Tuesday, June 18, 2024

ಸತ್ಯ | ನ್ಯಾಯ |ಧರ್ಮ

ಸನ್ಯಾಸಿಗಳ ಸಾವು ಮತ್ತು ಸರೋವರ ಸ್ಫೋಟ

ಜೋಶಿಮಠ ಕುಸಿತದ ದುರಂತ ತಂದ ಆತಂಕ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಹೊತ್ತು  ಹದತಪ್ಪಿದ ಅಭಿವೃದ್ಧಿ ಯೋಜನೆಗಳು ಹಿಮಾಲಯದ ನವಿರು ಪರಿಸರಕ್ಕೆ ತಂದಿಟ್ಟ ಬಿಕ್ಕಟ್ಟನ್ನು ತಮ್ಮದೇ ಅನುಭವಗಳ ಮೂಲಕ ಲೇಖನವಾಗಿಸಿದ್ದಾರೆ ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್. ಸರಣಿ ಲೇಖನದ ಮೂರನೆಯ ಭಾಗದಲ್ಲಿ ಪರಿಸರ ಕಾಪಾಡುವ ಮಹತ್ತರ ಹೋರಾಟವೊಂದಕ್ಕೆ ಜೀವ ತ್ಯಾಗ ಮಾಡಿದ ಇಬ್ಬರು ಸನ್ಯಾಸಿಗಳು ಮತ್ತು ಹೆಮ್ಮಳೆ ಮತ್ತು ಹೆನ್ನೆರೆಗಳು ತಂದೊಡ್ಡಿದ ವಿಪತ್ತುಗಳ ಮಾಹಿತಿಗಳಿವೆ.  ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಸನ್ಯಾಸಿಗಳ ಸಾವು

ಹೊಸ ರಾಜ್ಯ ಹುಟ್ಟಿದ ಬೆನ್ನಲ್ಲೆ ವ್ಯವಸ್ಥಿತ ಮರಳು ದಂಧೆಯಿಂದ ಕಂಗಾಲಾದ ಉತ್ತರಾಖಂಡದ ನಿಸರ್ಗಪ್ರಿಯರು ದನಿ ಎತ್ತಿದರು. ನೈನಿತಾಲ್ ಹೈಕೋರ್ಟ್ ಒಂದರಲ್ಲೆ ಮರಳು ದಂಧೆಯ ವಿರುದ್ಧ 34 ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸಲ್ಲಿಸಲ್ಪಟ್ಟವು ಎಂದರೆ ಮರಳು ಮಾಫಿಯಾದ depth and dimension  (ಆಳ ಮತ್ತು ಆಯಾಮ)ನ್ನು ಊಹಿಸಿಕೊಳ್ಳಿ. ಹಲವು ಹೋರಾಟಗಾರರ ಮೇಲೆ ದೈಹಿಕ ದಾಳಿಗಳಾದವು. ಡಾ.ಭರತ್ ಜುಂಜುನುವಾಲ, ಅಜಯ್ ಕುಮಾರ್ ಶರ್ಮ ಮುಂತಾದವರು ಪೊಲೀಸ್ ರಕ್ಷಣೆ ಪಡೆಯಬೇಕಾಯಿತು.

ನಿಗಮಾನಂದ ಸರಸ್ವತಿ ಎಂಬ ಸನ್ಯಾಸಿಯೊಬ್ಬರು ಗಂಗಾನದಿಯ ಮಾಲಿನ್ಯ, ಮರಳು ಮಾಫಿಯ  ಮತ್ತು ಹರಿದ್ವಾರದ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗಳ ಪ್ರತಿಭಟಿಸಿ ಉತ್ತರಾಖಂಡ್ ಸರ್ಕಾರದ ವಿರುದ್ಧ ತಮ್ಮ ಸಮಾನ ಮನಸ್ಕ ಸನ್ಯಾಸಿ ಗೆಳೆಯರ ಬೆಂಬಲದೊಂದಿಗೆ ಎರಡು ಮೂರು ಹಂತಗಳಲ್ಲಿ ಒಟ್ಟು 70 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಬಳಲಿದ ಅವರನ್ನು ಬಲವಂತವಾಗಿ ಜಾಲಿಗ್ರಾಂಟ್ ದವಾಖಾನೆಗೆ ದಾಖಲಿಸಲಾಯಿತು. ಅಲ್ಲಿ ಅವರ ಅನುಮಾನಾಸ್ಪದ ಸಾವು ದೇಶದ ಗಮನ ಸೆಳೆಯಿತು. ಅವರ ರಕ್ತದಲ್ಲಿ ವಿಷಕಾರಿ ಆಗ್ರ್ಯಾನೊಫಾಸ್ಫೇಟ್ ಕೀಟನಾಶಕ ಇದ್ದದ್ದು ಸಿರಮ್ ಪರೀಕ್ಷೆಯ ವರದಿಯಿಂದ ತಿಳಿದುಬಂತು. ನಿಜ, ನಿಗಮಾನಂದ ಅವರನ್ನು ಕೊಲ್ಲಲಾಗಿತ್ತು. 2011ರ ಜೂನ್ 13ರಂದು 34ರ ಹರೆಯದ ನಿಗಮಾನಂದ ಪರಿಸರ ಕಾಪಾಡುವ ಮಹತ್ತರ ಹೋರಾಟವೊಂದಕ್ಕೆ ತಮ್ಮ ಜೀವ ತ್ಯಾಗ ಮಾಡಿದ್ದರು. ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪರೀಕ್ಷೆ ಬರೆಯಲು ಹೊರಟಿದ್ದ ನಿಗಮಾನಂದ ಮನಸ್ಸು ಬದಲಾಯಿಸಿ ಸನ್ಯಾಸಿಯಾಗಿದ್ದವರು. ಎಲ್ಲೋ ಒಂದು ಕಡೆ ಅನಾಮಧೇಯನಂತೆ ವೇದಾಧ್ಯಯನ ನಡೆಸಿಕೊಂಡು ಮತ್ತು ಜಪತಪ ಮಾಡಿಕೊಂಡು ಇದ್ದುಬಿಡಬಹುದಾಗಿದ್ದ ಈ ಸನ್ಯಾಸಿಯ ಜೀವತ್ಯಾಗ ಮುಖ್ಯವಾಹಿನಿಯ ಮಾಧ್ಯಮಗಳನ್ನು ಕಲಕಲಿಲ್ಲ.

ಬರ್ಕ್‍ಲಿ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ಪಡೆದು IIT ಕಾನ್ಪುರದಲ್ಲಿ ಸಿವಿಲ್ ಮತ್ತು ಪರಿಸರ ವಿಷಯದ ಇಂಜಿನಿಯರಿಂಗ್ ವಿಭಾಗದಲ್ಲಿ 20 ವರುಷ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಪ್ರೊಫೆಸರ್ ಜಿ.ಡಿ. ಅಗರವಾಲ್ ನಂತರ ಸನ್ಯಾಸಿಯಾಗಿ ಸ್ವಾಮಿ ಗ್ಯಾನ್‍ಸ್ವರೂಪ್ ಸಾನಂದರಾದರು. ಇವರು ರಾಜಸ್ತಾನದಲ್ಲಿ ನದಿಗಳಿಗೆ ಮರುಹುಟ್ಟು ಕೊಟ್ಟ ಡಾ. ರಾಜೇಂದ್ರ ಸಿಂಗ್ ಅವರಿಗೆ ಮಾರ್ಗದರ್ಶಕರಾಗಿದ್ದರೆ, ದೆಹಲಿಯಲ್ಲಿ Center for Science and Environment ನ್ನು ಹುಟ್ಟುಹಾಕಿದ ಅನಿಲ್ ಅಗರವಾಲ್ ಅವರಿಗೆ ಅಕಾಡೆಮಿಕ್ ಗುರು ಆಗಿದ್ದರು. ಈ ಎರಡು ಅದ್ಭುತ ಪರಿಸರ ಪ್ರತಿಭೆಗಳನ್ನು ಕಡೆಯುವಲ್ಲಿ ಸ್ವಾಮಿ ಸಾನಂದ ಅವರ ಕೊಡುಗೆ ದೊಡ್ಡದು. ಇವರು ಸನ್ಯಾಸಿಯಾದ ಮೇಲೆ ಗಂಗಾನದಿಯ ಉಳಿವಿಗೆ ಉಪವಾಸ ಸತ್ಯಾಗ್ರಹಗಳ ಮೂಲಕ ಹೋರಾಟ ಶುರುಮಾಡಿದರು. 2009 ಮತ್ತು 2010ರಲ್ಲಿ ಸ್ವಾಮಿ ಸಾನಂದ ಕೈಗೊಂಡ ಉಪವಾಸ ಸತ್ಯಾಗ್ರಹಗಳು ಬೈರೋನ್ ಘಾಟಿ, ಲೊಹಾರಿ ನಾಗಪಾಲ, ಪಾಲಾ ಮನೇರಿ ಮುಂತಾದೆಡೆ ಶುರುವಾಗಿದ್ದ ಅವೈಜ್ಞಾನಿಕ ಹೈಡೆಲ್ ಪ್ರೋಜೆಕ್ಟ್‌ಗಳು ಜಾರಿಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದವು. ಭಾಗೀರಥಿ ನದಿ ಹರಿಯುವ 125 ಕಿ.ಮೀ. ಉದ್ದಕ್ಕೂ ಇರುವ ಪರಿಸರವನ್ನು ಅತಿನವಿರಾದ ಪರಿಸರ ವಲಯ (eco-sensitive zone) ಎಂದು ಅಂದಿನ ಒಕ್ಕೂಟ ಸರ್ಕಾರ ಘೋಷಿಸಬೇಕಾದ ಒತ್ತಡವನ್ನು ಸ್ವಾಮಿ ಸಾನಂದ ಸೃಷ್ಟಿಸಿದ್ದರು. ಒಮ್ಮೆ ಜೈಲಿಗೂ ಹೋಗಿಬಂದಿದ್ದರು. ಈಗಿರುವ ಒಕ್ಕೂಟ ಸರ್ಕಾರದ ‘ನಮಾಮಿ ಗಂಗೆ’ ಯೋಜನೆ ಓಟು ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮತ್ತು ಕಾರ್ಪೋರೇಟ್‍ಗಳಿಗೆ ದುಡ್ಡು ಮಾಡಲಿಕ್ಕಿರುವ ಒಂದು ಗಿಮಿಕ್ ಎಂದು ಟೀಕಿಸುವ ದಿಟ್ಟತನವನ್ನು ಸ್ವಾಮಿ ಸಾನಂದ ತೋರಿದ್ದರು. ಅವರ ಕಡೆಯ ಉಪವಾಸ ತಮ್ಮ ಸಲಹೆಯನ್ನು ಕಡೆಗಣಿಸಿದ ಒಕ್ಕೂಟ ಸರ್ಕಾರದ ನಿಲುವಿನ ವಿರುದ್ಧವಿತ್ತು. ಆ ಉಪವಾಸ 111 ದಿನಗಳ ಕಾಲ ಜರುಗಿ ಅವರು 2018ರ ಅಕ್ಟೋಬರ್ 11ರಂದು ಜಗತ್ತಿಗೆ ವಿದಾಯ ಹೇಳಿದರು. ಈ ಇಬ್ಬರು ಗಾಂಧೀಮಾದರಿ ಹೋರಾಟದ ಹಿಂದೂ ಸನ್ಯಾಸಿಗಳ ಸಾವು ಹಿಂದೂತ್ವದ ರಾಜಕಾರಣ ಮಾಡುವವರು ಅಧಿಕಾರದಲ್ಲಿದ್ದಾಗಲೆ ಸಂಭವಿಸಿದ್ದನ್ನು ಹೇಗೆ ವ್ಯಾಖ್ಯಾನಿಸುವುದು?

2013ರ ಉತ್ತರಾಖಂಡ್ ಮೋಡಸಿಡಿತ

ಉತ್ತರಾಖಂಡ್ ರಾಜ್ಯವು 2013ರ ಜೂನ್ 13ರಿಂದ 17ರ ತನಕ ಹಿಂದೆಂದೂ ಕಾಣದಂತಹ ಮಳೆಯನ್ನು ಕಂಡಿತು. ಇಡೀ ಜೂನ್ ತಿಂಗಳಲ್ಲಿ ಪಡೆಯುವ ವಾಡಿಕೆಯ ಮಳೆಗಿಂತ ಮೂರು ಪಟ್ಟು ಹೆಚ್ಚು ಮಳೆಯನ್ನು ಈ ದಿನಗಳಲ್ಲಿ ಕಂಡಿತು. ಜೂನ್ 16ರಂದು ಕೇದಾರನಾಥ ಕಣಿವೆ ಭಾಗದಲ್ಲಿ ಜರುಗಿದ ಮೋಡಸಿಡಿತ (ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸನ್ನಿವೇಶವನ್ನು ಮೋಡಸಿಡಿತ ಎನ್ನುತ್ತಾರೆ. ವೈಜ್ಞಾನಿಕವಾಗಿ 1 ತಾಸಿನ ಗಡುವಿನಲ್ಲಿ 100 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆ ಬೀಳುವುದನ್ನು ಮೋಡಸಿಡಿತ ಎಂದು ಕರೆಯಲಾಗುತ್ತದೆ) ಭಾರೀ ಹಾನಿ ಅನಾಹುತಗಳನ್ನು ತಂದಿತು. ಕೇದಾರನಾಥ ಕಣಿವೆಯಲ್ಲಿ ಕೇದಾರನಾಥ ಪಟ್ಟಣಕ್ಕೆ 6 ಕಿ.ಮೀ. ಸಮೀಪವಿದ್ದ ಚೊರಾಬಾರಿ ಸರೋವರದ ಮೇಲಿನ ಆಗಸದಲ್ಲಿ ಮೋಡಸಿಡಿತವಾಯಿತು. ಅದು ತಂದ ಮಳೆಗೆ ಸರೋವರ ಉಕ್ಕಿತು. ಉಕ್ಕಿತು ಎನ್ನುವುದಕ್ಕಿಂತ ಸ್ಫೋಟಿಸಿತು ಎನ್ನುವುದೇ ಸರಿ. ಸರೋವರದ ನೀರು ಹೆನ್ನೆರೆಯಾಗಿ ಕೇದಾರನಾಥ ಪಟ್ಟಣವನ್ನು ಅಪ್ಪಳಿಸಿತು. ಕೇದಾರನಾಥ ಕಣಿವೆಯಲ್ಲಿ ಮಾರನೇ ದಿನ ಬಿದ್ದ 340 ಮಿ.ಮೀ. ಮಳೆ ಹಿಂದಿನ ದಿನದ ಧಿಡೀರ್ ನೆರೆಗೆ ತನ್ನ ಪಾಲನ್ನೂ ನೀಡಿತು. ಭಾಗೀರಥಿ, ಅಲಕಾನಂದ, ಮಂದಾಕಿನಿ, ರಿಷಿಗಂಗಾ ಸೇರಿದಂತೆ ಎಲ್ಲ ದೊಡ್ಡ ಸಣ್ಣ ನದಿಗಳು ತಾವು ಹರಿಯುವ ದಿಕ್ಕಿನಲ್ಲಿ ಸಿಕ್ಕದ್ದನ್ನೆಲ್ಲ ಕೊಚ್ಚಿ ಒಯ್ದವು. ಈ ಹೆಮ್ಮಳೆ ಮತ್ತು ಹೆನ್ನೆರೆಗಳಿಗೆ 6,000ಕ್ಕೂ ಹೆಚ್ಚು ಜನ ಉತ್ತರಾಖಂಡ್ ರಾಜ್ಯದಲ್ಲಿ ಬಲಿಯಾದರು (ಕೇದಾರನಾಥ ದೇಗುಲವೆ ಒಂದು ಮಸಣವಾಗಿತ್ತು, ಬೀದಿಗಳಲ್ಲಿ ಜನ, ದನ, ಕುದುರೆ, ನಾಯಿಗಳ ಕಳೇಬರಗಳು ವಿಲೇವಾರಿಯಾಗದೆ ಹಲವು ದಿನಗಳವರೆಗೆ ಕೊಳೆತು ನಾರುತ್ತಿದ್ದವು). 2,052 ಮನೆಗಳೂ, 147 ಸೇತುವೆಗಳು, 1,307 ರಸ್ತೆಗಳು ನಾಶವಾದವು. ನದಿಗಳ ಪಕ್ಕ ಒತ್ತಿಕೊಂಡಂತೆ ನಿರ್ಮಿಸಿದ್ದ, ಕೊಚ್ಚಿಹೋದ ಅಕ್ರಮ ಕಟ್ಟಡಗಳ ಸಂಖ್ಯೆಯೂ ಕಮ್ಮಿಯೇನಲ್ಲ. ಲೆಕ್ಕವಿಲ್ಲದಷ್ಟು ಗುಡ್ಡಗಳು ಜರಿದು ಹೋದವು. ಭಾರತೀಯ ಸೇನೆ 1,10,000ದಷ್ಟು ಮಂದಿಯ ಜೀವ ಉಳಿಸಿತು. ಇನ್ನು ಮಣ್ಣಿನಡಿ ಹುಗಿದುಹೋದ, ನೆರೆಯಲ್ಲಿ ಕೊಚ್ಚಿಹೋದ ಸಾಕು ಹಾಗೂ ಕಾಡುಪ್ರಾಣಿಗಳ ಲೆಕ್ಕವನ್ನು ಯಾರಿಟ್ಟರೊ ಗೊತ್ತಿಲ್ಲ. 2013ರ ಮೋಡಸಿಡಿತದ ವಿಪತ್ತು ಹಿಮಾಲಯ ತೀರಾ ಅಭದ್ರ, ಅಸುರಕ್ಷಿತ ನೆಲೆ ಎಂಬುದನ್ನು ಜಗತ್ತಿಗೆ ಜಾಹೀರು ಗೊಳಿಸಿತು. ಅದರ ನೆಲದಲ್ಲಿ ಕೈಯಾಡಿಸುವುದು ತೀರಾ ಅನಾಹುತಕಾರಿ ಎಂದು ಸಾಬೀತಾಯಿತು. ನಂತರ ಯಾವುದೇ ಯೋಜನೆಗಳನ್ನು ಕಾರ್ಯಗತ ಗೊಳಿಸಲು ಹೊರಟಾಗ 2013ರ ವಿಪತ್ತನ್ನು ಉದಾಹರಣೆಯಾಗಿ ಮುಂದೆ ಮಾಡುವ ಪರಿಪಾಠ ಶುರುವಾಯಿತು. ಕೋರ್ಟುಗಳೂ ಗಂಭೀರವಾಗಿ ಆಲೋಚಿಸುವಂತಾಯಿತು. ಸರ್ಕಾರಗಳು ಮುಂಚಿನಂತೆ ಮೂಗಿಗೆ ತುಪ್ಪ ಸವರಬೇಕಾಗಿ ಬಂದಾಗ ಒಂಚೂರು ಎಚ್ಚರವಹಿಸುವ ಒತ್ತಡಕ್ಕೆ ಸಿಕ್ಕಿಕೊಂಡವು.

(ಮುಂದಿನ ಸರಣಿಯಲ್ಲಿ ಉತ್ತರಾಖಂಡ್ ನಿವಾಸಿಗಳ ನಿದ್ದೆ ಕಸಿಯುವ ಎರಡು ಪ್ರಾಜೆಕ್ಟ್‌ ಗಳು)

ಕೆ ಎಸ್‌ ರವಿಕುಮಾರ್‌

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು