Home ಇನ್ನಷ್ಟು ಕೋರ್ಟು - ಕಾನೂನು ಜಂತರ್ ಮಂತರ್ ಹಲ್ಲೆ, ಪೋಕ್ಸೋ ಪ್ರಕರಣ: ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಜಂತರ್ ಮಂತರ್ ಹಲ್ಲೆ, ಪೋಕ್ಸೋ ಪ್ರಕರಣ: ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ

0

ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಹೋರಾಟಗಾರ್ತಿಯ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್ ಅವರನ್ನು ದೆಹಲಿ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಸೆಪ್ಟೆಂಬರ್ 21ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಜೂನ್ 23ರಂದು ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಜಯ್ ಕುಮಾರ್ ಎಂಬುವವರ ತಲೆ ಒಡೆದಿದ್ದಾಗಿ ಸ್ವತಂತ್ರ ಭಾರದ್ವಾಜ್ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡ ವಿಡಿಯೋ ವೈರಲ್ ಆಗಿತ್ತು. “ನಾನು ಆತನ ತಲೆ ಒಡೆದೆ; ಆ ಕೃತ್ಯಕ್ಕೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅನ್ವಯಿಸುತ್ತದೆ ಎಂದು ತಿಳಿದಿದೆಯೇ? ಆತನಿಗೆ 60 ಹೊಲಿಗೆಗಳು ಬಿದ್ದವು. ರಾಜಕೀಯ ಪ್ರಭಾವದಿಂದ ನಾನು ಬಂಧನದಿಂದ ಬಚಾವಾದೆ” ಎಂದು ಆತ ಹೇಳಿಕೊಂಡಿದ್ದ.

ಈ ಹೇಳಿಕೆ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಹಾಗೂ ಸಿಜೆಪಿ ಮುಖಂಡರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿ ಬಂಧನಕ್ಕೆ ಆಗ್ರಹಿಸಿದ ಬೆನ್ನಲ್ಲೇ, ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ದೆಹಲಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು.

ಒಂದು ದಿನದ ಪೊಲೀಸ್ ಕಸ್ಟಡಿ ಮುಗಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೆರ್ ಅವರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಈ ಹಲ್ಲೆ ಪ್ರಕರಣದಲ್ಲಿ ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಜೀವ ಬೆದರಿಕೆಯ ಕಲಮುಗಳನ್ನು ದಾಖಲಿಸಲಾಗಿದೆ.

ಮತ್ತೊಂದೆಡೆ, ತಂದೆಯ ಮೇಲಿನ ಹಲ್ಲೆಯನ್ನು ಖಂಡಿಸಿ ದೂರು ನೀಡಿದ್ದ ಅಪ್ರಾಪ್ತ ವಿದ್ಯಾರ್ಥಿ ಹೋರಾಟಗಾರ್ತಿಯ ಮೇಲೆ ಆನ್‌ಲೈನ್ ಮೂಲಕ ಅತ್ಯಾಚಾರ ಬೆದರಿಕೆ, ನಿಂದನೆ ಹಾಗೂ ತಿರುಚಿದ (Morphed) ಅಶ್ಲೀಲ ಚಿತ್ರಗಳನ್ನು ಹರಡಿದ ಆರೋಪದ ಮೇಲೆ ಭಾರದ್ವಾಜ್ ವಿರುದ್ಧ ಪೋಕ್ಸೋ (POCSO) ಕಾಯ್ದೆ, ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಸೆಕ್ಷನ್ 67 ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಕ್ರಿಮಿನಲ್ ಬೆದರಿಕೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಅಡಿಯಲ್ಲಿ ಮತ್ತೊಂದು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.

You cannot copy content of this page

Exit mobile version