Home ಜನ-ಗಣ-ಮನ ಇತಿಹಾಸ ಮೈಸೂರು ಮಹಿಷಾಸುರನಿಗೆ ಬಂಗಾಳದಲ್ಲಿ ದೈವಪೂಜೆ

ಮೈಸೂರು ಮಹಿಷಾಸುರನಿಗೆ ಬಂಗಾಳದಲ್ಲಿ ದೈವಪೂಜೆ

0

ಪಶ್ಚಿಮ ಬಂಗಾಳ, ದಸರೆಯನ್ನು ವಿಶೇಷವಾಗಿ ಆಚರಿಸಲ್ಪಡುವ ಒಂದು ರಾಜ್ಯ. ಪ್ರತಿ ವರ್ಷ ಇಡೀ ಪಶ್ಚಿಮ ಬಂಗಾಳ ರಾಜ್ಯವು, ವಿಶೇಷವಾಗಿ ಕಲ್ಕತ್ತಾ, ಮಹಿಷಾಸುರ ಸಂಹಾರಿಣಿ ದುರ್ಗೆಯ ಆರಾಧನೆಗೆ ಹೆಸರುವಾಸಿ. ಇಡೀ ರಾಜ್ಯಕ್ಕೆ ರಾಜ್ಯವೇ ದಸರಾ ಆಚರಣೆ ಮೂಲಕ ದುರ್ಗೆಯ ಮೂರ್ತಿಗಳನ್ನು ಅಲಂಕರಿಸಿ, ಬೀದಿ ಬೀದಿಗಳನ್ನು ದೀಪಗಳನ್ನು ಬೆಳಗಿಸಿ ಆಚರಿಸುತ್ತಿರುವಾಗ, ಪೂರ್ವ ಭಾರತದಲ್ಲಿನ ಬುಡಕಟ್ಟು ಸಮುದಾಯವು ತಮ್ಮ ಮೂಲಪುರುಷ ರಾಜನ ಮರಣವನ್ನು ನೆನೆದು ಶೋಕಿಸುತ್ತಿರುತ್ತದೆ ಹಾಗೂ ಈ ಆಚರಣೆ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಎಲ್ಲರೂ ದುರ್ಗೆಯನ್ನು ಆರಾಧಿಸಿ, ದುರ್ಗೆ ಮತ್ತು ಅವಳ ಮಕ್ಕಳನ್ನು ಮನೆಗೆ ಸ್ವಾಗತಿಸುವ ಮೂಲಕ ವೈಭವದಿಂದ ಆಚರಿಸುತ್ತಾರೆ. ಬಂಗಾಳದಲ್ಲಿ ಹತ್ತು ದಿನಗಳ ವಾರ್ಷಿಕ ಹಬ್ಬವಾದ ದುರ್ಗಾ ಪೂಜೆಯ ಸಮಯದಲ್ಲಿ ಅಲ್ಲಿನ ಜನ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಆನಂದಿಸಿ, ನಗರವು ದೈವಿಕ ಸ್ತ್ರೀತ್ವವನ್ನು ಆಚರಿಸಲು ಒಟ್ಟಿಗೆ ಸೇರುತ್ತಾರೆ.

ಆದರೆ ಅದೇ ಸಮಯದಲ್ಲಿ, ತಮ್ಮನ್ನು ಅಸುರರು ಮತ್ತು ಈ ನೆಲದ ಮೂಲನಿವಾಸಿಗಳು ಎಂದು ಗುರುತಿಸಿಕೊಳ್ಳುವ ಬುಡಕಟ್ಟು ಸಮುದಾಯವು, ‘ಆರ್ಯ ದೇವರುಗಳಿಂದ ನಿರ್ದಯವಾಗಿ ಕೊಲ್ಲಲ್ಪಟ್ಟ’ ತಮ್ಮ ಬುಡಕಟ್ಟು ರಾಜನ ಹುತಾತ್ಮ ಆತ್ಮಕ್ಕೆ ಶೋಕಿಸಲು ಸ್ವತಃ ತಮ್ಮನ್ನು ತಾವು ಗೃಹಬಂಧನಕ್ಕೆ ಒಳಪಡುತ್ತಾರೆ. ಮಹಾಲಯ ಅಮಾವಾಸ್ಯೆ ಕೂಡ ಈ ನೆಲದ ಮೂಲಪುರುಷರನ್ನು ನೆನೆಯುವ ಸಾಂಕೇತಿಕ ವಿಶೇಷತೆಯನ್ನು ಪಡೆದ ಹಿನ್ನೆಲೆಯಲ್ಲಿ ಆ ನಂತರದ ದಸರೆಯ 10 ದಿನವನ್ನೂ ಈ ಜನರು ಶೋಕದಿಂದಲೇ ಕಳೆಯುತ್ತಾರೆ ಎಂಬುದನ್ನು ಎಲ್ಲರೂ ನಂಬಲೇಬೇಕು.

ಭಾರತೀಯ ಪೌರಾಣಿಕ ಹಿನ್ನೆಲೆಲ್ಲಿ ಸುರ ಮತ್ತು ಅಸುರರ ಕಾಳಗ ಅಥವಾ ಸೈದ್ಧಾಂತಿಕ ಸಂಘರ್ಷವನ್ನು ನೋಡಿದರೆ ಸುರರೆಂದು ಕರೆಸಿಕೊಳ್ಳುವ ದೇವತೆಗಳು ಇಲ್ಲಿಯವರೆಗೆ ಯಾವ ಅಸುರ ಅಥವಾ ರಾಕ್ಷಸರನ್ನು ನೇರವಾಗಿ ಮಣಿಸಿದ ಉದಾಹರಣೆ ಸಿಗಲಾರದು. ಹಾಗಾಗಿ ಪುರಾಣದ ಆವೃತ್ತಿಯ ಪ್ರಕಾರ ಬುಡಕಟ್ಟು ರಾಜ ಮಹಿಷಾಸುರನು ದುರ್ಗೆಯಿಂದ ವಂಚನೆಗೊಳಗಾಗುತ್ತಾನೆ. ಆನಂತರ ದೇವತೆಗಳ ಗುಂಪು ಮಹಿಷಾಸುರನನ್ನು ವಂಚನೆಯಿಂದ ಸಾಯಿಸಲ್ಪಡುತ್ತದೆ. ಹಾಗಾಗಿ ಈ ಭಾಗದಲ್ಲಿ ಅಸುರರೆಂದು ಗುರುತಿಸಿಕೊಂಡಿರುವ ಸಮುದಾಯವು ಮಹಿಷಾಸುರನ ಮರಣದ ಶೋಕಕ್ಕಾಗಿ ಹಿಂದೂ ಕ್ಯಾಲೆಂಡರಿನ ಅಶ್ವಿನಿ ನಕ್ಷತ್ರದ ಹುಣ್ಣಿಮೆಯ ರಾತ್ರಿಯಲ್ಲಿ ಒಟ್ಟುಗೂಡುತ್ತದೆ.

ಇಲ್ಲಿ ಅಸುರ ಪೂಜೆಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಅದರಲ್ಲಿ ಫಾಗುನ್ ಅಂದರೆ ಮಾರ್ಚ್ ತಿಂಗಳಲ್ಲಿ ಒಂದು ಬಾರಿ ಮತ್ತು ಮತ್ತೊಮ್ಮೆ ಅಶ್ವಿನಿ ತಿಂಗಳಲ್ಲಿ. ಇದು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬರುತ್ತದೆ. ಇದು ದುರ್ಗಾ ಪೂಜೆಯ ಹತ್ತನೇ ದಿನ ಅಂದರೆ ದಸರಾ ಆಚರಣೆಯ ಕೊನೆಯ ದಿನ ವಿಜಯದಶಮಿಯಂದು ಆಚರಿಸಲ್ಪಡುತ್ತದೆ. ಇಲ್ಲಿ ಅಸುರ ಪೂಜೆಯ ಸಂಪ್ರದಾಯವು ಬಂಗಾಳದ ಹಲವಾರು ಇತರ ಬುಡಕಟ್ಟು ಸಮುದಾಯ ಇರುವ ಹಳ್ಳಿಗಳಿಗೆ ಹರಡಿದೆ. ಅವರು ದಸರೆಯನ್ನು ‘ಹುದುರ್ ದುರ್ಗ’ ಎಂಬ ಹೆಸರಿನಿಂದಲೂ ಆಚರಿಸುತ್ತಾರೆ.

ಬುಡಕಟ್ಟು ಮತ್ತು ದಲಿತ ಸಮುದಾಯಗಳಾದ ಬಗ್ದಿ, ಸಂತಾಲಿಗಳು, ಮುಂಡಾಗಳು ಮತ್ತು ನಾಮಸೂದ್ರರು ಸಹ ಮಹಿಷಾಸುರನ ಬಲಿದಾನದ ಶೋಕವನ್ನು ಆಚರಿಸಲು ಭಾಗವಹಿಸುತ್ತಾರೆ. “ಒಂಬತ್ತು ದಿನಗಳ ದುರ್ಗಾ ಪೂಜೆಯ ಸಮಯದಲ್ಲಿ, ನಾವು ಹಗಲಿನಲ್ಲಿ ಹೆಚ್ಚು ಕೆಲಸ ಮಾಡೋದಿಲ್ಲ. ನಾವು ಪ್ರಾರ್ಥನೆ ಸಲ್ಲಿಸಲು ರಾತ್ರಿಯಲ್ಲಿ ಮಾತ್ರ ಹೊರಬರುತ್ತೇವೆ ಮತ್ತು ಒಂಬತ್ತನೇ ದಿನದ ಕೊನೆಯಲ್ಲಿ, ನಮ್ಮ ಉಳಿವಿಗಾಗಿ ನಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ಪುರುಷರು ಪೂಜೆಗಳನ್ನು ಸಲ್ಲಿಸುತ್ತಾರೆ. ಅದರ ನಂತರ ಮಹಿಳೆಯರು ಈ ದಿನದ ಆಚರಣೆ ವೀಕ್ಷಿಸಲು ಸೇರುತ್ತಾರೆ” ಎಂದು ಪುರುಲಿಯಾದಲ್ಲಿನ ವಿದ್ಯಾರ್ಥಿ ಶ್ಯಾಮ ಅಸುರ್ ಹೇಳುತ್ತಾರೆ.

ಸ್ಮಾರಕ ಕಾರ್ಯಕ್ರಮಗಳಲ್ಲಿ ಹುದುರ್ ದುರ್ಗದ ಪ್ರತಿಮೆಗಳನ್ನು ಸ್ಥಾಪಿಸಿ, ಈ ಸಮುದಾಯಗಳಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಖಂಡಿಸುವ ಹಾಡುಗಳು, ಸಾಂಪ್ರದಾಯಿಕ ನೃತ್ಯಗಳು ಮತ್ತು ಕರಕುಶಲಗಳನ್ನು ಸಾಮಾನ್ಯವಾಗಿ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮೂಲನಿವಾಸಿ ರಾಜನಿಗೆ ಗೌರವ ಸಲ್ಲಿಸಲು ಬಹಳ ದೂರ ಪ್ರಯಾಣಿಸುತ್ತಾರೆ ಮತ್ತು ಮುಖ್ಯವಾಹಿನಿಯಿಂದ ಅಂತರ್ಗತವಾದ ತಮ್ಮ ಇತಿಹಾಸವನ್ನು ಎಲ್ಲೆಡೆ ಪಸರಿಸಲು ಶ್ರಮಿಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ, ಅಸುರ ಪೂಜೆಯು ದಲಿತ-ಬಹುಜನ ಪ್ರವಚನದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ದಲಿತ ಮತ್ತು ಬುಡಕಟ್ಟು ಆದಿವಾಸಿ ಸಮುದಾಯದ ಜನರು ದುರ್ಗಾ ಪೂಜೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಮತ್ತು ಅವರ ನಿರ್ಲಕ್ಷಿಸಲ್ಪಟ್ಟ ಗುರುತುಗಳನ್ನು ಮರಳಿ ಪಡೆಯಲು ಇದು ಒಂದು ಮಾರ್ಗವಾಗಿದೆ ಎಂದು ಹೇಳುತ್ತಾರೆ. 2016 ರಲ್ಲಿ, ಸಾಮಾಜಿಕ ಕಾರ್ಯಕರ್ತೆ ಸುಷ್ಮಾ ಅಸುರ್ ಎಂಬ ಹೆಣ್ಣು ಮಗಳು ಜಾರ್ಖಂಡ್‌ನ ಇತರ 10 ಜನರೊಂದಿಗೆ ತಮ್ಮ ಸಮುದಾಯಗಳ ಮೂಲದ ಬಗ್ಗೆ, ಇತಿಹಾಸದ ಹಿನ್ನೆಲೆ ಬಗ್ಗೆ ಜಾಗೃತಿ ಮೂಡಿಸಲು ಕೋಲ್ಕತ್ತಾದ ಬೀದಿಗಳಿಗೆ ಇಳಿದರು. “ನಾನು ಪಂಡಲ್‌ಗಳ (ದುರ್ಗೆ ಆರಾಧನೆಯ ಸ್ಥಳ) ಒಳಗೆ ಹೋಗುವುದಿಲ್ಲ. ಇದು ನಮಗೆ ಶೋಕದ ಸಮಯ. ಹಿಂದಿನ ದಿನಗಳಲ್ಲಿ, ನಾವು ಜಮೀನ್ದಾರರಿಗೆ ಅವರ ಪೂಜೆ ಸಿದ್ಧತೆಗಳಿಗೆ ಸಹಾಯ ಮಾಡುತ್ತಿದ್ದೆವು. ಆದರೆ ಆಚರಣೆಗಳ ಬಗ್ಗೆ ಅರಿವಿಗೆ ಬಂದ ನಂತರ ಅದರಿಂದ ಹೊರ ಬಂದಿದ್ದೇವೆ” ಎಂದು ಹೇಳುತ್ತಾರೆ.

2016 ರಲ್ಲಿ ದೆಹಲಿಯ JNU ನಲ್ಲಿ ನಡೆದ ವಿವಾದದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಈ ಆಚರಣೆ ಬಗ್ಗೆ ಪ್ರಸ್ತಾಪಿಸುತ್ತಾರೆ. ಆ ನಂತರದ ದಿನಗಳಿಂದ ಮಹಿಷಾಸುರರ ಹುತಾತ್ಮ ಆಚರಣೆಯ ದಿನವು ವ್ಯಾಪಕವಾಗಿ ಬೆಳಕಿಗೆ ಬಂದಿತು. ಸಾಂಪ್ರದಾಯಿಕವಾಗಿ, ದುರ್ಗಾ ಪೂಜೆ ಆಚರಣೆಗಳು ಸವರ್ಣೀಯರಿಗೆ ಸಂಬಂಧಿಸಿದ್ದಾಗಿದೆ. ಸ್ವಾತಂತ್ರ್ಯ ಪೂರ್ವ ಬಂಗಾಳದಲ್ಲಿ ದಸರಾ ಆಚರಣೆ ಜಮೀನ್ದಾರ ಕುಟುಂಬಗಳಿಗೆ ಹೆಚ್ಚಾಗಿ ಸೀಮಿತವಾಗಿತ್ತು.

18 ನೇ ಶತಮಾನದಲ್ಲಿ, 12 ಜನರು ಹೂಗ್ಲಿಯಲ್ಲಿ ಮೊದಲ ಬಾರಿಗೆ ಸಮುದಾಯ ಪೂಜೆಯನ್ನು (ಬರೋಯಾರಿ ಪೂಜೆ ಎಂದು ಕರೆಯಲಾಗುತ್ತದೆ) ಆಯೋಜಿಸುವ ಮೂಲಕ ಹಬ್ಬವನ್ನು ಸಾರ್ವಜನಿಕ ಆಚರಣೆಗೆ ತಂದರು. ಈ ಮೂಲಕ ದುರ್ಗಾ ಪೂಜೆಗೆ ತಿರುಗಿ ಇದಕ್ಕೊಂದು ಸಾಂಸ್ಕೃತಿಕ ಸಂಭ್ರಮ ಹುಟ್ಟಿಕೊಂಡಿತು. ಕೊಲ್ಕತ್ತಾದಲ್ಲಿ 2500-3000 ಸಮುದಾಯಗಳು ಈ ಪೂಜೆಯನ್ನು ಬಂಗಾಳಿಗರು ನಡೆಸಲಾಗುತ್ತಾರೆ. ಈಗಂತೂ ಈ ಆಚರಣೆ ಪ್ರತಿಷ್ಠೆಯ ಭಾಗವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸಾಂಸ್ಕೃತಿಕ ವಿಜೃಂಭಣೆಯ ಆಯವ್ಯಯವು ಸ್ಪರ್ಧೆಯ ಮಟ್ಟಕ್ಕೆ ತಿರುಗಿ ಎಷ್ಟು ತೀವ್ರವಾಗಿದೆಯೆಂದರೆ, ಈ ವರ್ಷ ಬಂಗಾಳದ ಒಂದು ಪೂಜಾ ಸಮಿತಿಯು ಸುಮಾರು 1 ಕೋಟಿ ರೂಪಾಯಿ ಮೌಲ್ಯದ 50 ಕೆಜಿ ಚಿನ್ನದಿಂದ ಮಾಡಿದ ದುರ್ಗಾ ಮೂರ್ತಿಗೆ ಪೂಜೆ ಸಲ್ಲಿಸುತ್ತಿದೆ.

ಇನ್ನು ಕೋಲ್ಕತ್ತಾದಲ್ಲಿ ಮಹಿಷಾಸುರನ ಹುತಾತ್ಮತೆಯನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಸಾಂಪ್ರದಾಯಿಕ ಬುದ್ಧಿವಂತಿಕೆಗಳು ಹೇಳಬಹುದು. ಆದರೆ ಅಸುರ ಸಮುದಾಯದ ಕಾರ್ಯಕರ್ತರು, ಮಹಿಷಾಸುರನ ಮೂಲನಿವಾಸಿ ಸಮುದಾಯದವರು ಎಂದು ಕರೆಯಲ್ಪಡುವ ಮಂದಿ ಇದನ್ನು ಬೇರೆ ರೀತಿಯಲ್ಲೇ ನಂಬಿದ್ದಾರೆ. “ನಾವು ನಮ್ಮ ಇತಿಹಾಸದ ಬಗ್ಗೆ ಜನರಿಗೆ ಹೇಳಬೇಕು. ನಾವು ಅವರಿಗೆ ಕಥೆಯ ಇನ್ನೊಂದು ಬದಿಯನ್ನು ಪರಿಚಯಿಸಬೇಕು. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಮತ್ತು ನಮ್ಮ ಮೂಲ ಪುರುಷರಿಗೆ ಆದ ಅನ್ಯಾಯವನ್ನು ಹೇಳಬೇಕು” ಎಂದು ಜಲ್ಪೈಗುರಿಯ ಅಸೂರ್ ಸಮುದಾಯದ ನಾಯಕ ಬರ್ಗಿ ಅಸುರ್ ಹೇಳುತ್ತಾರೆ.

ಕರ್ನಾಟಕದಲ್ಲೂ ಸಹ ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ‘ಮಹಿಷ ದಸರಾ’ ವನ್ನು ಆಚರಿಸಿದ್ದನ್ನು ನೆನೆಯಬಹುದು. ದಲಿತ ಸಂಘಟನೆಗಳ ಒಕ್ಕೂಟಗಳು ಸೇರಿ ಮಹಿಷಾಸುರನನ್ನು ನೆನೆದು ದಸರಾ ಆಚರಣೆ ಮಾಡಿದ್ದರು. ಆದರೆ ಈ ಬಾರಿ ಸರ್ಕಾರದ ಕಡೆಯಿಂದಲೇ ‘ಮಹಿಷ ದಸರಾ’ ನಿಶೇಧಿಸಲ್ಪಟ್ಟಿದೆ.

You cannot copy content of this page

Exit mobile version