Friday, June 14, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್‌ ಪರ ಗೂಢಚಾರಿಕೆ ಆರೋಪ: 8 ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕತಾರ್ ನ್ಯಾಯಾಲಯ

ಹೊಸದಿಲ್ಲಿ/ದೋಹಾ: ಇಸ್ರೇಲ್‌ಗೆ ಗೂಢಚಾರರಾಗಿ ಕೆಲಸ ಮಾಡಿದ ಆರೋಪದಲ್ಲಿ ಭಾರತದ ಎಂಟು ಮಾಜಿ ನೌಕಾಪಡೆ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯ ಮರಣದಂಡನೆ ವಿಧಿಸಿರುವ ಆಘಾತಕಾರಿ ಸುದ್ದಿಯೊಂದು ಬಂದಿದೆ. ಈ ಕುರಿತು ಗುರುವಾರ ತೀರ್ಪು ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ ತೀರ್ಪಿನಿಂದ ಆಘಾತವಾಗಿದೆ ಎಂದು ಹೇಳಿದೆ. ಈ ಬಗ್ಗೆ ಕತಾರ್ ಸರ್ಕಾರದೊಂದಿಗೆ ಮಾತನಾಡುತ್ತಿದ್ದು, ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ. ಸಚಿವಾಲಯವು ಕುಟುಂಬ ಸದಸ್ಯರು ಹಾಗೂ ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಅವರನ್ನು ಆಗಸ್ಟ್ 2022ರಂದು ಕತಾರ್ ಗುಪ್ತಚರ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದರು.

ಆರೋಪಿಗಳು ಕತಾರ್‌ನ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಸೇವೆಗಳನ್ನು ಒದಗಿಸುವ ಖಾಸಗಿ ಕಂಪನಿಯಾದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಇಸ್ರೇಲ್‌ನ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದರು ಎಂದು ಕತಾರ್ ಆರೋಪಿಸಿದೆ.

ಮತ್ತೊಂದೆಡೆ, 8 ಮಾಜಿ ಭಾರತೀಯ ನೌಕಾ ಅಧಿಕಾರಿಗಳ ಪರವಾಗಿ ಸಲ್ಲಿಸಲಾದ ಜಾಮೀನು ಕೋರಿಕೆಯನ್ನು ಕತಾರ್ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ ಅವರ ಬಂಧನವನ್ನು ಹಲವು ಬಾರಿ ವಿಸ್ತರಿಸಿತ್ತು. ಅಂತಿಮವಾಗಿ, ಕತಾರ್ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿತು.

8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು