ ಹೀನತೆಯನ್ನು ನಿಯಂತ್ರಿಸಬಹುದು ಎಂದರು.

ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೇವಿಸುವ ಆಹಾರ, ಹಣ್ಣು ಹಾಗೂ ಕುಡಿಯುವ ನೀರು ಶುದ್ಧವಾಗಿದೆಯೇ ಎಂದು ಪರೀಕ್ಷಿಸಿ ನಂತರ ಸೇವಿಸಬೇಕು. ಶೌಚದ ನಂತರ ಕೈಗಳನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೋಳಿಸಿಕೊಳ್ಳಬೇಕು. ಊಟಕ್ಕೆ ಮೊದಲು ಹಾಗೂ ಊಟದ ನಂತರ ಕೈ ಸ್ವಚ್ಛಗೋಳಿಸಿಕೊಳ್ಳಬೇಕು ಅಲ್ಲದೆ ನಮ್ಮ ಸುತ್ತ-ಮುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಗಿದ್ದಾಗ ಮಾತ್ರವೇ ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 01 ವರ್ಷದಿಂದ 19 ವರ್ಷದವರೆಗಿನ ಮಕ್ಕಳಿಗೆ ಇಂದು ಜಂತು ಹುಳುವಿನ ಮಾತ್ರೆಯನ್ನು ವಿತರಿಸಲಾಗುತ್ತಿದ್ದು, ಇದರ ಉದ್ದೇಶ ರೋಗ ಮುಕ್ತ ಉತ್ತಮ ಸಮಾಜದ ಸ್ಥಾಪನೆಯಾಗಿದೆ. ಜಂತು ಹುಳುವನ್ನು ತಡೆಗಟ್ಟಿದರೆ, ಅನಿಮಿಯವನ್ನು ತಡೆಗಟ್ಟಲು ಸಾಧ್ಯ ಹಾಗಾಗಿ ವಿದ್ಯಾರ್ಥಿಗಳು ನಿರ್ಲಕ್ಷಿಸದೆ ಆರು ತಿಂಗಳಿಗೆ ಒಮ್ಮೆ ಮಾತ್ರೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕೆ.ಇ.ಬೋರ್ಡ್ ಸಂಸ್ಥೆಯ ಆಡಳಿತಾಧಿಕಾರಿ ಜಿ.ಆರ್.ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಂತು ಹುಳುವಿನ ಮಾತ್ರೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸುಜಾತಾ ಹಸವೀಮಠ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಆರೋಗ್ಯ ಇಲಾಖೆ ಅಧಿಕಾರಿ ಬಿ.ಆರ್.ಪಾತ್ರೋಟ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು.

ಕರ್ನಾಟಕ ಹೈಸ್ಕೂಲ ಪ್ರಾಚಾರ್ಯ ಎನ್.ಎಸ್.ಸವಣೂರ ಸ್ವಾಗತಿಸಿದರು. ರೇಖಾ ಬಾಡಗಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಎನ್.ಅಗಡಿ ವಂದಿಸಿದರು.

ಶಾಲಾ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ 3000 ಕ್ಕೂ ಹೆಚ್ಚು ಭಾಗವಹಿಸಿ ಪ್ರತಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿತರಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page