Sunday, July 27, 2025

ಸತ್ಯ | ನ್ಯಾಯ |ಧರ್ಮ

ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ; ಪೊಲೀಸ್ ಬಂದೋಬಸ್ತ್

ದೆಹಲಿಯ ಜಂತರ್ ಮಂಥರ್ ನಲ್ಲಿ ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿಭಟನೆ ಕಾರಣವಾಗಿ ನಿನ್ನೆ ದೆಹಲಿಗೆ ತೆರಳುತ್ತಿದ್ದ ಭಾರತೀಯ ಕಿಸಾನ್ ಯೂನಿಯನ್ ವಕ್ತಾರರಾದ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಕೇಶ್ ಟಿಕಾಯತ್ ಬಂಧನದ ಹಿನ್ನೆಲೆಯಲ್ಲಿ ‘ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆದರಿಕೆಗೆ ರೈತರು ಹೆದರುವುದಿಲ್ಲ. ಸರ್ಕಾರಕ್ಕೆ ರೈತರ ಪ್ರತಿಭಟನೆ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಈ ಬಂಧನ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದೆ. ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರಿಯಲಿದೆ. ನಾವು ನಿಲ್ಲುವುದಿಲ್ಲ, ನಾವು ದಣಿದಿಲ್ಲ, ನಾವು ತಲೆಬಾಗುವುದಿಲ್ಲ.’ ಎಂದು ಟಿಕಾಯತ್ ಟ್ವಿಟ್ ನಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ದೇಶದಲ್ಲಿ ವ್ಯಾಪಕವಾಗಿ ತಲೆದೋರಿರುವ ನಿರುದ್ಯೋಗ ಸಮಸ್ಯೆ ವಿಚಾರವಾಗಿ ರೈತ ಸಂಘಟನೆಗಳು ‘ಮಹಾಪಂಚಾಯತ್’ ಹೆಸರಿನಲ್ಲಿ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಗಡಿ ಭಾಗ ಘಾಜಿಯಾಬಾದ್ ನ ಘಾಜಿಪುರ ಗಡಿಯನ್ನು ಒಳಗೊಂಡಂತೆ ರೈತ ಪ್ರತಿಭಟನಾಕಾರರು ಹಾದುಹೋಗಲಿದ್ದಾರೆ. ಆ ಕಾರಣವಾಗಿ ದೆಹಲಿ ಪೊಲೀಸರು ದೆಹಲಿ- ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಬಂದೋಬಸ್ತ್ ಮಾಡಿದ್ದಾರೆ.

ಈಗಾಗಲೇ ಪೊಲೀಸರು ದೆಹಲಿ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿರುವ ಹಿನ್ನೆಲೆಯಲ್ಲಿ ದೆಹಲಿ ಸುತ್ತಲಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸಂಚಾರ ದಟ್ಟಣೆ ತೀವ್ರವಾಗಿದೆ. ಪ್ರಮುಖವಾಗಿ ಸಿಂಗು ಬಾರ್ಡರ್, ಘಾಜಿಪುರ ಬಾರ್ಡರ್ ಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಭಾಗದಿಂದ ಹೆಚ್ಚು ರೈತರು ಆಗಮಿಸುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page