Wednesday, August 14, 2024

ಸತ್ಯ | ನ್ಯಾಯ |ಧರ್ಮ

ಏರುತ್ತಲೇ ಇರುವ ಸಾವಿನ ಸಂಖ್ಯೆ; ಸ್ವರ್ಗದಂತಿದ್ದ ವಯನಾಡೀಗ ನರಕ ಸದೃಶ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ಸ್ವರ್ಗದಂತಿದ್ದ ಊರು ಅಕ್ಷರಶಃ ನರಕದಂತಾಗಿದೆ. ಬೆಳಿಗ್ಗೆ 2 ಗಂಟೆ ಸುಮಾರಿನಲ್ಲಿ 2 ಬಾರಿ ಭೂಕುಸಿತ ಉಂಟಾಗಿದ್ದು, 400 ಕ್ಕೂ ಹೆಚ್ಚು ಮಂದಿ ಕಣ್ಮರೆ ಎಂಬ ವರದಿಗಳು ಲಭ್ಯವಾಗಿದೆ

ಈಗಾಗಲೇ 86 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಮುಂಚೆಯೇ ವಯನಾಡ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿತ್ತು.

ಪೀಡಿತ ಪ್ರದೇಶವನ್ನು ಹತ್ತಿರದ ಪಟ್ಟಣಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆಯೂ ನಾಶವಾಗಿದ್ದರಿಂದ ಭಾರತೀಯ ಸೇನೆಯನ್ನು ಸಂಪರ್ಕಿಸಲಾಯಿತು. ಸೇನೆಯು 122 ಇನ್ಫೆಂಟ್ರಿ ಬೆಟಾಲಿಯನ್ (ಪ್ರಾದೇಶಿಕ ಸೇನೆ) ಮತ್ತು ಕಣ್ಣೂರಿನ ಡಿಎಸ್ಸಿ ಕೇಂದ್ರದ ಎರಡು ತುಕಡಿಗಳು ಸೇರಿದಂತೆ ನಾಲ್ಕು ತುಕಡಿಗಳನ್ನು ಸಜ್ಜುಗೊಳಿಸಿದೆ.

ಒಂದಿಡೀ ಊರಿಗೆ ಊರೇ ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದು ನೂರಾರು ಜನರ ಪತ್ತೆ ಕಾರ್ಯ ಭರದಿಂದ ಸಾಗಿದೆ. ಸಿಗುವ ಬಹುತೇಕ ಮಂದಿಯ ಶವಗಳೇ ಆಗಿದ್ದು, ಸಂಬಂಧಿಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಗಾಗಲೇ ರಕ್ಷಣೆಗೆ ಸರ್ಕಾರ ಹೆಚ್ಚಿನ ವ್ಯವಸ್ಥೆ ಕಲ್ಪಿಸಿದ್ದು, ಭಾರತೀಯ ಸೇನೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಶೀಘ್ರದಲ್ಲೇ ವಯನಾಡ್ ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. “ಇದು ಒಗ್ಗಟ್ಟಿನ ಗಂಟೆ. ಜನರ ಜೀವಗಳು ಸುರಕ್ಷಿತವಾಗಿರಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ರಾಜ್ಯ ಸರ್ಕಾರ ಈಗಾಗಲೇ ರಕ್ಷಣಾ ತಂಡವನ್ನು ಕಳುಹಿಸಿದೆ ಮತ್ತು ಕೇಂದ್ರ ಸರ್ಕಾರವೂ ಸಹಾಯ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು. “ಎನ್ಡಿಆರ್‌ಎಫ್ ಈ ವಿಷಯದಲ್ಲಿ ಸಂಪೂರ್ಣವಾಗಿ ಪ್ರಮುಖ ತಜ್ಞರಾಗಿರುವುದರಿಂದ ಅವರನ್ನು ಕಳುಹಿಸುವಂತೆ ನಾನು ಸಾರ್ವಜನಿಕವಾಗಿ ಪ್ರಧಾನಿಗೆ ಮನವಿ ಮಾಡಿದ್ದೆ” ಎಂದು ತರೂರ್ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page