Friday, November 21, 2025

ಸತ್ಯ | ನ್ಯಾಯ |ಧರ್ಮ

ಹೊರಗುತ್ತಿಗೆ ಉದ್ಯೋಗ ಸ್ಥಗಿತಕ್ಕೆ ನಿರ್ಧಾರ: ಸರಕಾರಕ್ಕೆ ಹೆಚ್ಚುವರಿ ₹10,000 ಕೋಟಿ ಹೊರೆ; ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯದ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿನ ಹೊರಗುತ್ತಿಗೆ ನೌಕರರ ನೇಮಕಾತಿ ಪದ್ಧತಿಯನ್ನು 2028ರ ಮಾರ್ಚ್‌ ತಿಂಗಳೊಳಗೆ ಸಂಪೂರ್ಣವಾಗಿ ನಿಲ್ಲಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿಯು ಮಹತ್ವದ ನಿರ್ಣಯ ಕೈಗೊಂಡಿದೆ. ಖಾಸಗಿ ಏಜೆನ್ಸಿಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಿರುವ ಹೊರಗುತ್ತಿಗೆ ಸೇವೆಯನ್ನು ಈ ಗಡುವಿನೊಳಗೆ ಹಂತ ಹಂತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

ಈ ತೀರ್ಮಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ₹10,000 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಅಂದಾಜು ಮಾಡಲಾಗಿದೆ.

3.80 ಲಕ್ಷ ನೌಕರರ ವ್ಯವಸ್ಥೆಗೆ ಕೊನೆ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯ ಸಂಪುಟ ಉಪಸಮಿತಿಯು ಈ ನಿರ್ಣಯ ಕೈಗೊಂಡಿದೆ. ಸದ್ಯ ನಾನಾ ಇಲಾಖೆಗಳು, ನಿಗಮ-ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3.80 ಲಕ್ಷ ಹೊರಗುತ್ತಿಗೆ ನೌಕರರ ವ್ಯವಸ್ಥೆಗೆ ಕೊನೆ ಹಾಡಲು ಸಮಿತಿ ಶಿಫಾರಸು ಮಾಡಿದೆ. ಈ ಸಮಿತಿಯ ನಿರ್ಣಯ ಮತ್ತು ಶಿಫಾರಸುಗಳನ್ನು ಮುಂದಿನ ವಾರ, ನವೆಂಬರ್ 27 ರಂದು ನಡೆಯಲಿರುವ ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು.

ಹೊರಗುತ್ತಿಗೆ ಸೇವೆ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸಂಪುಟ ಉಪಸಮಿತಿ ಈ ನಿರ್ಣಯ ಕೈಗೊಂಡಿದೆ. ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್ 19 ರಂದು ನೀಡಿದ ಆದೇಶದಲ್ಲಿ, ಉದ್ಯೋಗ ನೀಡುವುದು ಸಂವಿಧಾನದ ವಿಧಿ 14, 16 ಮತ್ತು 21 ರ ಅಡಿಯಲ್ಲಿ ಸರ್ಕಾರದ ಹೊಣೆಗಾರಿಕೆ ಎಂದು ಸ್ಪಷ್ಟಪಡಿಸಿತ್ತು.

ಇಂಧನ, ಆರೋಗ್ಯ, ಗಣಿ ಮತ್ತಿತರ ಇಲಾಖೆಗಳಲ್ಲಿನ ಅಪಾಯಕಾರಿ ಕೆಲಸಗಳು ಸೇರಿ ನಾನಾ ಹುದ್ದೆಗಳಿಗೆ ಕಾಯಂ ನೇಮಕವೇ ಆಗಬೇಕು. ಹೊರಗುತ್ತಿಗೆ ಅವಲಂಬನೆಯು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಕೋರ್ಟ್‌ ಹೇಳಿತ್ತು.

ಪ್ರಮುಖ ಶಿಫಾರಸುಗಳು ಮತ್ತು ಹಂತ ಹಂತದ ಜಾರಿ

ಸಂಪೂರ್ಣ ಸಮಾಪ್ತಿ: 2028ರ ಮಾರ್ಚ್‌ ಒಳಗೆ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಸೇವೆ ಪಡೆಯುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ನೇರ ನೇಮಕ: ಸಂವಿಧಾನದ ಅನುಚ್ಛೇದ 14 ಮತ್ತು 15ರ ಆಶಯಗಳು ಉಲ್ಲಂಘನೆಯಾಗದಂತೆ, ಸದ್ಯದ ಕಾನೂನು ಮತ್ತು ನಿಯಮಾವಳಿಗಳ ಮೂಲಕವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕ್ರಮವು ಪ್ರತಿಭಾವಂತ ಯುವಕರಿಗೆ ಸರ್ಕಾರಿ ಸೇವೆಗೆ ಅರ್ಹರಾಗಲು ಮತ್ತು ಮೀಸಲಾತಿ ನಿಯಮಗಳನ್ನು ಪಾಲಿಸಲು ಸಹಾಯಕವಾಗುತ್ತದೆ.

ಅಂತರದ ಅವಧಿಯ ನಿರ್ವಹಣೆ: ಖಾಲಿ ಹುದ್ದೆಗಳಿಗೆ ನೇರ ನೇಮಕ ಆಗುವವರೆಗೆ ಕಚೇರಿಗಳ ನಿರ್ವಹಣೆಗೆ ತೊಂದರೆಯಾಗದಂತೆ ಹೊರಗುತ್ತಿಗೆ ಸೇವೆಯನ್ನು ಮುಂದುವರಿಸಬೇಕು.

ಶೋಷಣೆ ತಗ್ಗಿಸಲು ವ್ಯವಸ್ಥೆ: ಈ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆಯನ್ನು ತಗ್ಗಿಸಲು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ‘ಕರ್ನಾಟಕ ಹೊರಗುತ್ತಿಗೆ ನೌಕರರ (ನಿಯಂತ್ರಣ, ನಿಯುಕ್ತಿ ಮತ್ತು ಕಲ್ಯಾಣ) ವಿಧೇಯಕ-2025’ ಅನ್ನು ರೂಪಿಸಿ, ಸಂಘವನ್ನು ಸ್ಥಾಪಿಸಿ ಮೇಲ್ವಿಚಾರಣೆ ವ್ಯವಸ್ಥೆ ಮಾಡಬೇಕು. ಈ ತಾತ್ಕಾಲಿಕ ವ್ಯವಸ್ಥೆ ನಿಗದಿತ ಕಾಲದವರೆಗೆ ಮಾತ್ರ ಮುಂದುವರಿಯಬೇಕು.

ತಕ್ಷಣದ ಆದ್ಯತೆ: ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಶುಶ್ರೂಷಕರು, ಎಸ್ಕಾಂಗಳ ಗ್ಯಾಂಗ್‌ಮನ್‌, ಚಾಲಕರು, ಗಣಿಗಾರಿಕೆ ಕಾರ್ಮಿಕರು, ಪೌರ ಕಾರ್ಮಿಕರು ಸೇರಿದಂತೆ ಅಪಾಯಕಾರಿ ಕೆಲಸಗಳಲ್ಲಿರುವ ಹೊರಗುತ್ತಿಗೆಯನ್ನು ಮೊದಲ ಹಂತದಲ್ಲಿ ಆದ್ಯತೆ ಮೇರೆಗೆ ರದ್ದುಪಡಿಸಬೇಕು. ಉಳಿದ ಹುದ್ದೆಗಳನ್ನು ಹಂತ ಹಂತವಾಗಿ ಅಂತ್ಯಗೊಳಿಸಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page