Monday, June 17, 2024

ಸತ್ಯ | ನ್ಯಾಯ |ಧರ್ಮ

ನಾಳೆ ರೈತರಿಂದ ಮತ್ತೆ ‘ದೆಹಲಿ ಚಲೋ’: ರೈತರನ್ನು ತಡೆಯಲು ಮೋದಿ ಸರ್ಕಾರದಿಂದ ಕಾಂಕ್ರಿಟ್ ಗೋಡೆ

ನವದೆಹಲಿ: ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರುವರಿ 13ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಸಿಂಘು, ಘಾಜಿಪುರ್‌ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಕಾಂಕ್ರೀಟ್‌ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಸಂಚಾರ ನಿರ್ಬಂಧಿಸಿ, ಭದ್ರತೆಯನ್ನು ಹೆಚ್ಚಿಸಲಾಗಿದೆ.


ಪ್ರತಿಭಟನಾಕಾರರು ಬರುವ ವಾಹನಗಳು ನಗರವನ್ನು ಪ್ರವೇಶಿಸದಂತೆ ತಡೆಯಲು ಕಾಂಕ್ರಿಟ್‌ ತಡೆಗೋಡೆ ಮತ್ತು ಕಬ್ಬಿಣದ ಮೊಳೆಗಳನ್ನು ರಸ್ತೆಗಳಲ್ಲಿ ಅಳವಡಿಸಲಾಗಿದೆ. ಇಂದಿನಿಂದಲೇ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.


ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ಹಲವು ಬೇಡಿಕಗಳ ಈಡೇರಿಕೆಗೆ ಒತ್ತಾಯಿಸಿ, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ ‘ದೆಹಲಿ ಚಲೊ’ಗೆ ಕರೆ ನೀಡಿವೆ. ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.


ದೆಹಲಿ ಪೊಲೀಸ್‌ ಕಮಿಷನರ್‌ ಸಂಜಯ್‌ ಅರೋರಾ ಅವರು, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗಿನ ನಗರದ ಗಡಿ ಪ್ರದೇಶಗಳಿಗೆ ಭಾನುವಾರವೇ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು.


ಈಗಾಗಲೇ ಬಿಡುಗಡೆ ಮಾಡಲಾಗಿರುವ ಸಂಚಾರ ಮಾರ್ಗಸೂಚಿ ಪ್ರಕಾರ, ಸಿಂಘು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರದ ಮೇಲೆ ಸೋಮವಾರದಿಂದಲೇ ನಿರ್ಬಂಧ ಹೇರಲಾಗಿದೆ. ಸುಮಾರು 5,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಸ್ತೆ ಬಂದ್‌ ಮಾಡುವುದಕ್ಕೆ ದೊಡ್ಡದೊಡ್ಡ ಕಂಟೇನರ್‌ಗಳನ್ನು ಮತ್ತು ಕಾಂಕ್ರಿಟ್‌ ತಡೆಗೋಡೆಗಳನ್ನು ಕ್ರೇನ್‌ಗಳ ಮೂಲಕ ಸಾಗಿಸಲಾಗುತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು