ದೆಹಲಿ: ಭಾರತದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರಿಗಿಂತ, ವಿದೇಶ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳು ಬಹಿರಂಗಪಡಿಸಿವೆ.
ಪ್ರವಾಸೋದ್ಯಮ ಸಚಿವಾಲಯದ ವರದಿಯ ಪ್ರಕಾರ, 2025 ರಲ್ಲಿ ಸುಮಾರು 3.3 ಕೋಟಿ ಭಾರತೀಯರು ವಿದೇಶ ಪ್ರವಾಸ ಕೈಗೊಂಡಿದ್ದು, ಬರೋಬ್ಬರಿ 37 ಬಿಲಿಯನ್ ಡಾಲರ್ ಮೊತ್ತವನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಕೇವಲ 2.1 ಕೋಟಿಯಾಗಿದ್ದು, ಇವರಿಂದ ದೇಶಕ್ಕೆ 32 ಬಿಲಿಯನ್ ಡಾಲರ್ ಆದಾಯ ಲಭಿಸಿದೆ. ಭಾರತೀಯರು ವಿದೇಶದಲ್ಲಿ ವ್ಯಯಿಸಿದ ಮೊತ್ತಕ್ಕೆ ಹೋಲಿಸಿದರೆ, ವಿದೇಶಿ ಪ್ರವಾಸಿಗರಿಂದ ಬಂದ ಆದಾಯವು ಸುಮಾರು 5 ಬಿಲಿಯನ್ ಡಾಲರ್ ಕಡಿಮೆಯಾಗಿದೆ.
ದೇಶದಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ಕೊರತೆಯಿಲ್ಲದಿದ್ದರೂ, ಮೂಲಭೂತ ಸೌಕರ್ಯಗಳು, ಭೌಗೋಳಿಕ ವ್ಯಾಪ್ತಿ ಮತ್ತು ಆತಿಥ್ಯ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಮಾರ್ಗದರ್ಶಿ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲು ಸಚಿವಾಲಯ ಮುಂದಾಗಿದೆ.
ಇನ್ನೊಂದೆಡೆ ದೇಶೀಯ ಪ್ರವಾಸೋದ್ಯಮದಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. 2025 ರಲ್ಲಿ 434 ಕೋಟಿ ಭಾರತೀಯ ಪ್ರವಾಸಿಗರು ದೇಶದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಪ್ರಸಿದ್ಧವಲ್ಲದ ಹಾಗೂ ಪರ್ಯಾಯ ಪ್ರವಾಸಿ ತಾಣಗಳನ್ನು ಪ್ರಚಾರ ಮಾಡಲು ‘ದೇಖೋ ಅಪ್ನಾ ದೇಶ್ 2.0’ ಅಭಿಯಾನವನ್ನು ತೀವ್ರಗೊಳಿಸಲಾಗಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆಯೂ ಗಣನೀಯವಾಗಿ ವಿಸ್ತರಣೆಯಾಗಿದೆ.
