Wednesday, July 31, 2024

ಸತ್ಯ | ನ್ಯಾಯ |ಧರ್ಮ

ವಯನಾಡು ದುರಂತ | ಸಾವಿನ ಸಂಖ್ಯೆ 150ಕ್ಕೆ ಏರಿಕೆ; ಸ್ಥಳಕ್ಕೆ ಹೊರಟಿದ್ದ ಸಚಿವೆ ವೀಣಾ ಜಾರ್ಜ್ ಕಾರು ಅಪಘಾತಕ್ಕೆ ಈಡು

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಜು.30ರಂದು ಮುಂಡಕ್ಕೈ ಎನ್ನುವಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಇದರ ಪರಿಣಾಮವಾಗಿ ಈ ಪರಿಸರದಲ್ಲಿ ಅಪಾರ ಪ್ರಾಣಹಾನಿ ಹಾಗೂ ಸೊತ್ತು ಹಾನಿ ಸಂಭವಿಸಿದೆ.

ಸದ್ಯ ಮುಂಡಕ್ಕೈ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 91 ಮಂದಿ ನಾಪತ್ತೆಯಾಗಿದ್ದು, 191 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 143 ಜನರ ಶವಪರೀಕ್ಷೆ ಪೂರ್ಣಗೊಂಡಿದೆ. ಮಂಗಳವಾರ ರಾತ್ರಿ 20 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯನ್ನು ಹಿಂತೆಗೆದುಕೊಳ್ಳಲಾಯಿತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.

48 ಸಂತ್ರಸ್ತರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸುಮಾರು 78 ಮೃತ ದೇಹಗಳನ್ನು ಮೆಪ್ಪಾಡಿ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಇನ್ನು 32 ಮಂದಿಯ ಮೃತದೇಹಗಳನ್ನು ನಿಲಂಬೂರ್ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಅವಶೇಷಗಳಡಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಾರು ಅಪಘಾತ

ಈ ನಡುವೆ ಘಟನಾ ಸ್ಥಳಕ್ಕೆ ಹೊರಟಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಇಂದು ಬೆಳಗ್ಗೆ ಮಲಪ್ಪುರಂನಲ್ಲಿ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯೊಂದಿಗೆ ವಯನಾಡಿಗೆ ತೆರಳುತ್ತಿದ್ದ ಸಚಿವರ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರನ್ನು ತಪ್ಪಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸಚಿವೆ ವೀಣಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವರಿಗೆ ಎಕ್ಸ್ ರೇ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು