ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿರುವ ಪ್ರತಿಭಟನೆ ಎರಡನೇ ದಿನವಾದ ಭಾನುವಾರವೂ ರಾಷ್ಟ್ರರಾಜಧಾನಿಯಲ್ಲಿ ತೀವ್ರಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶಗಳನ್ನೂ ಲೆಕ್ಕಿಸದೆ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ಎಳೆದೊಯ್ದು 200ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಜಧಾನಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಎಸ್ಎಫ್ಐ (SFI), ಐಸಾ (AISA), ಕ್ರಾಂತಿಕಾರಿ ಯುವ ಸಂಘಟನ್ (KYS) ಮುಂತಾದ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಿಜೆಪಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದು ಜಂತರ್ ಮಂತರ್ ಕಡೆಗೆ ನುಗ್ಗಲು ಯತ್ನಿಸಿದರು.
ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ರಾಜೀವ್ ಚೌಕ್ ಸಮೀಪದ ಕನ್ನಾಟ್ ಪ್ಲೇಸ್ ಇನ್ನರ್ ಸರ್ಕಲ್ಗೆ ತಲುಪುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದರು. ಹಲವು ಪ್ರತಿಭಟನಾಕಾರರನ್ನು ನಿರ್ದಯವಾಗಿ ರಸ್ತೆಯುದ್ದಕ್ಕೂ ಎಳೆದೊಯ್ದು ಪೊಲೀಸ್ ಬಸ್ಗಳಿಗೆ ತುರುಕಲಾಯಿತು. ಆರ್ಕೆ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಮೂಲಕ ಬರುತ್ತಿದ್ದ ಸುಮಾರು 40 ಮಂದಿಯನ್ನು ತಡೆದು ವಶಕ್ಕೆ ಪಡೆಯಲಾಯಿತು. ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ನಂಗ್ಲೋಯ್ನ ಸೂರಜ್ಮಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಸ್ಎಫ್ಐ ಆರೋಪಿಸಿದೆ. ಇದೇ ವೇಳೆ, ವಿಜಯ್ ಚೌಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಐಸಾ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಬಂಧಿಸಿದರು.
ಸಂಸದ ಜಾನ್ ಬ್ರಿಟ್ಟಾಸ್ ಮೇಲೆ ಹಲ್ಲೆ ಆರೋಪ:
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಈ ಘಟನೆಯಲ್ಲಿ ಸಂಸದರು ಗಂಭೀರವಾಗಿ ಗಾಯಗೊಂಡಿದ್ದು, “ದೆಹಲಿ ಪೊಲೀಸರು ಎಲ್ಲಾ ಮಿತಿಗಳನ್ನೂ ಮೀರಿದ್ದಾರೆ” ಎಂದು ಸಿಪಿಐ(ಎಂ) ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆಕ್ರೋಶ ಹೊರಹಾಕಿದೆ.
